Site icon Vistara News

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

Doctors at Fortis Hospital remove fish bone from man's stomach for 5 years

ಬೆಂಗಳೂರು: ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಬೆಂಗಳೂರಿನ (Bengaluru News) ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

ಈ ಕುರಿತು ಮಾತನಾಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್, 61 ವರ್ಷದ ರೋಗಿ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಐದು ವರ್ಷದ ಹಿಂದೆ ಮೀನು ಸೇವಿಸಿದ್ದರು. ಆಗ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿ, ಅದು ಹೊಟ್ಟೆ ಸೇರಿತ್ತು. ಬಳಿಕ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಡೋಸ್ಕೋಪಿಕ್‌ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ ಒಂದು ಮೂಳೆ ತೆಗೆಸಿಕೊಂಡಿದ್ದರು. ಮತ್ತೊಂದು ಮೂಳೆ ಇರುವುದು ಅವರಿಗೆ ತಿಳಿದಿರಲಿಲ್ಲ.

ಸಂಪೂರ್ಣ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲೇ ಉಳಿದಿತ್ತು. ಇದು ಅವರ ಗಮನಕ್ಕೂ ಬಂದಿಲ್ಲ. ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸುತ್ತಿದ್ದರು. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮೂಳೆ ಕಾಣಿಸಿಕೊಂಡಿಲ್ಲ. ಈ ಮೂಳೆಯಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿದೆ.

Doctors at Fortis Hospital remove fish bone from man's stomach for 5 years

ನಂತರ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಸಣೆಯ ಬಳಿಕ ಓಮೆಂಟಮ್‌ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮೂಳೆ ಇರುವುದು ಕಂಡು ಬಂದಿತು. ಐದು ವರ್ಷಗಳ ಹಿಂದಿನಿಂದಲೂ ಈ ಮೂಳೆ ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೂ ಆಗಲೇ ತಿಳಿದಿದ್ದು. ಅವರಿಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Exit mobile version