ಬೆಂಗಳೂರು: ಬಿಬಿಎಂಪಿ ವಾರ್ಡ್ ಮರುವಿಂಗಡಣೆಯನ್ನು ಸೂಕ್ತ ಪ್ರಕ್ರಿಯೆ ಅನುಸರಿಸದೆಯೇ ಬಿಜೆಪಿ ಕಚೇರಿ ಹಾಗೂ ಕೇಶವ ಕೃಪಾದಲ್ಲಿ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ನಮಗೆ ವಾರ್ಡ್ ಮರುವಿಂಗಡಣೆ ಕುರಿತ ಪ್ರತಿ ಕೈಗೆ ಸಿಕ್ಕಿಲ್ಲ. ನಾನು ಕೂಡ ವಾರ್ಡ್‌ಗಳ ಪಟ್ಟಿ ನೋಡಿದೆ. ಬೌಂಡರಿಯ ಕುರಿತು ಸ್ಪಷ್ಟತೆ ಸಿಗುತ್ತಿಲ್ಲ. ಇದನ್ನು ಸರ್ಕಾರ ಮುಗುಮ್ಮಾಗಿ ಇಟ್ಟಿದೆ. ನನ್ನ ಕ್ಷೇತ್ರದಲ್ಲಿರುವ ವಾರ್ಡ್ ಪಟ್ಟಿ ನೋಡಿದ ನಂತರ ನನಗೆ ನನ್ನ ಕ್ಷೇತ್ರದ ವ್ಯಾಪ್ತಿ ಅಂದಾಜಿಗೇ ಸಿಗುತ್ತಿಲ್ಲ. ಇದರ ಪ್ರತಿ ಸಿಕ್ಕ ನಂತರ ನಮ್ಮ ಕ್ಷೇತ್ರದ ವ್ಯಾಪ್ತಿ ಎಷ್ಟಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ನಂತರ ನಾವು ಎಲ್ಲೆಲ್ಲಿ ಲೋಪದೋಷಗಳಿವೆಯೋ ಆ ವಿಚಾರದಲ್ಲಿ ಆಕ್ಷೇಪವನ್ನು ಸಲ್ಲಿಸುತ್ತೇವೆ.
ಇದನ್ನೂ ಓದಿ | ಬಿಬಿಎಂಪಿ 243 ವಾರ್ಡ್ ರಚನೆಯಾಗಿದ್ದು ಸಂಖ್ಯಾಶಾಸ್ತ್ರದ ಆಧಾರದಲ್ಲಿ!
ಈ ಹಿಂದೆ ಮರುವಿಂಗಡಣೆಯನ್ನು ಪಾಲಿಕೆಯಲ್ಲಿ ಮಾಡದೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮಾಡುತ್ತಿದ್ದರು. ಈ ಬಾರಿ ಪಾಲಿಕೆ ಮುಖ್ಯ ಆಯುಕ್ತರನ್ನು ಮರುವಿಂಗಡಣೆ ಸಮಿತಿ ಮುಖ್ಯಸ್ಥರನ್ನಾಗಿ ಮಾಡಿ ಉಳಿದಂತೆ ಇಬ್ಬರು ಹಿರಿಯ ಅಧಿಕಾರಿಗಳನ್ನು ಸಂಚಾಲಕರನ್ನಾಗಿ ಮಾಡಿದ್ದಾರೆ. ರೆವೆನ್ಯೂ ಕಚೇರಿಗಳಿಗೆ ವರದಿ ಬರಲೇ ಇಲ್ಲ. ಪಾಲಿಕೆಯ ಯಾವ ಅಧಿಕಾರಿಗಳ ಗಮನಕ್ಕೂ ಬರಲಿಲ್ಲ. ಈ ಮರುವಿಂಗಡಣೆ ಪ್ರಕ್ರಿಯೆ ಬಿಜೆಪಿ ಪಕ್ಷದ ಕಚೇರಿ, ಕೇಶವಕೃಪಾ, ಬಿಜೆಪಿ ಸಂಸದರು, ಶಾಸಕರ ಕಚೇರಿಯಲ್ಲಿ ಮಾಡಲಾಗಿದೆ. ಇವರು ಕೊಟ್ಟ ವರದಿಗೆ ಆಯುಕ್ತರು ಮುದ್ರೆ ಒತ್ತಿದ್ದಾರೆ.
ವಾರ್ಡ್ ಮರುವಿಂಗಡಣೆಯಲ್ಲಿ ಈ ಸಮಿತಿಯ ಯಾವ ಪಾತ್ರವೂ ಇಲ್ಲ. ಜಂಟಿ ಆಯುಕ್ತರು, ಆಯುಕ್ತರಿಗೆ ಈ ಬಗ್ಗೆ ಮಾಹಿತಿ ಇಲ್ಲ. ವರದಿಯಲ್ಲಿ 11 ಸಭೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಾರ್ಡ್ ಮರುವಿಂಗಡಣೆ 100% ವೈಜ್ಞಾನಿಕವಾಗಿ ಆಗಿಲ್ಲ. ಬೇಕಾದರೆ ನೀವು 28 ಕ್ಷೇತ್ರಗಳ ಅಧಿಕಾರಿಗಳ ಬಳಿ ಹೋಗಿ, ವಾರ್ಡ್ ಮರುವಿಂಗಡಣೆ ಮಾಡಿದ್ದೀರಿಯೇ ಎಂದು ಕೇಳಿ ನೋಡಿ. ಎಲ್ಲರೂ ನಮಗೆ ಆ ಬಗ್ಗೆ ಗೊತ್ತಿಲ್ಲ ಅಂತಲೇ ಹೇಳುತ್ತಾರೆ ಎಂದರು.
ಈಗ ಚುನಾವಣೆ ನಡೆದರೆ ನಿಮಗೆ ಕಷ್ಟವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ‘ಚುನಾವಣೆಯನ್ನು ಇಂದಲ್ಲ ನಾಳೆ ಮಾಡಲೇ ಬೇಕು. ಇದನ್ನು ಎಷ್ಟು ವರ್ಷ ಮುಂದಕ್ಕೆ ಹಾಕಲು ಸಾಧ್ಯ? ಆದರೆ ವಾಸ್ತವ ಸ್ಥಿತಿ ಏನಾಗಿದೆ ಎಂದು ಹೇಳುತ್ತಿದ್ದೇನೆ. ನೀವು ಇದನ್ನು ಪರಿಶೀಲಿಸಬೇಕಾದರೆ ಅಧಿಕಾರಿಗಳನ್ನೇ ಕೇಳಿ’ ಎಂದರು.
ಈ ಮರುವಿಂಗಡಣೆ ವಿರುದ್ಧ ನ್ಯಾಯಾಲಯ ಮೆಟ್ಟಿಲೇರುತ್ತೀರಾ ಎಂಬ ಕುರಿತು ಪ್ರತಿಕ್ರಿಯಿಸಿ, ‘ಸದ್ಯ ನಮಗೆ ವಾರ್ಡ್ ಮರುವಿಂಗಡಣೆ ಪ್ರತಿ ಸಿಗಬೇಕು. ನಂತರ ಅವುಗಳನ್ನು ಪರಿಶೀಲಿಸಿ ಆಕ್ಷೇಪಣೆ ವ್ಯಕ್ತಪಡಿಸುತ್ತೇವೆ. ನಂತರ ನ್ಯಾಯಾಲಯದ ಮೆಟ್ಟಿಲೇರುವ ವಿಚಾರ. ಅವರು ಎಲ್ಲವನ್ನು ಸರಿಯಾಗಿ ಮಾಡಿದ್ದರೆ ನಾವು ಒಪ್ಪುತ್ತೇವೆ. ಇಲ್ಲದಿದ್ದರೆ ಆಕ್ಷೇಪಣೆ ಹಾಕುತ್ತೇವೆ. ನಂತರ ಏನು ಮಾಡಬೇಕು ಎಂದು ನಿರ್ಧರಿಸುತ್ತೇವೆʼ ಎಂದರು.
ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ವಾರ್ಡ್ ಹೆಚ್ಚಳ ಮಾಡಿಕೊಂಡು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ವಾರ್ಡ್ ಕಡಿಮೆ ಮಾಡಿರುವ ತಂತ್ರಗಾರಿಕೆ ಏನು ಎಂಬ ಪ್ರಶ್ನೆಗೆ ಉತ್ತರಿಸಿ, ‘ಅವರ ತಂತ್ರಗಾರಿಕೆ ಬಗ್ಗೆ ನೀವು ಅವರನ್ನೇ ಕೇಳಬೇಕು. ಅವರು ಕ್ಷೇತ್ರ ಹೆಚ್ಚಾಗಿ ಮಾಡಿಕೊಂಡರೆ ಗೆಲ್ಲುತ್ತೇವೆ ಎಂದು ಭಾವಿಸಿದ್ದಾರೆ. ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಯನ್ನೇ ನೋಡಿ. ನಮ್ಮದು ಒಂದೇ ಒಂದು ಸ್ಥಾನ ಇಲ್ಲದಿದ್ದರೂ 2 ಸ್ಥಾನ ಗೆದ್ದಿದೇವೆ. ಏನೇ ಮಾಡಿದರೂ ಬದಲಾವಣೆ ಗಾಳಿ ಬೀಸಿದರೆ ಎಲ್ಲರೂ ಉದುರಿ ಹೋಗುತ್ತಾರೆ’ ಎಂದು ರಾಂಲಿಂಗಾರೆಡ್ಡಿ ತಿಳಿಸಿದರು.
ಇದನ್ನೂ ಓದಿ | ಇತಿಹಾಸವನ್ನು ತಿರುಚಿ ಬರೆದ ಪಠ್ಯ ಪುಸ್ತಕ: ರಾಮಲಿಂಗಾರೆಡ್ಡಿ ಆರೋಪ