ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿಗೆ ಕಳ್ಳರ ಕೈ ಚಳಕ ಜೋರಾಗಿದೆ. ಹಾಡಹಗಲಲ್ಲೇ ಚಿನ್ನದ ಸರ ಕದ್ದು ಪರಾರಿಯಾಗುತ್ತಿರುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದುವರೆಗೆ ವೃದ್ಧರನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರು ಈಗ ಚಿಕ್ಕಮಕ್ಕಳ ಹಿಂದೆ ಬಿದ್ದಿದ್ದಾರೆ. ಅದರಲ್ಲೂ ಮದುವೆ ಇತ್ಯಾದಿ ಶುಭ ಕಾರ್ಯಕ್ರಮಗಳಲ್ಲಿ ಆಭರಣ ತೊಟ್ಟು ಭಾಗವಹಿಸುವ ಮಕ್ಕಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ.
ಹೀಗಾಗಿ ನಿಮ್ಮ ಮಕ್ಕಳ ಮೈಮೇಲೆ ರಾಶಿ ರಾಶಿ ಚಿನ್ನಾಭರಣ ಹಾಕಿ ಮದುವೆ ಇತ್ಯಾದಿ ಸಮಾರಂಭಗಳಿಗೆ ಕರೆದುಕೊಂಡು ಹೋಗುವ ಮುನ್ನ ಜಾಗರೂಕರಾಗಿರಿ. ಮದುವೆ ಸಮಾರಂಭಕ್ಕೆ ಡಿಸೆಂಟ್ ಆಗಿ ಆಗಮಿಸುವ ಈ ಐನಾತಿ ಕಳ್ಳರು ಮಕ್ಕಳ ಜತೆ ನೈಸಾಗಿ ಮಾತಾಡಿ ಅವರು ಧರಿಸಿರುವ ಚಿನ್ನಾಭರಣವನ್ನು ಎಗರಿಸ್ತಾರೆ.
ಇದನ್ನು ಓದಿ | ದಿನಕ್ಕೆ ಒಂದು ಡಜನ್ ಟಾರ್ಗೆಟ್ ಹೊಂದಿದ್ದ ಮೊಬೈಲ್ ಕಳ್ಳರು !
ಈ ರೀತಿ ಕಳ್ಳತನ ಮಾಡುತ್ತಿದ್ದ ಬಾಬು ಯಾನೆ ಪಲ್ಸರ್ ಬಾಬು ಯಾನೆ ಚೌಟ್ರಿ ಬಾಬು ಎಂಬಾತನನ್ನು ಆತನ ಸಹಚರರೊಂದಿಗೆ ಈಗ ಬಂಧಿಸಲಾಗಿದೆ. ಬಾಬು ತನ್ನ ಸಹಚರನ ಜೊತೆ ಡೀಸೆಂಟಾಗಿ ಮದ್ವೆ ಮನೆಗೆ ಹೋಗುತ್ತಿದ್ದ. ಬಳಿಕ ಅಕ್ಕಪಕ್ಕದಲ್ಲಿ ಮಕ್ಕಳು ಓಡಾಡ್ತಿದ್ರೆ ಆ ಮಕ್ಕಳಿಗೆ ಚಾಕಲೇಟ್ ಕೊಡ್ತಿದ್ದ. ಎಷ್ಟು ಮುದ್ದಾಗಿದ್ಯಾ ಅಂತ ಪುಸಲಾಯಿಸ್ತಿದ್ದ. ಅಷ್ಟೇ ನೈಸಾಗಿ ಮಗುವಿನ ಕತ್ತಿನ ಚೈನನ್ನ ಎಗರಿಸ್ತಿದ್ದ. ಹೀಗೆ ಖದೀಮ ಬಾಬು ಮದುವೆ ಹಾಲ್ನಲ್ಲಿ ತನ್ನ ಕೈ ಚಳಕ ತೋರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈತ ಅರಮನೆ ಮೈದಾನ ಸೇರಿದಂತೆ ಗೋವಿಂದರಾಜನಗರ, ಸದಾಶಿವನಗರ, ಮಾಗಡಿ ರಸ್ತೆ ಭಾಗದ ಚೌಟ್ರಿಗಳಲ್ಲಿ ಕೈಚಳಕ ತೋರಿಸಿದ್ದ. ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸರು ಬಾಬುವನ್ನ ಬಂಧಿಸಿದ್ದಾರೆ. ಬಂಧಿತ ಬಾಬುನಿಂದ 500 ಗ್ರಾಂ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ.