Site icon Vistara News

BBMP ಮೀಸಲಾತಿ ಎಡವಟ್ಟು: ಕಾಂಗ್ರೆಸ್‌ ಕ್ಷೇತ್ರದಲ್ಲಿ 72%, BJP ಕ್ಷೇತ್ರದಲ್ಲಿ 34% ಮಹಿಳಾ ಮೀಸಲು

Congress and Bjp

ರಮೇಶ ದೊಡ್ಡಪುರ, ಬೆಂಗಳೂರು
ಬಿಬಿಎಂಪಿ ಮೀಸಲಾತಿಯನ್ನು ನಿಗದಿ ಮಾಡುವ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರಿರುವ ಕ್ಷೇತ್ರವನ್ನು ಟಾರ್ಗೆಟ್‌ ಮಾಡಲಾಗಿದೆಯೇ ಎಂಬ ಬಲವಾದ ಅನುಮಾನ ಮೂಡಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳ ಒಟ್ಟು ವಾರ್ಡ್‌ಗಳಲ್ಲಿ ಶೇ.೩೪ರಲ್ಲಿ ಮಹಿಳಾ ಮೀಸಲು ನಿಗದಿ ಮಾಡಿದ್ದಾರೆ, ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳ ವಾರ್ಡ್‌ಗಳಲ್ಲಿ ಶೇ.೭೨ ಮಹಿಳಾ ಮೀಸಲು ನಿಗದಿ ಮಾಡಲಾಗಿದೆ.

ಎಂಟು ವಾರದೊಳಗೆ ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸುವಂತೆ ಮೇ ತಿಂಗಳಿನಲ್ಲಿ ಸುಪ್ರೀಂಕೋರ್ಟ್‌ ತಿಳಿಸಿತ್ತು. ಅದರಂತೆ ಮರುವಿಂಗಡಣೆ ಮಾಡಿದ್ದ ಸರ್ಕಾರ ಬುಧವಾರವಷ್ಟೆ ಮೀಸಲು ನಿಗದಿಪಡಿಸಿ ಕರಡು ಪ್ರಕಟಿಸಿದೆ.

2021ರ ಜನಗಣತಿಯ ಆಧಾರದ ಮೇರೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 243 ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಸಕ್ತರು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬಹುದಾಗಿರುತ್ತದೆ. ಬೆಂಗಳೂರಿನ ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿರುವ 436ನೇ ಕೊಠಡಿಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ತಮ್ಮ ಆಕ್ಷೇಪಣೆಯನ್ನು ಏಳು ದಿನಗಳ ಒಳಗೆ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಬಿಜೆಪಿ ಶಾಸಕರ ಪ್ರದೇಶದಲ್ಲಿ ಹೆಚ್ಚು ವಾರ್ಡ್‌

ಹೊಸದಾಗಿ ನಿಗದಿಪಡಿಸಿದ ವಾರ್ಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯವು ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ರೂಪಿತವಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ 15 ಬಿಜೆಪಿ, 12 ಕಾಂಗ್ರೆಸ್‌ ಹಾಗೂ 1 ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಹೊಸದಾಗಿ ರೂಪಿಸಲಾಗಿರುವ 243 ವಾರ್ಡ್‌ಗಳಲ್ಲಿ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ 145 ವಾರ್ಡ್‌ಗಳಿದ್ದರೆ ಕಾಂಗ್ರೆಸ್‌ ಶಾಸಕರಿರುವ ವಾರ್ಡ್‌ಗಳಲ್ಲಿ 86 ಹಾಗೂ ಜೆಡಿಎಸ್‌ ಶಾಸಕರ ಕ್ಷೇತ್ರದಲ್ಲಿ 12 ವಾರ್ಡ್‌ಗಳಿವೆ.

ಬಿಜೆಪಿ ಶಾಸಕರ ವ್ಯಾಪ್ತಿಯ 145 ವಾರ್ಡ್‌ಗಳಲ್ಲಿ 50(ಶೇ. 34.4) ಮಹಿಳಾ ಮೀಸಲು ಮಾಡಲಾಗಿದೆ. ಕಾಂಗ್ರೆಸ್ ಶಾಸಕರ ವ್ಯಾಪ್ತಿಯ 86 ವಾರ್ಡ್‌ಗಳಲ್ಲಿ 62 (ಶೇ.72) ಮಹಿಳಾ ಮೀಸಲು ನಿಗದಿ ಮಾಡಲಾಗಿದೆ. ಜೆಡಿಎಸ್‌ ಶಾಸಕರ ವ್ಯಾಪ್ತಿಯ 12ರಲ್ಲಿ 9ನ್ನು ಮಹಿಳಾ ಮೀಸಲು ಮಾಡಲಾಗಿದೆ.

ಜನರಲ್‌ನಲ್ಲಿ ಬಿಜೆಪಿ ಮುಂದು

ಎಸ್‌ಸಿಎಸ್‌ಟಿ ವಾರ್ಡ್‌ಗಳ ಪೈಕಿ ಬಿಜೆಪಿ ಶಾಸಕರ ವ್ಯಾಪ್ತಿಯಲ್ಲಿ ಕೇವಲ ಶೇ.8.9 ಮೀಸಲಿದ್ದರೆ, ಕಾಂಗ್ರೆಸ್‌ ಶಾಸಕರ ವ್ಯಾಪ್ತಿಯಲ್ಲಿ ಶೇ. 20ನ್ನು ಎಸ್‌ಸಿಎಸ್‌ಟಿ ಮೀಸಲು ಮಾಡಲಾಗಿದೆ. ಜನರಲ್‌ ವಾರ್ಡ್‌ಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಹೆಚ್ಚಿನ ಅಂತರವಿಲ್ಲ. ಬಿಜೆಪಿ ಶಾಸಕರ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಶೇ. 54.4 ಜನರಲ್‌ ಮೀಸಲಿದ್ದರೆ, ಕಾಂಗ್ರೆಸ್‌ ಶಾಸಕರ ವ್ಯಾಪ್ತಿಯಲ್ಲಿ ಶೇ. 51 ಜನರಲ್‌ ವಾರ್ಡ್‌ಗಳಿವೆ. ಹಿಂದುಗಳಿದ ವರ್ಗ ಮೀಸಲಿನಲ್ಲಿ ಬಿಜೆಪಿ ಶಾಸಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.54.4 ಹಾಗೂ ಕಾಂಗ್ರೆಸ್‌ ಶಾಸಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.27 ಮೀಸಲಿದೆ.

ಇದನ್ನೂ ಓದಿ | BBMP ಮೀಸಲಾತಿ ಎಡವಟ್ಟು: ಸಂಪೂರ್ಣ ವಾರ್ಡ್‌ ಮಹಿಳಾ ಮೀಸಲು, SCST ಪ್ರಮಾಣ ಕಡಿತ

ಬಿಜೆಪಿ ಶಾಸಕರಿಂದಲೇ ಪಿತೂರಿ ಆರೋಪ

ಕಾಂಗ್ರೆಸ್‌ ಶಾಸಕರ ಕ್ಷೇತ್ರದಲ್ಲಿ ಹೆಚ್ಚಿನ ಮಹಿಳಾ ಮೀಸಲು ನಿಗದಿಪಡಿಸುವುದರ ಹಿಂದೆ, ರಾಜಕೀಯ ಲೆಕ್ಕಾಚಾರ ಅಡಗಿದೆ ಎಂದು ಮೂಲಗಳು ತಿಳಿಸಿವೆ. ಈಗಲೇ ಚುನಾವಣೆ ನಡೆದು ಕಾಂಗ್ರೆಸ್‌ ಶಾಸಕರ ಕ್ಷೇತ್ರದಲ್ಲಿ ಅದೇ ಪಕ್ಷದ ಹೆಚ್ಚು ಕಾರ್ಪೊರೇಟರ್‌ಗಳು ಆಯ್ಕೆಯಾದರೆ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ಕಾಲಾಳುಗಳ ಸಂಖ್ಯೆ ಹೆಚ್ಚುತ್ತದೆ. ಇದೀಗ ಮಹಿಳಾ ಮೀಸಲು ನಿಗದಿಪಡಿಸುವ ಮೂಲಕ ಹತ್ತಕ್ಕೂ ಹೆಚ್ಚು ಕಾಂಗ್ರೆಸ್‌ನ ಪ್ರಮುಖ ಮಾಜಿ ಕಾರ್ಪೊರೇಟರ್‌ಗಳು ಬಿಬಿಎಂಪಿ ಸದಸ್ಯರಾಗದಂತೆ ತಡೆಯಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಇನ್ನೊಂದು ಲೆಕ್ಕಾಚಾರದಂತೆ, ಬಿಜೆಪಿ ನಾಯಕರೇ ಸ್ವಪಕ್ಷೀಯರು ಬೆಳೆಯದಂತೆ ತಡೆದಿದ್ದಾರೆ. ಬಿಬಿಎಂಪಿ ಮೇಯರ್‌ ಆಗಿದ್ದ ಗೌತಮ್‌ ಕುಮಾರ್‌ ಜೈನ್‌ ಅವರು ಶಾಂತಿನಗರದ ಜೋಗುಪಾಳ್ಯ ವಾರ್ಡ್‌ ಸದಸ್ಯರಾಗಿದ್ದರು. ಆದರೆ ಇದೀಗ ಆ ವಾರ್ಡ್‌ ಅನ್ನು ಮಹಿಳಾ ಮೀಸಲು ಮಾಡಲಾಗಿದೆ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಂತಿನಗರದ ದೊಮ್ಮಲೂರು ವಾರ್ಡ್‌ನಿಂದ ಜಯಗಳಿಸಿದ್ದವರು ಸಿ.ಆರ್‌. ಲಕ್ಷ್ಮೀನಾರಾಯಣ. ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಆದರೆ ಇದೀಗ ದೊಮ್ಮಲೂರು ವಾರ್ಡ್‌ ಅನ್ನು ಎಸ್‌ಸಿ ಮೀಸಲು ಮಾಡಲಾಗಿದೆ. ಈ ಮೂಲಕ ಭವಿಷ್ಯದ ಬಿಜೆಪಿ ನಾಯಕರನ್ನು ಬಿಜೆಪಿ ನಾಯಕರೇ ತುಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ಬೆಂಗಳೂರು ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ | BBMP Election | ವಾರ್ಡ್‌ವಾರು ಮೀಸಲಾತಿಯ ಕರಡು ಅಧಿಸೂಚನೆ ಹೊರಡಿಸಿದ ಸರ್ಕಾರ

Exit mobile version