ಬೆಂಗಳೂರು: ಬಿಬಿಎಂಪಿ ಕಚೇರಿ ಆವರಣದಲ್ಲಿರುವ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ (Quality Control Lab) ಶುಕ್ರವಾರ ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ (BBMP Fire accident) ಒಂಬತ್ತು ಮಂದಿಗೆ ಸುಟ್ಟ ಗಾಯಗಳಾಗಿವೆ. ಎಲ್ಲರಿಗೂ ಶೇ. 39ರಷ್ಟು ಸುಟ್ಟ ಗಾಯಗಳಾಗಿವೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕ ಡಾ. ರಮೇಶ್ ಕೃಷ್ಣ ತಿಳಿಸಿದ್ದಾರೆ. ಇದರ ನಡುವೆ ಈ ಬೆಂಕಿ ಅನಾಹುತಕ್ಕೆ ಕಾರಣವೇನು ಎನ್ನುವ ಬಗ್ಗೆ ಚಿತ್ರವಿಚಿತ್ರ ಥಿಯರಿಗಳು ಓಡಾಡುತ್ತಿವೆ. ದಾಖಲೆಗಳ ನಾಶದ ಪ್ರಯತ್ನ ಎಂಬ ಕಾಂಗ್ರೆಸ್ ಹಾಗೂ ಬಿಜೆಪಿಯ ದೋಷಾರೋಪದ ನಡುವೆ ನಿಜಕ್ಕೂ ನಡೆದಿದ್ದೇನು ಎಂಬ ಮಾಹಿತಿ ವಿಸ್ತಾರ ನ್ಯೂಸ್‌ಗೆ ಸಿಕ್ಕಿದೆ. ಆದರೆ, ಈ ಗುಣಮಟ್ಟ ಪರಿಶೀಲನಾ ಪ್ರಯೋಗಾಲಯಗಳ ಬಂಡವಾಳವೂ ಬಯಲಾಗಿದೆ.
ಕಟ್ಟಡದಲ್ಲಿ ಹೇಗೆ ಬೆಂಕಿ ಅವಘಡ ಸಂಭವಿಸಿತು ಎನ್ನುವ ವಿವರವನ್ನು ಸದ್ಯ ಪೊಲೀಸರ ವಶದಲ್ಲಿರುವ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಆನಂದ್ ಅವರು ಬಿಬಿಎಂಪಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಅಮೃತ್ ರಾಜ್ ಅವರಿಗೆ ವಿವರಣೆ ನೀಡಿದ ಒಂದು ಆಡಿಯೋ ಅಲ್ಲಿ ನಡೆದ ಘಟನಾವಳಿಗಳ ವಿವರವನ್ನು ನೀಡಿದೆ.
ಅವರು ಹೇಳುವ ಪ್ರಕಾರ, ಗುಣಮಟ್ಟ ಪರಿಶೀಲನೆಗೆ ಬಳಕೆ ಮಾಡುವ ಬೆಂಜೀನ್ ರಾಸಾಯನಿಕ (Benzene Chemical)ದಿಂದಾಗಿ ಈ ದುರಂತ ಸಂಭವಿಸಿದೆ. ಅಂದರೆ ಅದನ್ನು ನಿರ್ಲಕ್ಷ್ಯದಿಂದ ಬಳಸಿದ್ದೇ ಬೆಂಕಿ ಹೊತ್ತಿಕೊಳ್ಳಲು ಕಾರಣ.
ಅವರು ನೀಡಿದ ವಿವರಣೆ ಏನು?
ಶುಕ್ರವಾರ ಸಂಜೆ ನಾಲ್ಕು ಗಂಟೆ ವೇಳೆಗೆ ನಾವು ಬಸವನಗುಡಿ ಭಾಗದ ಕಾಮಗಾರಿಯ ಕ್ವಾಲಿಟಿ ಚೆಕ್ ಮಾಡುತ್ತಾ ಇದ್ದೆವು. ರಸ್ತೆಗೆ ಹಾಕಲಾಗಿರುವ ಟಾರ್‌ನಲ್ಲಿ ಇರುವ ಬಿಟುಮಿನ್ ಕಂಟೆಂಟ್ ಪ್ರಮಾಣವನ್ನು ಪರೀಕ್ಷೆ ಮಾಡುತ್ತಿದ್ದೆವು. ಇದು ಯಾವುದೇ ರಸ್ತೆ ಕಾಮಗಾರಿಯ ಗುಣಮಟ್ಟ ಪರೀಕ್ಷೆಗೆ ಬಳಸುವ ಸಾಮಾನ್ಯ ವಿಧಾನ.
ರೆಗ್ಯುಲರ್ ಆಗಿ ಪರೀಕ್ಷ ಮಾಡುವ ಸ್ಥಳದಲ್ಲೇ ಟೆಸ್ಟಿಂಗ್ ಮಾಡ್ತಾ ಇದ್ದೆವು. ಕಳೆದ ವರ್ಷದಿಂದ ಸುರೇಶ್ ಎಂಬ ಸಿಬ್ಬಂದಿ ಅವರೇ ಟೆಸ್ಟಿಂಗ್ ಮಾಡುತ್ತಿದ್ದಾರೆ. ಸುರೇಶ್ ಡಿಗ್ರೂಪ್ ನೌಕರ. ಆದರೆ ಅವರಿಗೆ ಅವರಿಗೆ ತರಬೇತಿ ನೀಡಲಾಗಿತ್ತು.
ಪರೀಕ್ಷೆ ಮಾಡುವಾಗ ಬೆಂಜೀನ್ ರಾಸಾಯನಿಕ ಸ್ವಲ್ಪ ಚೆಲ್ಲುತ್ತದೆ. ಸಾಮಾನ್ಯವಾಗಿ ಅದನ್ನು ಕೂಡಲೇ ಕ್ಲೀನ್ ಮಾಡಲಾಗುತ್ತದೆ. (ಮಾಡದಿದ್ದರೆ ಬೆಂಕಿ ಹತ್ತಿಕೊಳ್ಳುವ ಅಪಾಯವಿರುತ್ತದೆ. ಯಾಕೆಂದರೆ, ಬೆಂಜೀನ್ ತೀವ್ರ ದಹನಶೀಲ – highly Inflammable ರಾಸಾಯನಿಕ). ಈ ಬಾರಿ ಬೆಂಜೀನ್ ಕೆಮಿಕಲ್ ಕೈತಪ್ಪಿ ಅಥ್ವಾ ಲೀಕ್ ಆಗಿ ಕೆಳಗೆ ಬಿದ್ದಿತ್ತು ಅನಿಸುತ್ತದೆ. ಬೆಂಜೀನ್ ಹಾಕಿ ಪರೀಕ್ಷೆ ಮಾಡುವಾಗ ಸೋರಿಕೆ ಆಗುತ್ತದೆ ಎಂಬ ಕಾರಣಕ್ಕೆ ಬೆಂಜೀನ್‌ನ್ನು ಬಳಸಿ ಕೂಡಲೇ ಸ್ವಚ್ಛಗೊಳಿಸಿ ಅದರ ಕ್ಯಾನ್ ಅನ್ನು ದೂರದಲ್ಲೇ ಇಡಲಾಗುತ್ತದೆ. ಈ ಸಾರಿ ಕೆಳಗೆ ಇಟ್ಟ ಬೆಂಜೀನ್ ಕ್ಯಾನ್‌ನಿಂದ ಲೀಕೇಜ್ ಆಗಿರಬಹುದು ಅನಿಸುತ್ತದೆ.
ಸುರೇಶ್ ಅವರು ಪರೀಕ್ಷೆ ಮಾಡುವಾಗ ನಾನೂ ಎದುರಿಗೆ ನಿಂತಿದ್ದೆ. ಕ್ಯಾನನ್ನು ಕೆಳಗೆ ಇಟ್ಟ ಬೆನ್ನಿಗೇ ಒಮ್ಮಿಂದೊಮ್ಮೆಗೆ ಬೆಂಕಿ ಹತ್ತಿಕೊಂಡಿತು. ಈ ಕ್ಯಾನ್‌ನ ಪಕ್ಕದಲ್ಲಿ ಬೆಂಜೀನ್‌ನ ಇನ್ನೂ ಎರಡು ಕ್ಯಾನ್‌ಗಳು ಇದ್ದವು. ಅದಕ್ಕೂ ಬೆಂಕಿ ಹತ್ತಿಕೊಂಡಿದ್ದರಿಂದ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಸುರೇಶ್ ಅವರು ಇನ್ನೆರಡು ಕ್ಯಾನ್‌ಗಳಿಗೆ ಬೆಂಕಿ ಹತ್ತಿಕೊಳ್ಳದಿರಲಿ ಎಂದು ಅವುಗಳನ್ನೂ ಎಳೆದು ಪಕ್ಕಕ್ಕಿಟ್ಟಿದ್ದರು. ರಭಸವಾಗಿ ಎಳೆಯುವಾಗ ಅವರು ಉರುಳಿ ಬೆಂಜೀನ್ ಲೀಕೇಜ್ ಆಗಿರುವ ಸಾಧ್ಯತೆ. ಹಾಗಿ ಉರುಳಿದ ಕ್ಯಾನ್‌ನಿಂದ ಬೆಂಜೀನ್ ಸೋರಿ ಅದು ಬಾಗಿಲಿನವರೆಗೆ ಬಂದಿರುವ ಸಾಧ್ಯತೆ ಇದೆ. ಹೀಗಾಗಿ ಬೆಂಕಿ ಬಾಗಿಲಿನವರೆಗೂ ಬಂದಿತ್ತು.
ಇದಿಷ್ಟು ಎಇಇ ಆನಂದ್ ಅವರು ಅಮೃತ್ ರಾಜ್ ಅವರಿಗೆ ನೀಡಿರುವ ವಿವರಣೆ.
ಈ ಪ್ರಯೋಗಾಲಯದಲ್ಲಿ ಇದು ಯಾವ ಭಾಗದ ಟಾರು, ಏನೇನು ಪರೀಕ್ಷೆ ನಡೆಸಬೇಕು ಎನ್ನುವ ಸಾಮಾನ್ಯ ವಿಚಾರಗಳಿರುವ ದಾಖಲೆ ಇರುತ್ತದೆಯೇ ಹೊರತು ಬೇರಾವುದೇ ಮಾಹಿತಿ ಇರುವುದಿಲ್ಲ. ಗುಣಮಟ್ಟದ ಮಾನದಂಡಗಳು ಅಂಕಿ ಅಂಶಗಳು ಕಂಪ್ಯೂಟರ್‌ಗೆ ಫೀಡ್ ಆಗುತ್ತವೆ ಎಂದು ಆನಂದ್ ಹೇಳಿದ್ದಾರೆ.
ಇದನ್ನೂ ಓದಿ: BBMP Fire Accident: ಬಿಬಿಎಂಪಿ ಕಚೇರಿ ಬೆಂಕಿ ದುಷ್ಕೃತ್ಯ? ಮೂವರ ವಿಚಾರಣೆ
ಗುಣಮಟ್ಟ ಪರೀಕ್ಷೆಗೆ ತಜ್ಞರಿಲ್ಲವೇ?
ರಾಜ್ಯದಲ್ಲಿ ಗುತ್ತಿಗೆ ಕಾಮಗಾರಿ ಹಗರಣದ ಹೆಸರಿನಲ್ಲಿ ದೊಡ್ಡ ಹಂಗಾಮಾ ನಡೆಯುತ್ತಿರುವ ಹೊತ್ತಿನಲ್ಲಿ ಗುಣಮಟ್ಟ ಪರೀಕ್ಷೆಯ ಚರ್ಚೆಯೂ ನಡೆದಿದೆ. ಗುಣಮಟ್ಟ ಪರೀಕ್ಷೆ ಮಾಡಿದ ಬಳಿಕವೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಇಲ್ಲಿ ಗುಣಮಟ್ಟದ ಪರೀಕ್ಷೆ ನಡೆಸುತ್ತಿರುವುದು ತಜ್ಞರಲ್ಲ, ಟೆಕ್ನಿಷಿಯನ್ ಅಲ್ಲ, ಕೇವಲ ಡಿ ದರ್ಜೆ ನೌಕರ ಎಂಬ ಸಂಗತಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಾಗಿದ್ದರೆ ಬಿಬಿಎಂಪಿ ಪ್ರಯೋಗಾಲಯದಲ್ಲಿ ನುರಿತ ತಜ್ಞರ ಕೊರತೆ ಇದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.
ಬಿಬಿಎಂಪಿ ಕಚೇರಿ ಆವರಣ ಗುಣಮಟ್ಟ ನಿಯಂತ್ರಣ ಪ್ರಯೋಗಾಲ (Quality Control Lab) ಬಿಬಿಎಂಪಿ ಅಗ್ನಿ ದುರಂತ BBMP Fire accident Real reason behind BBMP Fire incident how fire tragedy happened?