Site icon Vistara News

ಬೆಂಗಳೂರಲ್ಲಿ ಖಾಲಿ ಸೈಟು ಬಿಟ್ಟಿದೀರಾ? ಇನ್ಯಾರದೋ ಹೆಸರಿಗೆ ಹೋಗಿರಬಹುದು ಹುಷಾರ್!‌

bda property fraud

ಬೆಂಗಳೂರು: ಬೆಂಗಳೂರಿನಲ್ಲಿ ಸೈಟ್‌ ಮಾಡಿ ಅದನ್ನು ಹಾಗೇ ಖಾಲಿ ಬಿಟ್ಟಿದ್ದರೆ ಆಗಾಗ ಅದರ ದಾಖಲೆಗಳನ್ನು ಗಮನಿಸುತ್ತಿರಿ. ಇಲ್ಲವಾದರೆ ದಿಕ್ಕುದೆಸೆ ಇಲ್ಲದವರ ಹೆಸರಿಗೆ ನಿಮ್ಮ ಪ್ರಾಪರ್ಟಿ ರಿಜಿಸ್ಟರ್ ಆಗಿಬಿಟ್ಟಿರಬಹುದು! ಅಂಥದೊಂದು ವಂಚನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕೆ.ಜಿ ನಗರ ಪೊಲೀಸರು ಇಂಥ ವಂಚಕರ ಕೈಗೆ ಕೋಳ ತೊಡಿಸಿದ್ದಾರೆ. ಉದಯ್ ಪ್ರತಾಪ್ ಸಿಂಗ್, ಅಯೂಬ್ ಖಾನ್, ಮುರುಳೀಧರ ಅಲಿಯಾಸ್‌ ಡುಪ್ಲಿಕೇಟ್ ನರಸಯ್ಯ ಎಂಬವರನ್ನು ಬಂಧಿಸಲಾಗಿದೆ. ಇವರು ಬನಶಂಕರಿಯ ಡಾಕ್ಟರ್ ನರಸಯ್ಯ ಎಂಬವರ ಆಸ್ತಿಯನ್ನು ವಂಚನೆಯಿಂದ ಒಳಹಾಕಿದ್ದರು. ಅದು ಆದದ್ದು ಹೀಗೆ.

ಬನಶಂಕರಿಯಲ್ಲಿ ಡಾಕ್ಟರ್ ನರಸಯ್ಯ ಅವರು ಬಿಡಿಎಯ 60*40 ಜಾಗವನ್ನು ಹೊಂದಿದ್ದರು. ಜಾಗ ಖಾಲಿ ಇರುವುದು ತಿಳಿದು ವಂಚಕರು ನಕಲಿ ದಾಖಲೆ ಸೃಷ್ಟಿಗೆ ಮುಂದಾದರು. ಇದರ ಮಾಸ್ಟರ್ ಮೈಂಡ್ ಉದಯ್ ಪ್ರತಾಪ್ ಸಿಂಗ್ ಹಾಗೂ ಅಯೂಬ್ ಖಾನ್, ನರಸಯ್ಯನವರ ಹೆಸರಿನಲ್ಲಿ ನಕಲಿಯೊಬ್ಬನನ್ನು ಸೃಷ್ಟಿಸಿದರು. ಆತನೇ ಬಸವೇಶ್ವರ ನಗರದ ಮುರುಳೀಧರ. ಆತನನ್ನು ಬಳಸಿಕೊಂಡು ಚಾಮರಾಜಪೇಟೆ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿರುವ ಅಸಲಿ ನರಸಯ್ಯನವರ ಆಸ್ತಿ ದಾಖಲೆಗಳನ್ನು ಪಡೆದರು. ಬಿಡಿಎ ಅಲಾಟ್‌ಮೆಂಟ್ ಲೆಟರ್, ಬಿಡಿಎ ರಿಜಿಸ್ಟರ್ ಲೆಟರ್ ಸೃಷ್ಟಿ ಮಾಡಿ ಮಾರಾಟಕ್ಕೆ ಮುಂದಾದರು.

ಇದನ್ನೂ ಓದಿ | Bank Fraud | ಹೂಡಿಕೆ ಮಾಡಿದ್ದ ಹಣ ವಾಪಸ್‌ ಕೇಳಿದರೆ ಧಮ್ಕಿ; ಕೋಆಪರೇಟಿವ್‌ ಬ್ಯಾಂಕ್‌ನಿಂದ ವಂಚನೆ ಆರೋಪ

ಇದಕ್ಕಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಎಂಬಾತನನ್ನು ಖರೀದಿದಾರನಾಗಿ ಕರೆತಂದರು. ಪಿಎನ್‌ಬಿ ಬ್ಯಾಂಕಿನಲ್ಲಿ ಸುನೀಲನ ಸಂಬಳದ ಮೇಲೆ 1.40 ಕೋಟಿ ಲೋನ್ ಕೊಡಿಸಿದರು. ನಂತರ ನಕಲಿ ನರಸಯ್ಯನನ್ನು ಇಟ್ಟುಕೊಂಡು ಸುನೀಲನಿಗೆ ಪ್ರಾಪರ್ಟಿ ರಿಜಿಸ್ಟರ್ ಮಾಡಿಸಿದರು. ಯಾವಾಗ ರಿಯಲ್ ನರಸಯ್ಯ ಪ್ರಾಪರ್ಟಿಯ ಇಸಿ ತೆಗೆಸಿದರೋ, ಆಗ ಈ ಆಸ್ತಿ ಬೇರೆಯವರ ಹೆಸರಿಗೆ ರಿಜಿಸ್ಟರ್ ಆಗಿದೆ ಎಂಬುದು ಗೊತ್ತಾಯಿತು. ಅವರು ನೇರವಾಗಿ ವಿವಿ ಪುರಂ ಠಾಣೆಗೆ ಬಂದು ದೂರು ನೀಡಿದರು.

ಕೇಸು ಇದೀಗ ಕೆಜಿ ನಗರ ಠಾಣೆಗೆ ವರ್ಗಾವಣೆಯಾಗಿದೆ. ಕೆಜಿ ನಗರ ಇನ್ಸ್‌ಪೆಕ್ಟರ್ ರಕ್ಷಿತ್ ಅವರ ತಂಡ ವಂಚಕರನ್ನು ಬಂಧಿಸಿದೆ. ಆರೋಪಿಗಳ ಪೈಕಿ ಉದಯ್ ಪ್ರತಾಪ್ ಸಿಂಗ್ ಮೂಲತಃ ಬೆಂಗಳೂರಿನವನು. ಈಗ ನಾಗ್ಪುರದಲ್ಲಿ ವಾಸವಾಗಿರುವ ಉದಯ್ ಸಾಫ್ಟ್‌ವೇರ್ ಇಂಜಿನಿಯರ್. ಈ ಹಿಂದೆ ಪಾಸ್‌ಪೋರ್ಟ್ ಹಗರಣದಲ್ಲೂ ಈಗ ಸಿಕ್ಕಿಹಾಕಿಕೊಂಡಿದ್ದ. ಉಳಿದಂತೆ ಅಯೂಬ್ ಖಾನ್ ಬೇರೆಯವರ ಜಾಗದ ದಾಖಲೆ ತೆಗೆದು ಉದಯ್‌ಗೆ ಒದಗಿಸಿಕೊಡುತ್ತಿದ್ದ. ಇನ್ನು ನಕಲಿ ನರಸಯ್ಯ ಅಲಿಯಾಸ್‌ ಮುರುಳೀಧರ ಬಸವೇಶ್ವರನಗರದವನು. ಆಸ್ತಿ ಮಾರಾಟದಿಂದ ಬಂದ ಹಣವನ್ನು ಆರೋಪಿಗಳು ಹಂಚಿಕೊಂಡಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

ಇದನ್ನೂ ಓದಿ | ಸಾಯಿಬಾಬಾನ 3ನೇ ಅವತಾರ ಎಂದು ನಂಬಿಸಿ ಕೋಟ್ಯಂತರ ರೂ. ವಂಚನೆ: ನಕಲಿ ಬಾಬಾ ಪರಾರಿ!

Exit mobile version