ಬೆಂಗಳೂರು: ವರುಣನ ಆರ್ಭಟಕ್ಕೆ ನಿನ್ನೆ ರಾಜಧಾನಿಯ ನಿವಾಸಿಗರು ತತ್ತರಿಸಿಹೋಗಿದ್ದಾರೆ. ಸಿಡಿಲು, ಗುಡುಗು ಸಹಿತ ಸುರಿದ ಮಳೆಗೆ ಬೆಂಗಳೂರಿನಲ್ಲಿ ಕೋಲಾಹಲ ಉಂಟಾಗಿದೆ. ಅನೇಕ ಸ್ಥಳಗಳಲ್ಲಿ ಮರಗಳಿಗೆ ಸಿಡಿಲು ಬಡಿದ ಘಟನೆ ಸಂಭವಿಸಿದೆ. ಹಾಗೂ ಮರಗಳು, ವಿದ್ಯತ್ ಕಂಬಗಳು ಉರುಳಿ ಹಾನಿ ಉಂಟುಮಾಡಿದೆ. ಅಲ್ಲದೆ, ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರ ವಾಸ್ತವ್ಯಕ್ಕೆ ಸಮಸ್ಯೆಯಾಗಿದೆ.
ಬೆಂಗಳೂರಿನ ಉತ್ತರ ಭಾಗದಲ್ಲಿರುವ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನಲ್ಲಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಉಂಟಾಗಿಲ್ಲ. ಆದರೆ, ಬೆಸ್ಕಾಂ ವ್ಯಾಪ್ತಿಯಲ್ಲಿರುವ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಒಂದೇ ದಿನದಲ್ಲಿ ಒಟ್ಟು 170 ವಿದ್ಯತ್ ಕಂಬಗಳಿಗೆ ಹಾನಿ ಉಂಟಾಗಿರುವುದು ದುಃಖಕರ ಸಂಗತಿ. ಜಯನಗರ, ವೈಟ್‌ಫೀಲ್ಡ್, ರಾಮನಗರ, ಕನಕಪುರ, ಚೆಂದಾಪುರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಡುಗು, ಸಿಡಿಲು ಹಾಗೂ ಮಳೆಯ ಆರ್ಭಟಕ್ಕೆ ನಗರದಲ್ಲಿ ಅನೇಕ ಮರಗಳು ನೆಲಸಮಾವಾಗಿವೆ. ಪ್ರಶಾಂತ್ ನಗರ, ಶ್ರೀರಾಂಪುರ, ಲಿಂಕ್ ರೋಡ್, ಸೇರಿ ಹಲವೆಡೆ ಮರಗಳು ನೆಲಕ್ಕುರುಳಿದ ಕಾರಣದಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕೆ.ಜಿ. ರೋಡ್ ಗಾಂಧಿನಗರದಲ್ಲಿ ಬೃಹತ್ ಮರ ಧರೆಗೆ ಬಿದ್ದಿದ್ದು ಸಂಚಾರ ಡೈವರ್ಟ್ ಮಾಡಲಾಗಿತ್ತು. ಈಗ ಆ ಮರವನ್ನು ಕ್ಲಿಯರ್ ಮಾಡಿ ಅದೇ ರಸೆಯಲ್ಲಿ ವಾಹನಗಳು ಸಂಚರಿಸುವಂತೆ ಮಾಡಲಾಗಿದೆ. ಒಂದೇ ರಾತ್ರಿಯಲ್ಲೆ ಸುಮಾರು 8 ಮರಗಳು ನೆಲಕ್ಕೆ ಉರುಳಿದ ವರದಿಯಾಗಿದೆ.
ಭಾರಿ ಪ್ರಮಾಣದಲ್ಲಿ ಸುರಿದ ಮಳೆಗೆ ನಗರದ ಅನೇಕ ಮನೆಗಳಿಗೆ ನೀರು ನುಗ್ಗಿತ್ತು. ಸಂಗೋಳ್ಳಿ ರಾಯಣ್ಣ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿತ್ತು. ಅಲ್ಲದೆ, ಉತ್ತರಹಳ್ಳಿಯ ಕಂಪಮ್ಮನ ಅಗ್ರಹಾರ ಫಿಶ್ ಮಾರ್ಕೆಟ್ ಬಳಿ ಇರುವ ಮನೆಹಳಿಗೆ ನೀರು ನುಗ್ಗಿತ್ತು. ಮನೆಯ ಮಾಲೀಕರು ಇಡೀ ರಾತ್ರಿ ಊಟ, ನಿದ್ದೆ ಬಿಟ್ಟು ನೀರು ಹೊರಹಾಕುವ ಕಾರ್ಯದಲ್ಲಿ ತೊಡಬೇಕಾಯಿತು. ಸ್ಥಳೀಯರು ಇಷ್ಟೆಲ್ಲಾ ಪರದಾಡುತ್ತಿದ್ದ ಸಂದರ್ಭದಲ್ಲಿ ಯಾವ ಅಧಿಕಾರಿಯೂ ಸಹಾಯಕ್ಕೆ ಬಂದಿಲ್ಲ. ಅಷ್ಟೇ ಅಲ್ಲ, ಈವರೆಗೆ ಓರ್ವ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಮನೆಯ ಮಾಲೀಕರು ಆಕ್ರೋಶ ವ್ಯಕ್ತ ಪಡಿಸಿದರು.
ಇದನ್ನೂ ಓದಿ: ಮಳೆಗೆ ಮುಳುಗಿದ ಬೆಂಗಳೂರು ಪ್ರದೇಶಗಳು: ಮನೆ, ದೇವಸ್ಥಾನಕ್ಕೆ ನುಗ್ಗಿದ ನೀರು