Site icon Vistara News

ಜ್ವರ ಬಂದರೆ ಸಾಫ್ಟ್‌ವೇರ್‌ ಇಂಜಿನಿಯರ್‌ ಬಳಿ ಹೋಗುವ BBMP: ಕಸದ ಲಾರಿ ಕುರಿತ ತಪಾಸಣೆ ನಾಟಕ

bbmp

ಬೆಂಗಳೂರು: ಯಾವ ಸಮಸ್ಯೆ ಪರಿಹಾರಕ್ಕೆ ಯಾರ ಬಳಿ ತೆರಳಬೇಕು ಎಂಬ ಅರಿವು ಎಲ್ಲರಿಗೂ ಇರಬೇಕು. ಆದರೆ ರಾಜ್ಯದ ಆರನೇ ಒಂದು ಭಾಗ ಜನಸಂಖ್ಯೆಯನ್ನು ನಿಭಾಯಿಸುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಆಯುಕ್ತರು ಕಸದ ಲಾರಿಗಳ ಫಿಟ್ನೆಸ್‌ ತಪಾಸಣೆಗೆ ಯಾರಿಗೆ ಪತ್ರ ಬರೆಯಬೇಕೆನ್ನುವುದನ್ನೇ ತಿಳಿದಿಲ್ಲ ಎನ್ನುವುದು ಸೋಜಿಗವಾದರೂ ಸತ್ಯ.

ಕಸದ ಲಾರಿಗೆ ನಾಗರಿಕರ ಸಾವು

ಬೆಂಗಳೂರಿನಲ್ಲಿ ಅಪಘಾತಗಳು ಸಾಮಾನ್ಯ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ ಕಸದ ಲಾರಿಗಳಿಗೆ ಸಿಲುಕಿ ನಾಗರಿಕರು ಸಾವಿಗೀಡಾಗುತ್ತಿದ್ದಾರೆ. ನಾಯಂಡಹಳ್ಳಿ ಬಳಿ ಬಿಬಿಎಂಪಿಯ ಕಸದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಚಲಾಯಿಸುತ್ತಿದ್ದ ಪದ್ಮಿನಿ(39) ನಡುರಸ್ತೆಯಲ್ಲಿ ಪ್ರಾಣ ಚೆಲ್ಲಿದ್ದರು. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಾಲಕನನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನೆ ಅನೇಕ ಪ್ರಕರಣಗಳು ವರದಿಯಾಗಿದ್ದವು. ಪದೇಪದೆ ನಗರದಲ್ಲಿ ಬಿಬಿಎಂಪಿ ಕಸದ ಲಾರಿಗೆ ಒಬ್ಬರೊಲ್ಲ ಒಬ್ಬರು ಬಲಿಯಾಗುತ್ತಿದ್ದಾರೆ. ಪದ್ಮಿನಿ ಅವರ ಸಾವಿನ ನಂತರ ಸಾರ್ವಜನಿಕರಲ್ಲಿ ಬಿಬಿಎಂಪಿ ವಿರುದ್ಧ ಆಕ್ರೋಶ ಹೆಚ್ಚಳವಾಗಿದೆ. ಅನನುಭವಿ ಹಾಗೂ ಪರವಾನಗಿ ಇಲ್ಲದ ಚಾಲಕರು ಟ್ರಕ್‌ ಚಲಾಯಿಸುತ್ತಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಹೇಗೆ ಚಲಾಯಿಸಬೇಕೆನ್ನುವುದನ್ನು ಮರೆತಿದ್ದಾರೆ. ಆ ಲಾರಿಗಳು ಕಾನೂನು ಪ್ರಕಾರ ಅರ್ಹತಾ ಪ್ರಮಾಣಪತ್ರ ಹೊಂದಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಇದು ಬಿಬಿಎಂಪಿ ಅಧಿಕಾರಿಗಳನ್ನು ಎಚ್ಚರಗೊಳಿಸಿತ್ತು.

ಹೆಚ್ಚಿನ ಓದಿಗಾಗಿ: ಮಳೆಗೆ ಮುಳುಗಿದ ಬೆಂಗಳೂರು ಪ್ರದೇಶಗಳು: ಮನೆ, ದೇವಸ್ಥಾನಕ್ಕೆ ನುಗ್ಗಿದ ನೀರು

ಟ್ರಾಫಿಕ್‌ ಪೊಲೀಸರಿಗೆ ಪತ್ರ

ಕಸದ ಲಾರಿ ಚಾಲಕರ ನಿರ್ಲಕ್ಷ್ಯತನಕ್ಕೆ ಜನಾಕ್ರೋಶದ ಬೆನ್ನಲ್ಲೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಕ್ರಿಯಾಶೀಲರಾಗಿದ್ದಾರೆ. ಕಸದ ಲಾರಿಗಳ ಫಿಟ್ನೆಸ್‌ ಪ್ರಮಾಣಪತ್ರ ಹಾಗೂ ವಾಹನಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸುವಂತೆ ಸಂಚಾರಿ ಜಂಟಿ ಪೊಲೀಸ್‌ ಆಯಕ್ತರಿಗೆ ಪತ್ರ ಬರೆದಿದ್ದಾರೆ.

ಪೊಲೀಸರ ಸ್ಪೆಷಲ್‌ ಡ್ರೈವ್‌..!

ಬಿಬಿಎಂಪಿಯಿಂದ ಪತ್ರ ಬಂದ ಬೆನ್ನಲ್ಲೆ ಸಂಚಾರ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡರು ತಮ್ಮ ಸಿಬ್ಬಂದಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ರಾತ್ರಿ ಸ್ಪೆಷಲ್‌ ಡ್ರೈವ್‌ ಮಾಡಿರುವ ಸಂಚಾರಿ ಪೊಲೀಸರು ಹಲವು ಕಸದ ವಾಹನಗಳ ತಪಾಸಣೆ ನಡೆಸಿ ಜಪ್ತಿ ಮಾಡುವ ಜೊತೆಗೆ ಪ್ರಕರಣ ದಾಖಲಿಸಿದ್ದಾರೆ. ಮಾರನೆಯ ದಿನವೂ ಬೆಳ್ಳಂಬೆಳಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಹಲವು ವಾಹನಗಳು ನಿಯಮ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿವೆ. ಈ ವೇಳೆ ಪೊಲೀಸರು ಒಟ್ಟು 652 ವಾಹನಗಳನ್ನು ತಪಾಸಣೆ ಮಾಡಿದ್ದಾರೆ. ಇದರಲ್ಲಿ ಫಿಟ್ನೆಸ್‌ ಸರ್ಟಿಫಿಕೇಟ್‌, ಲೈಸೆನ್ಸ್‌ ಇಲ್ಲದ 9 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.

ತಪಾಸಣೆಯ ವೇಳೆ ಓರ್ವ ಚಾಲಕ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವುದು ಬೆಳಕಿಗೆ ಬಂದಿದ್ದು ಒಂದು ಕಸದ ವಾಹನ ಜಪ್ತಿ ಮಾಡಲಾಗಿದೆ. ಕಸ ವಿಲೇವಾರಿ ಮಾಡುವ ವಾಹನಗಳಿಗೂ ಸ್ಪೀಡ್‌ ಗವರ್ನರ್‌ ಅಳಡಿಸುವಂತೆ ಬಿಬಿಎಂಪಿಗೆ ಪೊಲೀಸರು ಸಲಹೆ ನೀಡಿದ್ದಾರೆ. ಈ ಮೂಲಕ ಕಸದ ಲಾರಿಯಿಂದ ಆಗುತ್ತಿರುವ ಅಪಘಾತಗಳನ್ನ ತಡೆಯಲು ಚಿಂತಿಸಲಾಗಿದೆ ಎಂದು ನಗರ ಸಂಚಾರಿ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡರು ಸ್ಪಷ್ಟ ಪಡಿಸಿದ್ದಾರೆ.

ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಗೌರವ್‌ ಗುಪ್ತಾ ಅವರು ಪತ್ರ ಬರೆದರು, ಸಂಚಾರಿ ಪೊಲೀಸರು ಅದರಂತೆ ತಪಾಸಣೆಯನ್ನೂ ಮಾಡಿದರು. ಆದರೆ ಅಸಲಿಗೆ ವಾಹನಗಳ ಫಿಟ್ನೆಸ್‌ ಪ್ರಮಾಣಪತ್ರಗಳನ್ನು ತಪಾಸಣೆ ಮಾಡಬೇಕಾಗಿರುವುದು ಸಂಚಾರಿ ಪೊಲೀಸರ ಕೆಲಸವಲ್ಲ. ಆರ್‌ಟಿಒ ಅಧಿಕಾರಿಗಳು ಈ ಕೆಲಸ ಮಾಡಬೇಕು. ಈ ವಿಚಾರ ಗೌರವ್‌ ಗುಪ್ತ ಅವರಿಗೂ ತಿಳಿಯಲಿಲ್ಲ. ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರೂ ಆಲೋಚಿಸಲಿಲ್ಲ. ನಗರದಲ್ಲಿ ಅಪಘಾತಗಳು ಸಂಭವಿಸುತ್ತಿದ್ದರೂ ತಮಗೂ ಇದಕ್ಕೂ ಸಂಬಂಧವಿಲ್ಲವೆನ್ನುವಂತೆ ಆರ್‌ಟಿಒ ಅಧಿಕಾರಿಗಳು ಮಾತ್ರ ತಮ್ಮ ಪಾಡಿಗೆ ತಾವಿದ್ದಾರೆ.

ಪೊಲೀಸ್‌ ಕಾರ್ಯಾಚರಣೆ ಅಂಕಿ ಅಂಶಗಳು

ವರದಿ: ಸಂತೋಷ್‌

Exit mobile version