ಬೆಂಗಳೂರು: ಬೆಂಗಳೂರಿನ (Bengaluru Murder) ವೈಯಾಲಿಕಾವಲ್ ಮಹಾಲಕ್ಷ್ಮೀ ಮರ್ಡರ್ ಕೇಸ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮಹಿಳೆಯನ್ನು ಕೊಲೆ ಮಾಡಿದವನು ತನ್ನೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಪೊಲೀಸರ ಮುಂದೆ ಪ್ರಶ್ನೆಗಳ ಸರಮಾಲೆಯೇ ಇದೆ. ಮಹಾಲಕ್ಷ್ಮಿಯನ್ನು ಕೊಂದ ಕೊಲೆಗಾರನನ್ನು ಟ್ರೇಸ್ ಮಾಡಿ ಇನ್ನೇನು ಹಿಡಿಬೇಕು ಎನ್ನುವಾಗಲೇ ಕೊಲೆ ಆರೋಪಿ ಮುಕ್ತಿರಂಜನ್ ಎಂಬಾತ ಒಡಿಶಾದಲ್ಲಿ ನಿನ್ನೆ (ಸೆ.25) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಹಾಲಕ್ಷ್ಮೀ ಮರ್ಡರ್ ಕೇಸ್ ಪೊಲೀಸರ ಮುಂದೆ ಹಲವು ಸವಾಲುಗಳನ್ನಿಟ್ಟಿದೆ. ಆರೋಪಿ ಅರೆಸ್ಟ್ ಆದಮೇಲೆ ಪ್ರಕರಣಕ್ಕೆ ಒಂದು ಫುಲ್ ಸ್ಟಾಪ್ ಇಡಬಹುದಿತ್ತು. ಆದರೆ ಪೊಲೀಸರಿಗೆ ಸಿಗುವ ಮುನ್ನವೆ ಆರೋಪಿ ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದಾಗಿ ತನಿಖಾಧಿಕಾರಿಗಳಿಗೆ ಮುಂದಿರುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದಂತಾಗಿದೆ. ಪ್ರಕರಣದ ಆರೋಪಿಯಾಗಿದ್ದ ಒಡಿಶಾ ಮೂಲದ ಮುಕ್ತಿರಂಜನ್ ಪ್ರತಾಪ್ ರಾಯ್ ನಿನ್ನೆ ಬುಧವಾರ ಬೆಳಗ್ಗೆ ಒಡಿಶಾದ ಭದ್ರಕ್ ಜಿಲ್ಲೆಯ ಭೂನಿಪುರದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿಯ ಭೀಕರ ಹತ್ಯೆಗೆ ಕಾರಣವೇನು? ಆರೋಪಿ ಹತ್ಯೆಗೈದಿದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಸಿಗುವ ಮುನ್ನವೇ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನೂ ಓದಿ: Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!
ಮದುವೆ ಆಗುವಂತೆ ಒತ್ತಾಯಿಸಿದ್ದಳು ಮಹಾಲಕ್ಷ್ಮಿ
ಇನ್ನು ತನಿಖೆ ವೇಳೆ ಒಂದಷ್ಟು ಸ್ಫೋಟಕ ವಿಚಾರಗಳು ಹೊರ ಬಿದ್ದಿದ್ದು, ಮದುವೆಯಾಗುವಂತೆ ಮುಕ್ತಿ ರಂಜನ್‌ನ ಮಹಾಲಕ್ಷ್ಮಿ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆಗಿ ಕೊಲೆ ನಡೆದಿರಬಹುದು ಎಂಬ ಅನುಮಾನ ಮೂಡಿದೆ. ಮಹಾಲಕ್ಷ್ಮಿ ಹಾಗೂ ಮುಕ್ತಿ ರಂಜನ್ ಇಬ್ಬರು ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರ ಮಧ್ಯೆ ಸ್ನೇಹ, ಸಲುಗೆ ಬೆಳದಿತ್ತು.
ಮುಕ್ತಿರಂಜನ್‌ನನ್ನು ತುಂಬಾ ಹಚ್ಡಿಕೊಂಡಿದ್ದ ಮಹಾಲಕ್ಷ್ಮಿ ಆತನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು. ಕೆಲಸ ಮಾಡುತ್ತಿದ್ದ ಸ್ಟೋರ್‌ನಲ್ಲಿ ಬೇರೆ ಹುಡುಗೀಯರ ಜತೆ ಮುಕ್ತಿರಂಜನ್ ಮಾತನಾಡಿದರೆ ಮಹಾಲಕ್ಷ್ಮಿ ಸ್ವಲ್ಪವೂ ಸಹಿಸುತ್ತಿರಲಿಲ್ಲ. ಕೂಡಲೇ ಆ ಯುವತಿಯರಿಗೆ ವಾರ್ನ್ ಮಾಡುತ್ತಿದ್ದಳು. ಇನ್ನು ಮುಕ್ತಿರಂಜನ್ ಸಹ ಸ್ವತಃ ಹಠಮಾರಿ ಸ್ವಭಾವದವನಾಗಿದ್ದ ಎಂಬುದು ಇದುವರೆಗಿನ ತನಿಖೆಯಲ್ಲಿ ತಿಳಿದು ಬಂದಿದೆ. ಸೆಪ್ಟೆಂಬರ್ 1ರಂದು ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದರು. ಎರಡನೇ ತಾರೀಖು ಇಬ್ಬರೂ ರಜೆ ಹಾಕಿ ವೈಯಾಲಿಕಾವಲ್ ಮನೆಗೆ ಹೋಗಿದ್ದರಂತೆ. ಈ ವೇಳೆ ಜಗಳ ಆಗಿ, ಕೊಲೆ ಮಾಡಿ ಮುಕ್ತಿರಂಜನ್ ಎಸ್ಕೇಪ್ ಆಗಿರಬಹುದು ಎನ್ನಲಾಗಿದೆ.
ಮನೆಯಲ್ಲಿ ಎಲ್ಲೂ ರಕ್ತ ಹರಿದಿಲ್ಲ; ಮೂವರ ಫಿಂಗರ್ ಪ್ರಿಂಟ್ ಪತ್ತೆ
ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿರುವ ಬಗ್ಗೆಯಂತೂ ಪೊಲೀಸರಿಗೆ ಅನುಮಾನಗಳ ಮೇಲೆ ಅನುಮಾನ ಹುಟ್ಟಿಸಿದೆ. ದೇಹ ಕತ್ತರಿಸುವ ರೀತಿ, ಮನೆಯಲ್ಲಿ ರಕ್ತ ಎಲ್ಲಿಯೂ ಸಹ ಸಿಡಿಯದಂತೆ ಮೃತದೇಹ ಕತ್ತರಿಸಲಾಗಿದೆ. ಹತ್ಯೆಗೈದು ಮೃತದೇಹದ ರಕ್ತ ಹರಿದ ನಂತರ ಕತ್ತರಿಸಲಾಗಿತ್ತಾ ಅನ್ನೋ ಪ್ರಶ್ನೆ ಮುಂದಿವೆ. ಅಲ್ಲದೇ ಮನೆಯಲ್ಲಿ ಇಬ್ಬರಿಂದ ಮೂರು ಜನರ ಫಿಂಗರ್ ಪ್ರಿಂಟ್‌ಗಳು ಪತ್ತೆಯಾಗಿದ್ದು, ಆರೋಪಿಯ ಕೃತ್ಯಕ್ಕೆ ಬೇರೆ ಯಾರಾದರೂ ಸಾಥ್ ನೀಡಿದ್ದರಾ? ಹತ್ಯೆಗೈದು ಇಷ್ಟು ದಿನ ಆರೋಪಿ ತಲೆಮರೆಸಿಕೊಂಡಿದ್ದೆಲ್ಲಿ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿತ್ತು. ಆದರೆ ಪೊಲೀಸರಿಗೆ ಸಿಗುವ ಮುನ್ನವೇ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ತಲೆ ಕೆಡಿಸಿದೆ.
ಸದ್ಯ ಒಡಿಶಾದಲ್ಲಿ ಬೀಡುಬಿಟ್ಟಿರುವ ಬೆಂಗಳೂರು ಪೊಲೀಸರು, ಆರೋಪಿಯ ಕುಟುಂಬಸ್ಥರಿಂದ ಮಾಹಿತಿ ಪಡಿತಿದೆ. ಈಗಾಗಲೇ ರಾಜ್ಯ ಪೊಲೀಸರ ಎರಡು ತಂಡಗಳು ಒಡಿಶಾದಲ್ಲಿರುವುದರಿಂದ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಮತ್ತೊಂದು ಕಡೆ ಮಹಿಳೆ ಮೊಬೈಲ್ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ