Site icon Vistara News

Bengaluru news : ಸೋಪಿನ ಮೇಲೆ ಕಾಲಿಟ್ಟು ಆಯತಪ್ಪಿ ಕಟ್ಟಡದ ಮೇಲಿಂದ ಹಾರಿ ಬಿದ್ದಳು; ಎದೆ ಝಲ್​ ಎನಿಸುವ ದೃಶ್ಯ ಸೆರೆ

Bengaluru News Accident Case Dj Halli

ಬೆಂಗಳೂರು: ಕೆಲಸ ಮಾಡುವಾಗ ಸ್ವಲ್ಪ ಮೈಮರೆತರೂ ಏನೆಲ್ಲ ಅಚಾತುರ್ಯ ನಡೆಯಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಮಹಿಳೆಯೊಬ್ಬಳು ಟೆರೇಸ್‌ ಮೇಲೆ ಕೆಲಸ ಮಾಡುವಾಗ ಸೋಪಿನ ಮೇಲೆ ಕಾಲಿಟ್ಟು ಆಯತಪ್ಪಿ ಕಟ್ಟಡದಿಂದ ಹೊರಗೆ ಹಾರಿದ ಘಟನೆ ಬೆಂಗಳೂರಿನ (Bengaluru News) ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರುಬಾಯ್ ಎಂಬಾಕೆ ತನ್ನ ಪತಿಯೊಂದಿಗೆ ಡಿಜೆ ಹಳ್ಳಿಯಲ್ಲಿರುವ ಆರ್‌ಕೆ ಪ್ಯಾಲೇಸ್ ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಅಚಾನಕ್ ಆಗಿ ಸೋಪಿನ ಮೇಲೆ‌ ಕಾಲಿಟ್ಟ ರುಬಾಯ್‌ಳ ಕಾಲು ಜಾರಿತ್ತು. ನೋಡನೋಡುತ್ತಿದ್ದಂತೆ ಕಟ್ಟಡದಿಂದ ಹಾರಿ ಟೆರಸ್‌ ಭಾಗದಲ್ಲಿ ನೇತಾಡುತ್ತಿದ್ದಳು.

ಆಕೆಯ ಕೂಗಾಟ ಕೇಳಿ ನೋಡಿದಾಗ ಪತ್ನಿ ಕಟ್ಟಡದ ಮೇಲಿಂದ ನೇತಾಡುತ್ತಿರುವುದು ಕಂಡಿದೆ. ಕೂಡಲೇ ಓಡಿ ಬಂದ ಪತಿ ಆಕೆಯ ಕೈಹಿಡಿದು ಎಳೆದುಕೊಳ್ಳಲು ಮುಂದಾಗಿದ್ದರು. ಆಕೆ ಕೆಳಗೆ ಬೀಳದಂತೆ ಅದೆಷ್ಟೇ ಹರಸಾಹಸ ಪಟ್ಟರು ಆಗಿಲ್ಲ. ಇತ್ತ ಪತಿ-ಪತ್ನಿಯ ಚಿರಾಟ ಕೇಳಿ ಸುತ್ತಮುತ್ತಲಿನ ಜನರು ಓಡಿ ಬಂದಿದ್ದರು. ಆದರೆ ಕೆಲ ಸಮಯದ ನಂತರ ಕೈ ಜಾರಿದ್ದು, 3ನೇ ಅಂತಸ್ತಿನ ಕಟ್ಟಡದ ಮೇಲಿಂದ ರುಬಾಯ್‌ ಕೆಳಗೆ ಬಿದ್ದಿದ್ದರು.

ಇದನ್ನೂ ಓದಿ: Accident Case : ವೃದ್ಧೆಯರಿಬ್ಬರ ದುರಂತ ಅಂತ್ಯ; ಕೆಎಸ್‌ಆರ್‌ಟಿಸಿ ಬಸ್‌, ರೈಲು ಬಡಿದು ಸಾವು

ಕಟ್ಟಡದ ಕೆಳಗೆ ಬೈಕ್‌ಗಳನ್ನು ಪಾರ್ಕಿಂಗ್‌ ಮಾಡಿದ್ದರಿಂದ, ಸ್ಥಳೀಯರು ರುಬಾಯ್‌ಳನ್ನು ಕಾಪಾಡಲು ಆಗಲಿಲ್ಲ. ರುಬಾಯ್‌ ಮೇಲಿಂದ ಬೈಕ್‌ಗಳ ಮೇಲೆ ಬಿದ್ದ ರಭಸಕ್ಕೆ ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಟೋವೊಂದನ್ನು ಅಡ್ಡಗಟ್ಟಿ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಡಿ.ಜೆ‌ ಹಳ್ಳಿಯ ಆರ್.ಕೆ ಪ್ಯಾಲೇಸ್ ಬಳಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಷ್ಟು ಎತ್ತರದಿಂದ ಬಿದ್ದಂತಹ ರುಬಾಯ್‌ಗೆ ಕೋಮಾದಲ್ಲಿದ್ದು, ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಡಿಜೆ ಹಳ್ಳಿ ಪೊಲೀಸರು ಇದೀಗ ಸಿಕ್ಕಿರುವ‌ ವಿಡಿಯೊವನ್ನು ಆಧರಿಸಿ ತನಿಖೆಗೆ ಮುಂದಾಗಿದ್ದಾರೆ. ತನಿಖೆಯ ನಂತರವೇ ಈ ಘಟನೆಯ ಸಂಪೂರ್ಣ ಮಾಹಿತಿ ಹೊರಬರಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version