Site icon Vistara News

ಬಿಬಿಎಂಪಿ 243 ವಾರ್ಡ್‌ ರಚನೆಯಾಗಿದ್ದು ಸಂಖ್ಯಾಶಾಸ್ತ್ರದ ಆಧಾರದಲ್ಲಿ!

bbmp-wards-formed-on-numerology-basis

ರಮೇಶ ದೊಡ್ಡಪುರ ಬೆಂಗಳೂರು
ಕರ್ನಾಟಕದ ಐದನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸುಮಾರು ಒಂದೂವರೆ ವರ್ಷದಿಂದ ಚುನಾವಣೆ ಇಲ್ಲದೆ ಬಡವಾಗಿದೆ. ಇದೀಗ ಸುಪ್ರೀಂಕೋರ್ಟ್‌ ಆದೇಶಕ್ಕೆ ಕಟ್ಟುಬಿದ್ದು ಗಡಿಬಿಡಿಯಲ್ಲಿ ವಾರ್ಡ್‌ ಮರುವಿಂಗಡಣೆ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿದೆ. ಈ ಹಿಂದೆ ಇದ್ದ 198 ವಾರ್ಡ್‌ಗಳ ಸಂಖ್ಯೆ ಇದೀಗ 243ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಇದರಲ್ಲಿ ಆಸಕ್ತಿಕರ ವಿಚಾರ ಏನು ಎಂದರೆ, 243 ವಾರ್ಡ್‌ ನಿಗದಿ ಮಾಡಲು ಬಳಸಿದ್ದು “ಸಂಖ್ಯಾಶಾಸ್ತ್ರʼದ ಮಾರ್ಗ ಎನ್ನುವುದು!

ಗುರುವಾರ ಹೊರಡಿಸಿದ ಕರಡು ಅಧಿಸೂಚನೆಯಲ್ಲಿ ರಾಜ್ಯ ಸರ್ಕಾರ ಈ ಕೆಳಕಂಡಂತೆ ಹೇಳಿದೆ: “ಬಿಬಿಎಂಪಿ ವ್ಯಾಪ್ತಿಯಲ್ಲಿರುವ 198 ವಾರ್ಡ್‌ಗಳ ಜನಸಂಖ್ಯೆಯಲ್ಲಿ ಅಸಮಾನತೆ ಸೃಷ್ಟಿಯಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರ ಬಿಬಿಎಂಪಿಯ ವಾರ್ಡ್‌ಗಳನ್ನು 198ರಿಂದ 243ಕ್ಕೆ ಹೆಚ್ಚಿಸಿದೆ. ಜನಸಂಖ್ಯೆಯ ಏಕರೂಪತೆಯನ್ನು ಸಾಧಿಸುವ ಸಲುವಾಗಿ 243 ವಾರ್ಡ್‌ಗಳ ಸೀಮಾರೇಖೆಯನ್ನು ಗುರುತಿಸುವ ಕಾರ್ಯ ನಿರ್ವಹಿಸಲು ಕರ್ನಾಟಕ ಸರ್ಕಾರವು ಪುನರ್ವಿಂಗಡಣಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು BBMP Act 2020 ಮತ್ತು ರಾಜ್ಯಪತ್ರದಲ್ಲಿನ ಮಾನದಂಡಗಳನ್ನು ಅನುಸರಿಸಿ, 2011ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡ್‌ಗಳ ವಿಂಗಡಣೆ ಮಾಡಿ ಗಡಿಗಳನ್ನು ಗುರುತಿಸಿದೆ”. ಆದರೆ ಇದರಲ್ಲಿರುವ ಕೊನೆಯ ವಾಕ್ಯ ಬಹುತೇಕ ಸುಳ್ಳು.

ಇದನ್ನೂ ಓದಿ | BBMP Election | 8 ವಾರದೊಳಗೆ ಬಿಬಿಎಂಪಿ ವಾರ್ಡ್‌ ವಿಂಗಡಣೆಗೆ ಸುಪ್ರೀಂ ಸೂಚನೆ

2020ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಅವಧಿ ಮುಕ್ತಾಯವಾಗುವುದಿತ್ತು. ಈ ಸಮಯದಲ್ಲಿ ಚುನಾವಣೆ ಸಿದ್ಧತೆ ಮಾಡಿಕೊಳ್ಳುವ ಬದಲು ಅಂದಿನ ಸರ್ಕಾರದ ಜತೆ ಸೇರಿದ ಬೆಂಗಳೂರಿನ ಎಲ್ಲ ಶಾಸಕರು ಹಾಗೂ ಮೂರೂ ಪಕ್ಷಗಳು ಚುನಾವಣೆ ಮುಂದೂಡುವ ತಂತ್ರ ಹೂಡಿದವು. ಬಿಬಿಎಂಪಿ ಆಡಳಿತಕ್ಕೆ ಪ್ರತ್ಯೇಕ ಮಸೂದೆಯನ್ನು ಸಿದ್ಧಪಡಿಸಲಾಯಿತು. ಈ ಕುರಿತು ಸಮಗ್ರ ಚಿಂತನೆ ನಡೆಸಿ, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ವರದಿ ನೀಡುವಂತೆ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಗೆ ಬೆಂಗಳೂರಿನ ಸಿ.ವಿ. ರಾಮನ್‌ ನಗರದ ಬಿಜೆಪಿ ಶಾಸಕ ಎಸ್‌. ರಘು ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು.

ಸಂಖ್ಯಾ ಶಾಸ್ತ್ರದ ಆಧಾರದಲ್ಲಿ ವಾರ್ಡ್​

ಸಮಿತಿಯು ಅನೇಕ ಸಭೆಗಳನ್ನು ನಡೆಸಿತು. ಅದರಂತೆ, 2011ರ ಜನಗಣತಿಯ ಪ್ರಕಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರದೇಶದಲ್ಲಿನ ಜನಸಂಖ್ಯೆ 84,43,675 ಇತ್ತು. ಈಗ ಜನಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ ಹಾಗೂ ಹೊಸದಾಗಿ ಬೆಂಗಳೂರಿಗೆ ಸೇರ್ಪಡೆ ಆದ ಸ್ಥಳಗಳಲ್ಲಿ ಜನಸಂಖ್ಯೆ ವೃದ್ಧಿ ವೇಗವಾಗಿದೆ. ಪ್ರತಿ ವಾರ್ಡ್‌ನಲ್ಲಿ ಸರಾಸರಿ 35 ಸಾವಿರ ಜನಸಂಖ್ಯೆ ಇರುವಂತೆ ವಾರ್ಡ್‌ ವಿಂಗಡಣೆಗೆ ಮುಂದಾಗಲಾಯಿತು.

ಈ ಲೆಕ್ಕದಂತೆ ವಾರ್ಡ್​ಗೆ ತಲಾ 35 ಸಾವಿರದಂತೆ ಸದನ ಸಮಿತಿಯು ಭಾಗಿಸಿದಾಗ ಅದರಿಂದ 241.3 ಫಲಿತಾಂಶ ಬಂದಿತ್ತು. ಅದನ್ನು ಪೂರ್ಣ ಸಂಖ್ಯೆಯಾಗಿ 242 ವಾರ್ಡ್​ ನಿಗದಿಪಡಿಸಬೇಕು ಎಂಬ ಚರ್ಚೆ ನಡೆದಿತ್ತು. ಆದರೆ ಶಾಸಕ ರಘು ಅವರಿಗೆ ಇಲ್ಲಿ ತಕರಾರಿತ್ತು. 242ನ್ನು ಸಂಖ್ಯಾಶಾಸ್ತ್ರದ ಪ್ರಕಾರ ಕೂಡಿಸಿದರೆ 8 ಬರುತ್ತದೆ (2+4+3=9). 8 ಎಂಬ ಸಂಖ್ಯೆ ನಮಗೆ ಆಗಿ ಬರುವುದಿಲ್ಲ. 9 ಉತ್ತಮ ಸಂಖ್ಯೆ. ಅದೃಷ್ಟದ ಸಂಖ್ಯೆ 9 ಬರಲಿ ಎಂದು 243 (2+4+3=9) ನಿಗದಿಪಡಿಸಲಾಯಿತು. ಈ ಮಾತನ್ನು ಸ್ವತಃ ಎಸ್‌. ರಘು ಹಿಂದೊಮ್ಮೆ ಮಾಧ್ಯಮಗಳ ಮುಂದೆ ತಿಳಿಸಿದ್ದರು.

ಸಮಿತಿಯಲ್ಲಿ 243 ಎಂದು ತೀರ್ಮಾನವಾದರೂ ಸರ್ಕಾರಕ್ಕೆ ವರದಿ ಸಲ್ಲಿಸುವಾಗ ವಾರ್ಡ್​ ಸಂಖ್ಯೆಯನ್ನು ನಿಗದಿಪಡಿಸಲಿಲ್ಲ. 198 ವಾರ್ಡ್​ಗಳನ್ನು ಕನಿಷ್ಟ 225ರಿಂದ ಗರಿಷ್ಠ 250ರವರೆಗೆ ಮರುವಿಂಗಡಣೆ ಮಾಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಲಾಯಿತು. ಅಚ್ಚರಿ ಎಂದರೆ 225-250ರವರೆಗಿನ ಸಂಖ್ಯೆಗಳಲ್ಲಿ ರಾಜ್ಯ ಸರ್ಕಾರವೂ 243ನ್ನೇ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಈಗ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟಿನಲ್ಲಿ ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆಯ ಬೆಂಗಳೂರನ್ನು ಆಳುವವರ ಸಂಖ್ಯೆಯನ್ನು ಸಂಖ್ಯಾಶಾಸ್ತ್ರದ ಪ್ರಕಾರ ನಿರ್ಧಾರ ಮಾಡಲಾಗಿದೆ, “ವಾಸ್ತು ಪ್ರಕಾರʼ ಬೆಂಗಳೂರು ಅಭಿವೃದ್ಧಿಯೂ ಉತ್ತಮವಾಗಿ ನಡೆಯುವುದೇ ನೋಡಬೇಕು.

ಇದನ್ನೂ ಓದಿ | ಬಿಬಿಎಂಪಿ ಚುನಾವಣೆಗೆ ಮತ್ತೊಂದು ಅಡೆ ನಿವಾರಣೆ: 198ರಿಂದ 243ಕ್ಕೆ ವಾರ್ಡ್‌ ಹೆಚ್ಚಿಸಿ ಕರಡು ಪ್ರಕಟ

Exit mobile version