ಬೆಂಗಳೂರು: ಬೇಲೆಕೇರಿ ಬಂದರು ಮೂಲಕ ಅಕ್ರಮ ಅದಿರು ನಾಪತ್ತೆ (Belekeri Port Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಐದು ವರ್ಷ ಜೈಲು ಶಿಕ್ಷೆ ಪ್ರಕಟಗೊಂಡಿದೆ. ಶಾಸಕ ಸತೀಶ್ ಸೈಲ್‌ಗೆ 7 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿ ಕೋರ್ಟ್ ಆದೇಶಿಸಿದೆ. ವಂಚನೆ ಪ್ರಕರಣದಲ್ಲಿ 7 ವರ್ಷ, ಕಳ್ಳತನ ಪ್ರಕರಣದಲ್ಲಿ ಮೂರು ವರ್ಷ ಹಾಗೂ ಒಂಬತ್ತು ಕೋಟಿ 60 ಲಕ್ಷ ರೂ. ದಂಡ ವಿಧಿಸಲಾಗಿದೆ. ಮೊದಲ ಕೇಸ್‌ನಲ್ಲಿ 6 ಕೋಟಿ ರೂ. ದಂಡ, 2ನೇ ಕೇಸ್‌ನಲ್ಲಿ 9.6 ಕೋಟಿ ರೂ., 3ನೇ ಕೇಸ್‌ನಲ್ಲಿ 9.36 ಕೋಟಿ ರೂ. 4 ಕೇಸ್‌ನಲ್ಲಿ 9.54 ಕೋಟಿ, 5ನೇ ಕೇಸ್‌ನಲ್ಲಿ 9.25 ಕೋಟಿ, 6ನೇ ಕೇಸ್‌ನಲ್ಲಿ 90 ಲಕ್ಷ ರೂ. ದಂಡವನ್ನು ಕೋರ್ಟ್ ವಿಧಿಸಿದೆ.
ಸಿಬಿಐ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ಹೇಮಾ ವಾದ ಮಂಡಿಸಿದ್ದರು. 3100 ಮೆಟ್ರಿಕ್ ಟನ್ ಅದಿರು ಕಳ್ಳಸಾಗಣಿಕೆ ಮಾಡಿದ್ದಾರೆ. ಆರೋಪಿಗಳಿಗೆ ಜೈಲು ಶಿಕ್ಷೆಯ ಜತೆಗೆ ದಂಡ ವಿಧಿಸುವಂತೆ ಮನವಿ ಮಾಡಿದ್ದರು. ಶಾಸಕ ಸತೀಶ್ ಸೈಲ್ ಪರವಾಗಿ ಹಿರಿಯ ವಕೀಲ ಡಿ ಮೂರ್ತಿ ವಾದಿಸಿದ್ದರು. ಮೆಡಿಕಲ್ ರೆಕಾರ್ಡ್‌ಗಳನ್ನು ಕೋರ್ಟ್‌ಗೆ ಸಲ್ಲಿಸಿ, ಕನಿಷ್ಠ ಶಿಕ್ಷೆ ನೀಡುವಂತೆ ವಿನಂತಿಸಿದ್ದರು. ಸುದೀರ್ಘ ವಾದ-ವಿವಾದ ಆಲಿಸಿದ್ದ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
ಬಂಧಿತ ಆರೋಪಿಗಳು
1) ಸತೀಶ್ ಸೈಲ್ ಕಾರವಾರ ಕಾಂಗ್ರೆಸ್ ಶಾಸಕ
2) ಮಹೇಶ್ ಬಿಳಿಯ ಡೆಪ್ಯೂಟಿ ಪೋರ್ಟ್ ಕನ್ಸರ್ವೇಟರ್ ಅಧಿಕಾರಿ
3) ಪ್ರೇಮಚಂದ್ ಗರ್ಗ್ ಲಾಲ್ವುಹಲ್ ಕಂಪೆನಿಯ ಮಾಲೀಕ
4) ಖಾರದಪುಡಿ ಮಹೇಶ್ ಶ್ರೀಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ
5) ಕೆ ವಿ ನಾಗರಾಜ್ ಮತ್ತು ಗೋವಿಂದರಾಜು – ಸ್ವಸ್ತಿಕ್ ಕಂಪೆನಿಯ ಮಾಲೀಕ
6) ಚೇತನ್ ಆಶಾಪುರ ಕಂಪೆನಿಯ ಮಾಲೀಕ