Site icon Vistara News

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

bengaluru karaga in darga

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru karaga Festival) ಮಂಗಳವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು. ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ (Dharmaraya swamy) ರಥೋತ್ಸವ ಬಳಿಕ ರಾತ್ರಿ 2 ಗಂಟೆಗೆ ಕರಗ ಶಕ್ತ್ಸೋತ್ಸವಕ್ಕೆ (Bangalore Karaga) ಚಾಲನೆ ನೀಡಲಾಯಿತು. ಮುಂಜಾನೆ ಹಾಜಿ ಮಸ್ತಾನ್‌ ಸಾಬ್‌ ದರ್ಗಾಗೂ (Haji Mastan Saab Darga) ಭೇಟಿ ಕೊಟ್ಟು 5.45ರ ವೇಳೆಗೆ ಧರ್ಮರಾಯ ಸ್ವಾಮಿ ದೇವಸ್ಥಾನದೊಳಗೆ ಕರಗ ಸೇರಿಕೊಂಡಿತು. ವೈಭವದ ಕರಗ ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು.

ನಿನ್ನೆ ರಾತ್ರಿ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹ್ಯಾರಿಸ್‌, ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಮುಂತಾದವರು ಭೇಟಿ ನೀಡಿದರು. ಬೆಳಗ್ಗೆಯಿಂದಲೇ ತಾಯಿಗೆ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ರಾತ್ರಿ 10.30ಕ್ಕೆ ಕಲ್ಯಾಣಿಗೆ ಹೋಗಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ವಾಪಸ್ ಬಂದು ಧರ್ಮರಾಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ರಥೋತ್ಸವದ ಬಳಿಕ ಭಕ್ತರ ಗೋವಿಂದ… ಗೋವಿಂದ… ಎಂಬ ಘೋಷಣೆಗಳ ನಡುವೆ ಅರ್ಚಕ ಜ್ಞಾನೇಂದ್ರ ಅವರು ಕರಗ ಹೊತ್ತು ಸಾಗಿದರು.

ಮುಖ್ಯ ರಥ ಧರ್ಮರಾಯಸ್ವಾಮಿ ರಥದಲ್ಲಿ ಅರ್ಜುನ‌ ಮತ್ತು ದ್ರೌಪದಿ ದೇವಿ ವಿರಾಜಮಾನರಾಗಿದ್ದರು. ಚಿಕ್ಕ ರಥದಲ್ಲಿ ಗ್ರಾಮದೇವಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪಾಂಡವರ ಮೂರ್ತಿಗಳು ಸೇರಿ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಗಳು ಮುಂದೆ ಸಾಗುತ್ತಿದ್ದಂತೆ ದೇಗುಲದಿಂದ ದ್ರೌಪದಿ ದೇವಿ ಕರಗ ಹೊರಬಂದಿತು.

ಕರಗ ಸಾಗುವ ರಾಜಬೀದಿಗಳೆಲ್ಲಾ ಬಣ್ಣ ಬಣ್ಣದ ಲೈಟಿಂಗ್‌ ಹಾಗೂ ಜನರಿಂದ ಕಂಗೊಳಿಸಿದವು. ಸಾಂಪ್ರದಾಯಿಕವಾಗಿ ಎ. ಜ್ಞಾನೇಂದ್ರ 14ನೇ ಬಾರಿ ಕರಗ ಹೊತ್ತರು. ಒಂದು ರಥದಲ್ಲಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು, ಪಾಂಡವರ ಮೂರ್ತಿಗಳು ಸೇರಿದಂತೆ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಂದಿತು. ಪೂಜೆ ನಂತರ ಮತ್ತೊಂದು ರಥದಲ್ಲಿ ದ್ರೌಪದಿ ಮತ್ತು ಅರ್ಜುನ ಮೂರ್ತಿ ಪ್ರತಿಷ್ಠಾಪನೆಯಾಯಿತು. ನಂತರ ರಥಗಳ ಮೆರವಣಿಗೆ ಆರಂಭವಾಯಿತು. ಖಡ್ಗಗಳನ್ನು ಹಿಡಿದು ನೂರಾರು ವೀರಕುಮಾರರು ಮೆರವಣಿಗೆಯಲ್ಲಿ ತೆರಳಿದರು. ರಥಗಳು ಮುಂದೆ ಸಾಗುತ್ತಿದ್ದಂತೆ ದ್ರೌಪದಿ ದೇವಿ ಕರಗ ದೇಗುಲದಿಂದ ಹೊರ ಬಂದಿದ್ದು, ಅದನ್ನು ಕಂಡು ಭಕ್ತರು ಹರ್ಷೋದ್ಗಾರ ಮಾಡಿದರು.

ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು. ಒಟ್ಟು 11-12 ಕಿಲೋಮೀಟರ್ ಕರಗದ ಮೆರವಣಿಗೆ ಸಾಗಿದೆ.

ಕರಗ ಮೆರವಣಿಗೆ ಮಾರ್ಗ

ರಥೋತ್ಸವದ ನಂತರ ಮಧ್ಯರಾತ್ರಿ 1 ಗಂಟೆಯಿಂದ ಕರಗ ಮಹೋತ್ಸವದ ಮೆರವಣಿಗೆ ಸಾಗಿತು. ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಿ ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಿ ನಂತರ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ತೆರಳಿತು. ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಯಿತು. ಬೆಳಗ್ಗೆ 5.45 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಿತು. ಬೆಳಗ್ಗೆ 8 ಗಂಟೆಗೆ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕರಗಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ | Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

Exit mobile version