ಬೆಂಗಳೂರು
Video | ಬೆಂಗಳೂರಿನಲ್ಲಿ ತೆಂಗಿನ ಮರಕ್ಕೆ ಬಡಿದ ಸಿಡಿಲು: ರಾಜಧಾನಿಯಲ್ಲಿ ಮಳೆ ಆರ್ಭಟ
ಮಳೆರಾಯನ ಆರ್ಅಭಟಕ್ಕೆ ಅನೇಕ ಸ್ಥಳಗಳಲ್ಲಿ ಮರಗಳಿಗೆ ಸಿಡಿಲು ಬಡಿದು ನೆಲಕ್ಕುರುಳಿದೆ, ವಿದ್ಯುತ್ ಕಂಬಗಳು ಉರುಳಿ ಹಾನಿ ಉಂಟುಮಾಡಿದೆ ಹಾಗೂ ಮನೆಗಳಿಗೆ ನೀರು ನುಗ್ಗಿದೆ.
ಬೆಂಗಳೂರು: ವರುಣನ ಆರ್ಭಟಕ್ಕೆ ನಿನ್ನೆ ರಾಜಧಾನಿಯ ನಿವಾಸಿಗರು ತತ್ತರಿಸಿಹೋಗಿದ್ದಾರೆ. ಸಿಡಿಲು, ಗುಡುಗು ಸಹಿತ ಸುರಿದ ಮಳೆಗೆ ಬೆಂಗಳೂರಿನಲ್ಲಿ ಕೋಲಾಹಲ ಉಂಟಾಗಿದೆ. ಅನೇಕ ಸ್ಥಳಗಳಲ್ಲಿ ಮರಗಳಿಗೆ ಸಿಡಿಲು ಬಡಿದ ಘಟನೆ ಸಂಭವಿಸಿದೆ. ಹಾಗೂ ಮರಗಳು, ವಿದ್ಯತ್ ಕಂಬಗಳು ಉರುಳಿ ಹಾನಿ ಉಂಟುಮಾಡಿದೆ. ಅಲ್ಲದೆ, ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರ ವಾಸ್ತವ್ಯಕ್ಕೆ ಸಮಸ್ಯೆಯಾಗಿದೆ.
ಬೆಂಗಳೂರಿನ ಉತ್ತರ ಭಾಗದಲ್ಲಿರುವ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನಲ್ಲಿ ಇರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ಮರ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಉಂಟಾಗಿಲ್ಲ. ಆದರೆ, ಬೆಸ್ಕಾಂ ವ್ಯಾಪ್ತಿಯಲ್ಲಿರುವ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಒಂದೇ ದಿನದಲ್ಲಿ ಒಟ್ಟು 170 ವಿದ್ಯತ್ ಕಂಬಗಳಿಗೆ ಹಾನಿ ಉಂಟಾಗಿರುವುದು ದುಃಖಕರ ಸಂಗತಿ. ಜಯನಗರ, ವೈಟ್‌ಫೀಲ್ಡ್, ರಾಮನಗರ, ಕನಕಪುರ, ಚೆಂದಾಪುರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಹಲವೆಡೆ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಡುಗು, ಸಿಡಿಲು ಹಾಗೂ ಮಳೆಯ ಆರ್ಭಟಕ್ಕೆ ನಗರದಲ್ಲಿ ಅನೇಕ ಮರಗಳು ನೆಲಸಮಾವಾಗಿವೆ. ಪ್ರಶಾಂತ್ ನಗರ, ಶ್ರೀರಾಂಪುರ, ಲಿಂಕ್ ರೋಡ್, ಸೇರಿ ಹಲವೆಡೆ ಮರಗಳು ನೆಲಕ್ಕುರುಳಿದ ಕಾರಣದಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕೆ.ಜಿ. ರೋಡ್ ಗಾಂಧಿನಗರದಲ್ಲಿ ಬೃಹತ್ ಮರ ಧರೆಗೆ ಬಿದ್ದಿದ್ದು ಸಂಚಾರ ಡೈವರ್ಟ್ ಮಾಡಲಾಗಿತ್ತು. ಈಗ ಆ ಮರವನ್ನು ಕ್ಲಿಯರ್ ಮಾಡಿ ಅದೇ ರಸೆಯಲ್ಲಿ ವಾಹನಗಳು ಸಂಚರಿಸುವಂತೆ ಮಾಡಲಾಗಿದೆ. ಒಂದೇ ರಾತ್ರಿಯಲ್ಲೆ ಸುಮಾರು 8 ಮರಗಳು ನೆಲಕ್ಕೆ ಉರುಳಿದ ವರದಿಯಾಗಿದೆ.
ಭಾರಿ ಪ್ರಮಾಣದಲ್ಲಿ ಸುರಿದ ಮಳೆಗೆ ನಗರದ ಅನೇಕ ಮನೆಗಳಿಗೆ ನೀರು ನುಗ್ಗಿತ್ತು. ಸಂಗೋಳ್ಳಿ ರಾಯಣ್ಣ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಜಲಾವೃತವಾಗಿತ್ತು. ಅಲ್ಲದೆ, ಉತ್ತರಹಳ್ಳಿಯ ಕಂಪಮ್ಮನ ಅಗ್ರಹಾರ ಫಿಶ್ ಮಾರ್ಕೆಟ್ ಬಳಿ ಇರುವ ಮನೆಹಳಿಗೆ ನೀರು ನುಗ್ಗಿತ್ತು. ಮನೆಯ ಮಾಲೀಕರು ಇಡೀ ರಾತ್ರಿ ಊಟ, ನಿದ್ದೆ ಬಿಟ್ಟು ನೀರು ಹೊರಹಾಕುವ ಕಾರ್ಯದಲ್ಲಿ ತೊಡಬೇಕಾಯಿತು. ಸ್ಥಳೀಯರು ಇಷ್ಟೆಲ್ಲಾ ಪರದಾಡುತ್ತಿದ್ದ ಸಂದರ್ಭದಲ್ಲಿ ಯಾವ ಅಧಿಕಾರಿಯೂ ಸಹಾಯಕ್ಕೆ ಬಂದಿಲ್ಲ. ಅಷ್ಟೇ ಅಲ್ಲ, ಈವರೆಗೆ ಓರ್ವ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಮನೆಯ ಮಾಲೀಕರು ಆಕ್ರೋಶ ವ್ಯಕ್ತ ಪಡಿಸಿದರು.
ಇದನ್ನೂ ಓದಿ: ಮಳೆಗೆ ಮುಳುಗಿದ ಬೆಂಗಳೂರು ಪ್ರದೇಶಗಳು: ಮನೆ, ದೇವಸ್ಥಾನಕ್ಕೆ ನುಗ್ಗಿದ ನೀರು
ಕರ್ನಾಟಕ
Abhishek Ambareesh Reception: ಅಭಿ- ಅವಿವ ಅದ್ಧೂರಿ ಆರತಕ್ಷತೆ; ಲೈವ್ ವಿಡಿಯೊ ಇಲ್ಲಿದೆ
Abhishek Ambareesh Reception: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವ ಬಿಡಪ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿತ್ರರಂಗದ ಗಣ್ಯರು, ಪ್ರಮುಖ ರಾಜಕೀಯ ನಾಯಕರು ಆಗಮಿಸಿ ದಂಪತಿಗೆ ಶುಭ ಕೋರಿದ್ದಾರೆ.
ಕರ್ನಾಟಕ
Farooq Abdullah: ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ ಜತೆ ಫಾರೂಕ್ ಅಬ್ದುಲ್ಲಾ ʼಲೋಕಾʼಭಿರಾಮ!
HD Devegowda: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಅವರ ಕರ್ನಾಟಕ ಭೇಟಿ ರಾಜಕೀಯವಾಗಿ ಮಹತ್ವವನ್ನು ಪಡೆದುಕೊಂಡಿದೆ. ಬಿಜೆಪಿಯೇತರ ಸರ್ಕಾರ ರಚನೆಗಾಗಿ ನಾನಾ ಕಸರತ್ತುಗಳು ನಡೆಯುತ್ತಿರುವ ಮಧ್ಯೆಯೇ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ (Farooq Abdullah) ಬುಧವಾರ (ಜೂನ್ 7) ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಈ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ಹಲವು ರಾಜಕೀಯ ಲೆಕ್ಕಾಚಾರಗಳು ಇದರ ಹಿಂದೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಲೋಕಸಭಾ ಚುನಾವಣೆಯು ರಾಜ್ಯಗಳ ವಿಧಾನಸಭಾ ಚುನಾವಣೆಗಿಂತ ತುಸು ಭಿನ್ನ. ಇಲ್ಲಿ ಮತ ಹಾಕುವಾಗ ನಾನಾ ವಿಚಾರಗಳು ಪರಿಗಣಿಸಲ್ಪಡುತ್ತದೆ. ಅಲ್ಲದೆ, ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಇದೆ. ಹೀಗಾಗಿ ಪ್ರತಿಪಕ್ಷಗಳು ಒಗ್ಗೂಡಿ ಹೋರಾಟ ನಡೆಸಬೇಕಿದೆ. ಇದಕ್ಕಾಗಿ ಬಿಜೆಪಿಯೇತರ ರಂಗ ರಚನೆಯ ಅವಶ್ಯಕತೆಯೂ ಇದೆ ಎಂಬುದು ಇತರ ರಾಜಕೀಯ ಪಕ್ಷಗಳ ಕೂಗಾಗಿದೆ. ಅದರ ಭಾಗವಾಗಿ ಈಗ ಫಾರೂಕ್ ಅಬ್ದುಲ್ಲಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಶುರುವಾಗಿದೆ ಒಗ್ಗಟ್ಟಿನ ಮಂತ್ರ
ಜೂನ್ 12ರಂದು ಬಿಹಾರದ ಪಟನಾದಲ್ಲಿ ವಿರೋಧ ಪಕ್ಷಗಳ ಸಭೆಯನ್ನು ಕರೆಯಲಾಗಿತ್ತು. ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಸಭೆಯ ಮುಂದಾಳತ್ವವನ್ನು ವಹಿಸಿದ್ದರು. ಆದರೆ, ಈ ಸಭೆಗೆ ಜೆಡಿಎಸ್ ಅನ್ನು ಆಹ್ವಾನ ಮಾಡಿರಲಿಲ್ಲ. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಕೆಲವು ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಸಭೆಗೆ ಬರಲು ಅಸಾಧ್ಯವಾಗಲಿರುವ ಕಾರಣ ಈ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ. ಈಗಾಗಲೇ ನಿತೀಶ್ ಕುಮಾರ್ ಅವರು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಎಡಪಕ್ಷಗಳ ಹೊರತಾಗಿ ಹಲವಾರು ಪ್ರಾದೇಶಿಕ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: MLC Election: ಕಾಂಗ್ರೆಸ್ ಸರ್ಕಾರಕ್ಕೆ 3ನೇ ಸವಾಲು: 3 ಪರಿಷತ್ ಸ್ಥಾನಕ್ಕೆ 19 ಆಕಾಂಕ್ಷಿಗಳು, ನಾಲ್ಕೈದು ಬಣಗಳು!
ಅಲ್ಲದೆ, ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಎನ್‌ಸಿಪಿಯ ಶರದ್ ಪವಾರ್ ಸೇರಿದಂತೆ ಅನೇಕ ಪಕ್ಷಗಳ ನಾಯಕರೊಂದಿಗೆ ಅವರು ಪ್ರತ್ಯೇಕ ಸಭೆಗಳನ್ನು ಸಹ ನಿತೀಶ್ ಕುಮಾರ್ ನಡೆಸಿದ್ದಾರೆ. ಈಗ ಬಿಜೆಪಿಯೇತರ ಸರ್ಕಾರ ರಚನೆಯಾಗಬೇಕು, ಆ ಪಕ್ಷವನ್ನು ಎಲ್ಲರೂ ಒಗ್ಗಟ್ಟಾಗಿ ಮಣಿಸಬೇಕು ಎಂಬ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಫಾರುಕ್ ಅಬ್ದುಲ್ಲ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ, ಬಿಜೆಪಿಯೇತರ ರಾಜಕೀಯ ಪಕ್ಷಗಳ ಸಂಘಟನೆ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದಾರೆ. ಜತೆಗೆ ಬಿಜೆಪಿ ದೇಶ ವಿಭಜನೆ ಮಾಡುತ್ತಿದೆ ಎಂದು ಆರೋಪ ಮಾಡಿರುವ ಅವರು, ಆ ಸರ್ಕಾರದ ಜತೆ ಕೈಜೋಡಿಸದಂತೆಯೂ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಎಲ್ಲವೂ ಸರಿಹೋಗಲಿದೆ: ಫಾರುಕ್ ಅಬ್ದುಲ್ಲಾ
ಎಚ್.ಡಿ. ದೇವೇಗೌಡರನ್ನು ಪದ್ಮನಾಭನಗರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಬಿಜೆಪಿಯೇತರ ರಾಜಕೀಯ ಪಕ್ಷಗಳ ರಂಗ ರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. “ನಾನು ಎಲ್ಲರಿಗೆ ಸಲಹೆ ನೀಡುತ್ತೇನೆ. ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶವಾಗಿದೆ. ದೇಶವನ್ನು ರಕ್ಷಣೆ ಮಾಡಬೇಕಿದೆ. 2024ರ ಲೋಕಸಭಾ ಚುನಾವಣಾ ದೃಷ್ಟಿಯಿಂದ ವಿರೋಧ ಪಕ್ಷಗಳು ಒಂದಾಗುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಜೂನ್ 12ರಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆದಿರುವ ಸಭೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಏಕೆ ಆಹ್ವಾನಿಸಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಫಾರೂಕ್ ಅಬ್ದುಲ್ಲಾ, ಈ ಸಭೆ ಬಹಳ ಮುಖ್ಯವಾಗಿದೆ. ನಿಧಾನವಾಗಿ ಎಲ್ಲ ದಾರಿಯೂ ಸಿಗುತ್ತದೆ. ಒಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋಗುವುದು ಬಹಳ ಮುಖ್ಯವಾದ ವಿಚಾರವಾಗಿದೆ ಎಂದು ಹೇಳಿದರು.
ಕಾಶ್ಮೀರಿ ಫೈಲ್ಸ್, ಕೇರಳ ಫೈಲ್ಸ್ ಸಿನಿಮಾಗಳಂತಹ ಸಿನಿಮಾಗಳು ದೇಶವನ್ನು ವಿಭಜನೆ ಮಾಡುವುದಕ್ಕೆ ಮಾಡಿರುವ ಚಿತ್ರಗಳಾಗಿವೆ. ಭಾರತದ ವಿಭಜನೆ ಮಾಡುವ ಇಂತಹ ಚಿತ್ರಗಳಿಂದ ಸಂವಿಧಾನವೂ ವಿಭಜನೆ ಆಗುತ್ತದೆ. ಹಿಂದು, ಮುಸ್ಲಿಂ ಇರಲಿ, ಯಾವುದೇ ಸಮಾಜ, ರಾಜ್ಯಗಳೇ ಆಗಿರಲಿ, ಈ ರೀತಿಯ ಚಿತ್ರಗಳು ದೇಶಕ್ಕೆ ಮಾರಕ ಎಂದು ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟರು.
ಸೌಹಾರ್ದಯುತ ಭೇಟಿ: ಎಚ್‌ಡಿ ಕುಮಾರಸ್ವಾಮಿ
ಫಾರುಕ್ ಅಬ್ದುಲ್ಲಾ ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ. ಗೌಡರ ಆರೋಗ್ಯ ವಿಚಾರಿಸಲು ಬಂದಿದ್ದರು. ಪ್ರಧಾನಿ ಆಗಿದ್ದಾಗ ಕಾಶ್ಮೀರಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಅವರು ಸ್ಮರಿಸಿಕೊಂಡಿದ್ದಾರೆ. ದೇಶದ ಹಿತದೃಷ್ಟಿಯಿಂದ ಒಳ್ಳೆಯ ವಾತಾವರಣ ಬೇಕು ಎಂಬುದು ಅವರ ಅಭಿಪ್ರಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲೂ ಟಿಪ್ಪು ವಿವಾದ; ಕೊಲ್ಹಾಪುರದಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ, ಪರಿಸ್ಥಿತಿ ಉದ್ವಿಗ್ನ
ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಫಾರೂಕ್
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು (Siddaramaiah) ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಫಾರೂಕ್ ಅಬ್ದುಲ್ಲಾ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಇತರರಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಜತೆ ಫಾರೂಕ್ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಆದರೆ, ಮಾತುಕತೆಯ ವಿಷಯ ಇನ್ನೂ ಬಹಿರಂಗಗೊಂಡಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ
ಕೆ.ಆರ್.ಸರ್ಕಲ್ ಅಂಡರ್‌ಪಾಸ್ ದುರಂತ; ಟೆಸ್ಟ್ ಮಾಡೋಕೆ ಟ್ಯಾಂಕರ್‌ನಲ್ಲಿ ನೀರು ಹರಿಸಿದರು!
Bangalore Rain : ಕೆ.ಆರ್.ಸರ್ಕಲ್ ಅಂಡರ್‌ಪಾಸ್ ದುರಂತದ (KR circle Underpass) ಕುರಿತು ಲೋಕಾಯುಕ್ತ ಜ್ಯುಡಿಷಿಯಲ್ ವಿಂಗ್ ತನಿಖೆ ಕೈಗೊಂಡಿದೆ. ದುರಂತ ನಡೆದ ದಿನ ನೀರು ಯಾಕೆ ಸರಾಗವಾಗಿ ಹರಿದು ಹೋಗಿಲ್ಲ ಎಂದು ತಿಳಿಯಲು ಬುಧವಾರ ಟ್ಯಾಂಕರ್‌ನಲ್ಲಿ ನೀರು ಹರಿಸಿ ಪರೀಕ್ಷಿಸಲಾಯಿತು.
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸಣ್ಣ ಮಳೆ ಸುರಿದರೂ ನಾನಾ ಅವಾಂತರವೇ ಸೃಷ್ಟಿ ಆಗುತ್ತದೆ. ಕಳೆದ ಮೇ 21 ರಂದು ಸುರಿದ ಭಾರಿ ಮಳೆಗೆ ಕೆ.ಆರ್.ಸರ್ಕಲ್ ಅಂಡರ್‌ಪಾಸ್‌ನಡಿ (KR Circle Underpass) ಸಿಲುಕಿ ಕಾರಿನಲ್ಲಿ ತೆರಳುತ್ತಿದ್ದ ಆಂಧ್ರಪ್ರದೇಶ ಮೂಲದ ಟೆಕ್ಕಿ ಭಾನು ರೇಖಾ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಂಡರ್‌ಪಾಸ್ ಪರಿಶೀಲನೆ ನಡೆಸಲು ಲೋಕಾಯುಕ್ತ ತಂಡ ಬುಧವಾರ (ಜೂ.7) ಭೇಟಿ ನೀಡಿದ್ದು, ನ್ಯೂನತೆಯನ್ನು ಕಂಡು ಹಿಡಿಯಲು ಟ್ಯಾಂಕರ್‌ನಲ್ಲಿ ನೀರು ಹರಿಸಿ ಪರೀಕ್ಷಿಸಿದರು.
ಭಾನು ರೇಖಾ ಸಾವು ಪ್ರಕರಣ ಸಂಬಂಧ ಉಪ ಲೋಕಾಯುಕ್ತರ ಸೂಚನೆ ಮೇರೆಗೆ ಲೋಕಾಯುಕ್ತ ಜ್ಯುಡಿಷಿಯಲ್ ವಿಂಗ್ (Lokayukta Judicial Wing) ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. 15 ದಿನಗಳಲ್ಲಿ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ (ಜೂ. 7) ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್ ನೇತೃತ್ವದ ತನಿಖಾ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಅಂಡರ್‌ಪಾಸ್ ನಿರ್ವಹಣೆ ಸಂಬಂಧಿಸಿದಂತೆ ಎಂಜಿನಿಯರ್‌ಗಳಿಂದ ಮಾಹಿತಿ ಪಡೆದರು.
ರಾತ್ರೋ ರಾತ್ರಿ ಡ್ರೈನೇಜ್ ಸಿಸ್ಟಮ್ ಕ್ಲೀನ್ ಆ್ಯಂಡ್ ಕ್ಲಿಯರ್
ದುರಂತ ನಡೆದ ದಿನ ಯಾಕೆ ನೀರು ಸರಾಗವಾಗಿ ಹರಿದು ಹೋಗಿಲ್ಲ. ಅಲ್ಲಿ ಯಾವ ನ್ಯೂನತೆಗಳಿದ್ದವು ಎಂಬುದನ್ನು ಅರಿಯಲು ಲೋಕಾಯುಕ್ತ ಟೀಂ ಪರಿಶೀಲನೆ ನಡೆಸಿತು. ಇತ್ತ ಲೋಕಾಯುಕ್ತ ತನಿಖಾ ತಂಡ ಭೇಟಿ ನೀಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳು ರಾತ್ರೋ ರಾತ್ರಿ ಅಂಡರ್‌ಪಾಸ್ ಡ್ರೈನೇಜ್ ಸಿಸ್ಟಮ್ ಕ್ಲೀನ್ ಮಾಡಿದ್ದರು. ಆದರೆ ಈ ಸಮಸ್ಯೆಯ ನಿಖರ ಕಾರಣ ತಿಳಿಯಲು ಲೋಕಾಯುಕ್ತ ಅಧಿಕಾರಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಎರಡು ಟ್ಯಾಂಕರ್‌ನಲ್ಲಿ ನೀರು ತರಿಸಿ ಹರಿಸಿ ಪರೀಕ್ಷೆ ಮಾಡಿದರು. ಈ ವೇಳೆ ಕೇವಲ ಎರಡು ಟ್ಯಾಂಕ್‌ನ ನೀರು ಸಹ ಡ್ರೈನೇಜ್‌ಗೆ ಸರಾಗವಾಗಿ ಹರಿದು ಹೋಗದೆ ಇರುವುದು ಕಂಡು ಬಂತು.
ಅಂಡರ್‌ಪಾಸ್ ನಿರ್ವಹಣೆಯಲ್ಲಿ ಯಾರ ಕರ್ತವ್ಯ ಲೋಪವಿದೆ ಎಂಬುದರ ಕುರಿತು ಸಹ ತನಿಖೆ ನಡೆಸಿದರು. ಈ ವೇಳೆ ಡ್ರೈನೇಜ್‌ಗೆ ನೀರು ಸರಾಗವಾಗಿ ಹರಿದು ಹೋಗುಲು ಅಂಡರ್‌ಪಾಸ್ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಸದ್ಯ ಸ್ಥಳ ಪರಿಶೀಲನೆ ಹಾಗೂ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದು, ವಾರದೊಳಗೆ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ವರದಿ ಸಲ್ಲಿಸಲಿದ್ದಾರೆ.
ಏನಿದು ಘಟನೆ?
ಕಳೆದ ಮೇ 21ರಂದು ವಿಧಾನಸೌಧ ಸಮೀಪದ ಕೆ.ಆರ್. ಸರ್ಕಲ್ (KR Circle Underpass) ಬಳಿ ಇರುವ ಅಂಡರ್‌ಪಾಸ್‌ನಲ್ಲಿ ಮಳೆಗೆ ಕಾರೊಂದು ಸಿಕ್ಕಿ ಬಿದ್ದಿತ್ತು. ಅದರೊಳಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ (Infosys employee) ಭಾನುರೇಖಾ (22) ಮೃತಪಟ್ಟಿದ್ದರು.
ಆಂಧ್ರ ಮೂಲದ ಭಾನುರೇಖಾ ಅವರ ಕುಟುಂಬಸ್ಥರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಒಂದೇ ಕುಟುಂಬದ ಒಟ್ಟು ಆರು ಮಂದಿ ಹಾಗೂ ಡ್ರೈವರ್ ಸೇರಿ ಏಳು ಜನರಿದ್ದರು. ಸಮಿತಾ (13), ಸೋಹಿತಾ (15), ಸಂಭ್ರಾಜ್ಯಂ (65), ಭಾನುರೇಖಾ (22) ಹರೀಶ್ ಸ್ವರೂಪ (47), ಸಂದೀಪ್ (35) ಕಾರಿನಲ್ಲಿದ್ದರು.
ಪ್ರವಾಸಕ್ಕೆಂದು ಆಂಧ್ರ ಪ್ರದೇಶದ ಆರು ಮಂದಿಯನ್ನೊಳಗೊಂಡ ಕುಟುಂಬದವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ನಗರದ ಹಲವು ಕಡೆ ಕಾರಿನಲ್ಲಿ ಪ್ರಯಾಣಿಸಿ, ಭಾರಿ ಮಳೆ ಕಾರಣಕ್ಕೆ ಮನೆ ಸೇರುವ ಧಾವಂತದಲ್ಲಿದ್ದರು. ಇತ್ತ ಕೆ.ಆರ್. ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ 7 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿತ್ತು. ಇದರ ಅರಿವು ಇರದೆ ಕಬ್ಬನ್ ಪಾರ್ಕ್ ಕಡೆಯಿಂದ ಬರುತ್ತಿದ್ದ ಕಾರು ಅಲ್ಲಿಗೆ ಹೋಗಿದ್ದರಿಂದ ಮಳೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು.
ಇದನ್ನೂ ಓದಿ: Weather Report: ಬಿಪರ್‌ಜಾಯ್ ಸೈಕ್ಲೋನ್ ಎಫೆಕ್ಟ್; ರಾಜ್ಯಾದ್ಯಂತ ಇನ್ನೂ 4 ದಿನ ಜಡಿ ಮಳೆ
ಕ್ಷಣ ಕ್ಷಣಕ್ಕೂ ಅಂಡರ್‌ಪಾಸ್ ಒಳಗೆ ನೀರು ಹೆಚ್ಚಾಗುತ್ತ ಹೋಯಿತು. ಎಂಜಿನ್‌ಗೆ ನೀರು ತುಂಬಿಕೊಂಡು ಬ್ಲಾಕ್ ಆಯಿತು. ನಂತರ ಕಾರು ರೀಸ್ಟಾರ್ಟ್ ಮಾಡಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲೇ ನೀರು ಕಾರಿನ ಡೋರ್‌ನ ಮಟ್ಟಕ್ಕೆ ಬಂದಿದ್ದು, ನಂತರ ಡೋರ್ ಬ್ಲಾಕ್ ಆಗಿ ತೆಗೆಯಲು ಕಷ್ಟವಾಯಿತು. ಈ ವೇಳೆ ಡ್ರೈವರ್ ಡೋರ್ ತೆಗೆದು ಒಬ್ಬೊಬ್ಬರನ್ನೇ ಕೆಳಗೆ ಇಳಿಸಲು ಪ್ರಯತ್ನಿಸಿದ್ದ. ಅಷ್ಟರಲ್ಲಾಗಲೇ ಒಳಗಡೆ ಇದ್ದ ಭಾನುರೇಖಾ ಸಾಕಷ್ಟು ನೀರು ಕುಡಿದು, ಪ್ರಜ್ಞೆ ಕಳೆದುಕೊಂಡಿದ್ದರು. ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಒಬ್ಬೊಬ್ಬರನ್ನೇ ರಕ್ಷಣೆ ಮಾಡಿದ್ದರು. ಆದರೆ ಭಾನುರೇಖಾ ಅವರನ್ನು ಪರೀಕ್ಷಿಸಿದ ಆಸ್ಪತ್ರೆ ವೈದ್ಯರು, ಅವರು ಮೃತಪಟ್ಟಿದ್ದನ್ನು ಖಚಿತಪಡಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Caste Census: ಮತ್ತೆ ಜಾತಿ ಹುತ್ತಕ್ಕೆ ಕೈಹಾಕಿದ ಸಿದ್ದರಾಮಯ್ಯ?: ಒಕ್ಕಲಿಗ- ವೀರಶೈವ ಲಿಂಗಾಯತರು ವಿರೋಧಿಸಿದ್ದ ವರದಿ ಸ್ವೀಕಾರ?
ಜಾತಿವಾರು ಸಮೀಕ್ಷೆಯಿಂದ ಜನರಿಗೆ ಒದಗಿಸಬೇಕಾದ ಸೌಲಭ್ಯಗಳು, ಮೊದಲಾದ ಅಂಶಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಅಗತ್ಯವಿರುವ ದತ್ತಾಂಶ ಲಭ್ಯವಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಈ ಹಿಂದೆ ಒಮ್ಮೆ ರಾಜ್ಯದಲ್ಲಿ ವಿವಾದಕ್ಕೀಡಾಗಿ ತಣ್ಣಗಾಗಿದ್ದ ವಿಚಾರವನ್ನು ಮತ್ತೆ ಕೈಗೆತ್ತಿಕೊಳ್ಳಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ತಮ್ಮ ಮೊದಲ ಅವಧಿಯಲ್ಲಿ ನಡೆಸಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು (ಜಾತಿ ಗಣತಿ) ಸ್ವೀಕರಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವರದಿಗೆ ರಾಜ್ಯದ ಎರಡು ಪ್ರಬಲ ಜಾತಿಗಳಾದ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದವು.
ಕರ್ನಾಟಕ ಶೋಷಿತ ವರ್ಗಗಳ ಮಹಾಒಕ್ಕೂಟದ ನಿಯೋಗವನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ನಂತರ ಮಾತನಾಡಿದರು. ಹಿಂದಿನ ಬಾರಿ ತಮ್ಮ ಸರ್ಕಾರದ ಅವಧಿಯಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಮ್ಮಿಕೊಳ್ಳಲಾದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸ್ವೀಕರಿಸಿ, ಅದರ ದತ್ತಾಂಶದ ಆಧಾರದಲ್ಲಿ ವಿವಿಧ ಸಮುದಾಯಗಳಿಗೆ ಅನುಕೂಲ ಕಲ್ಪಿಸಲಾಗುವುದು.
ಜಾತಿವಾರು ಸಮೀಕ್ಷೆಯಿಂದ ಜನರಿಗೆ ಒದಗಿಸಬೇಕಾದ ಸೌಲಭ್ಯಗಳು, (preferential treatment) ಮೊದಲಾದ ಅಂಶಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಅಗತ್ಯವಿರುವ ದತ್ತಾಂಶ ಲಭ್ಯವಾಗುವುದು. ಮೀಸಲಾತಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ವೈಜ್ಞಾನಿಕ ಹಾಗೂ ನಿಖರ ಮಾಹಿತಿ ಅತಿ ಅಗತ್ಯ. ಈ ಉದ್ದೇಶದಿಂದ ಜಾತಿವಾರು ಸಮೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ವರದಿಯನ್ನು ಸ್ವೀಕರಿಸಿ, ಅದರಲ್ಲಿನ ದತ್ತಾಂಶಗಳ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸರ್ಕಾರವು ಮೀಸಲಾತಿಯಲ್ಲಿ ಸೃಷ್ಟಿಸಿದ ಗೊಂದಲ ನಿವಾರಣೆ ಮಾಡಲಾಗುವುದು. ಇಲ್ಲವಾದರೆ ಯಾರಿಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಿಯೋಗದಲ್ಲಿ ಒಕ್ಕೂಟದ ಮುಖಂಡರಾದ ಕೆ.ಎಂ.ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಮಾವಳ್ಳಿ ಶಂಕರ್, ಪ್ರೊ.ರವಿ ವರ್ಮಕುಮಾರ್, ಅನಂತ್ ನಾಯಕ್, ಡಾ.ನರಸಿಂಹಯ್ಯ, ಪ್ರೊ.ಜಾಫೆಟ್, ಬಿ.ಟಿ.ಲಲಿತಾನಾಯಕ್, ಜಿ.ಎಸ್.ಪಾಟೀಲ್ ಸೇರಿ 150 ಕ್ಕೂ ಹೆಚ್ಚು ಮಂದಿ ನಾನಾ ಜಾತಿಗಳ ಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.
ಸಮುದಾಯಗಳ ವಿರೋಧ:
ಜಾತಿ ಗಣತಿ ಎಂದೇ ಪ್ರಸಿದ್ಧವಾದ ವರದಿಯನ್ನು ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೇ ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾಗಿತ್ತು. ವರದಿ ಸಿದ್ಧವಾಗಿದ್ದರೂ ಸರ್ಕಾರ ಅದನ್ನು ಸ್ವೀಕರಿಸಿಲ್ಲ ಹಾಗೂ ಸದನದಲ್ಲಿ ಮಂಡಿಸಿಲ್ಲ. ಹಾಗಾಗಿ ಗಣತಿಯ ಯಾವುದೇ ಅಂಶಗಳು ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ ಅನೇಕ ಸಂದರ್ಭದಲ್ಲಿ ಈ ಬಗ್ಗೆ ವಿವಿಧ ಮಾಹಿತಿಗಳು ʼಸೋರಿಕೆ ಆಗಿವೆʼ ಎನ್ನಲಾಗುತ್ತಿದೆ. ಅದರ ಪ್ರಕಾರ ರಾಜ್ಯದಲ್ಲಿ ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಆತಂಕ ಸಮುದಾಯಗಳ ಸಂಘಟನೆಗಳಲ್ಲಿದೆ. ವೀರಶೈವ ಲಿಂಗಾಯತರು ಹಾಗೂ ಒಕ್ಕಲಿಗರು 1.5 ಕೋಟಿಗೂ ಹೆಚ್ಚಿದ್ದಾರೆ. ಆದರೆ ಜಾತಿ ಗಣತಿಯಲ್ಲಿ ಎರಡೂ ಸಮುದಾಯಗಳನ್ನು ಒಂದು ತಲಾ ಒಂದು ಕೋಟಿಗಿಂತ ಕಡಿಮೆ ತೋರಿಸಲಾಗಿದೆ. ಈ ವರದಿಯನ್ನು ಸರ್ಕಾರ ಸ್ವೀಕರಿಸಬಾರದು ಎಂದು ವೀರಶೈವ ಲಿಂಗಾಯತ ಮಹಾಸಭಾ ಸಹ ಆಗ್ರಹಿಸಿತ್ತು.
ಎರಡು ವರ್ಷದ ಹಿಂದೆಯೂ ಈ ಕುರಿತು ಚರ್ಚೆ ನಡೆದಾಗ, ವರದಿ ಸ್ವೀಕರಿಸಲು ಸಿದ್ದರಾಮಯ್ಯ ಒಲವು ತೋರಿದ್ದರು. ಆದರೆ ಡಿ.ಕೆ. ಶಿವಕುಮಾರ್ ಭಿನ್ನ ನಿಲುವು ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಲು ವೀರಪ್ಪ ಮೊಯ್ಲಿ ಅವರ ಸಮಿತಿ ರಚಿಸಲಾಗಿತ್ತು. ವಿಧಾನಸಭೆ ಚುನಾವಣೆಗೆ ಘೋಷಣೆ ಮಾಡಿದ್ದ ಪ್ರಣಾಳಿಕೆಯಲ್ಲಿ, ಜಾತಿ ಗಣತಿ ವರದಿಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಕಾಂಗ್ರೆಸ್ ಪಕ್ಷ ತಿಳಿಸಿತ್ತು. ಆದರೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಕುರಿತೇ ಹೆಚ್ಚು ಚರ್ಚೆ ಆಗಿದ್ದರಿಂದ ಜಾತಿ ಗಣತಿ ವರದಿ ಕುರಿತು ಚರ್ಚೆಗಳು ನಡೆದಿರಲಿಲ್ಲ. ಕಾಂಗ್ರೆಸ್ ಪಕ್ಷದೊಳಗೆ ಈ ಕುರಿತು ಯಾವ ಅಭಿಪ್ರಾಯಗಳಿವೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದೀಗ ವರದಿ ಸ್ವೀಕರಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿರುವುದರಿಂದ ಮುಂದೆ ಯಾವ ರೀತಿ ಚರ್ಚೆಗಳು ನಡೆಯುತ್ತವೆ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ: Bihar Caste Survey: ಬಿಹಾರದಲ್ಲಿ ಜಾತಿ ಸಮೀಕ್ಷೆಗೆ ನೀಡಿದ ತಡೆಯಾಜ್ಞೆ ತೆರವಿಗೆ ಸುಪ್ರೀಂ ನಕಾರ; ನಿತೀಶ್‌ಗೆ ಹಿನ್ನಡೆ
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ23 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ23 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?
-
ಕರ್ನಾಟಕ7 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!