- ಅಭಿಷೇಕ್ ಬಿವಿ, ವಿಶೇಷ ಪ್ರತಿನಿಧಿ, ವಿಸ್ತಾರ ನ್ಯೂಸ್
ಬೆಂಗಳೂರು: ಒಂದು ಕಾಲದಲ್ಲಿ ಬಡವರ ಮನೆಯ ಹೆಮ್ಮೆಯ ವಾಹನವಾಗಿದ್ದ ಸೈಕಲ್ ಈಗ ನಾನಾ ರೂಪಾಂತರಗಳೊಂದಿಗೆ ಎಲ್ಲರ ಸಂಗಾತಿಯಾಗುತ್ತಿದೆ. ಬಡವರು ಅನಿವಾರ್ಯವಾಗಿ ಬಳಸಿದರೆ, ಶ್ರೀಮಂತರು ಆರೋಗ್ಯ ಕಾಪಾಡಿಕೊಳ್ಳಲು, ಪರಿಸರ ಪ್ರಿಯರು ಪ್ರಕೃತಿಯ ಮೇಲಿನ ಕಾಳಜಿಯಿಂದ ಬಳಸುತ್ತಾರೆ. ಆದರೆ ನಮ್ಮ ನಗರಗಳು ಮಾತ್ರ ಇನ್ನಷ್ಟು ಸೈಕಲ್‌ಸ್ನೇಹಿ (Bicycle Friendly city) ಆಗಬೇಕಿವೆ.
ಇಂದು ಜೂನ್ 3. ವಿಶ್ವ ಬೈಸಿಕಲ್ ದಿನಾಚರಣೆ. ಜಾಗತಿಕ ಮಟ್ಟದಲ್ಲಿ ಸೈಕಲ್ ಬಳಕೆ ಹೆಚ್ಚಾಗ್ತಿದ್ದು, ನಗರಗಳಲ್ಲಿಯೂ ಇದೇ ಪ್ಯಾಟರ್ನ್ ಗಮನಿಸಬಹುದಾಗಿದೆ. ಕೇವಲ ಬೆಂಗಳೂರಿನ ಚಿತ್ರಣವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನೋಡಿದರೂ, ಕೋವಿಡ್ ನಂತರ ಸೈಕಲ್ ಬಳಕೆದಾರರ ಪ್ರಮಾಣ ಶೇ. 500ರಷ್ಟು ಹೆಚ್ಚಾಗಿದೆ.
ನಗರದಲ್ಲಿನ ಬಹುತೇಕ ಸೈಕಲ್ ಸವಾರರು ಆರೋಗ್ಯದ ದೃಷ್ಟಿಯಿಂದ ಸೈಕಲ್ ಸವಾರರಾಗಿ ಪರಿವರ್ತನೆಯಾಗಿದ್ದರೆ, ಕೆಲವರು ಟ್ರಾಫಿಕ್ ಕಿರಿಕಿರಿಯಿಂದಾಗಿ, ತೈಲ ಬೆಲೆ ಏರಿಕೆಯಿಂದಾಗಿ ಸೈಕಲ್ ಬಳಕೆ ಮಾಡಲು ಆರಂಭಿಸಿದ್ದಾರೆ.
ಬಳಕೆ ಹೆಚ್ಚಾದರೂ ಕೂಡ ನಗರದಲ್ಲಿರೋ ಸೈಕಲ್ ಸವಾರರು ಪ್ರತಿನಿತ್ಯ ಒಂದಿಷ್ಟು ಕುಂದು ಕೊರತೆಗಳನ್ನು ಎದುರಿಸುತ್ತಲೇ ಇದ್ದಾರೆ. ಆ ಎಲ್ಲ ಸಮಸ್ಯೆಗಳನ್ನು, ಸೈಕಲ್ ಸವಾರರ ನಿರೀಕ್ಷೆಗಳನ್ನು ವಿಸ್ತಾರ ನ್ಯೂಸ್ ಜೊತೆ ಬೈಸಿಕಲ್ ಮೇಯರ್ ಆಫ್ ಬೆಂಗಳೂರು ಸತ್ಯ ಶಂಕರನ್ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸೈಕ್ಲಿಸ್ಟ್‌ಗಳು ಪ್ರತಿನಿತ್ಯ ಎದುರಿಸುತ್ತಿರೋ ಪ್ರಮುಖ ಸವಾಲುಗಳು
1.. ನಗರದ ರಸ್ತೆಗಳಲ್ಲಿ ಸೂಕ್ತ ಸೈಕಲ್ ಟ್ರ್ಯಾಕ್‌ಗಳು ಕಾಣಸಿಗೋದು ಕನಸಿನ ಮಾತಾಗಿದೆ. ಸೈಕಲ್ ಸವಾರರಿಗೆ ವಾಹನ ಸವಾರರಂತೆ 20ರಿಂದ 60 ಅಡಿಯ ರಸ್ತೆಯ ಅವಶ್ಯಕತೆ ಇಲ್ಲ. ಬದಲಾಗಿ ಕೇವಲ 1.5 ಮೀಟರ್ ಅಗಲದ ಟ್ರ್ಯಾಕ್ ಸಿಕ್ಕಿದ್ರೆ ಸಾಕು. ಆದರೆ, ಇಂತಹ ಕನಿಷ್ಠ ಸೌಕರ್ಯ ಕೂಡ ನಗರದಲ್ಲಿ ಸಿಗ್ತಿಲ್ಲ ಅನ್ನೋದು ಸೈಕ್ಲಿಸ್ಟ್‌ಗಳ ಬೇಸರಕ್ಕೆ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ತನ್ನನ್ನು ತಾನು ಗುರುತಿಸಿಕೊಂಡಿದ್ದರೂ ಸೈಕ್ಲಿಸ್ಟ್‌ಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ ಅನ್ನೋ ಮಾತುಗಳು ಕೂಡ ಕೇಳಿಬರ್ತಿವೆ.
2. ಕೆಲವಡೆ ಸೈಕಲ್ ಟ್ರ್ಯಾಕ್ ಇದ್ರೂ, ಅವುಗಳು ದಿಢೀರ್ ಅಂತ ಮಧ್ಯದಲ್ಲೇ ಮಾಯವಾಗಿ ಹೋಗುತ್ತೆ.
3. ಕೆಲವಡೆ ಸೈಕಲ್ ಟ್ರ್ಯಾಕ್ ಗಳು ದ್ವಿಚಕ್ರ ಹಾಗು ಆಟೋಗಳಿಗೆ ಪಾರ್ಕಿಂಗ್ ಸ್ಥಳವಾಗಿ ಮಾರ್ಪಾಡಾಗಿದೆ.
4. ಸೈಕಲ್ ಟ್ರ್ಯಾಕ್‌ಗಳಲ್ಲಿ ಇತರೆ ವಾಹನಗಳಿಗೆ ಪ್ರವೇಶವಿಲ್ಲ ಅಂತ ತಿಳಿದಿದ್ರೂ ದ್ವಿಚಕ್ರ ವಾಹನ ಸವಾರರು ಟ್ರ್ಯಾಕ್‌ನಲ್ಲೇ ಸಂಚರಿಸ್ತಾರೆ.
5. ಸೈಕಲ್ ನಿಲ್ಲಿಸೋದಕ್ಕೂ ಎಲ್ಲಿಯೂ ಸೂಕ್ತವಾದ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿಲ್ಲ. ವಾಹನಗಳಿಗಾದ್ರೂ ಸೆಂಟ್ರಲ್ ಲಾಕಿಂಗ್ ಸಿಸ್ಟಂ ಇರುತ್ತೆ. ಆದ್ರೆ, ಸೈಕಲ್‌ಗಳಿಗೆ ಭದ್ರತೆಯಿರೋ ಪಾರ್ಕಿಂಗ್ ಸೌಲಭ್ಯವಿಲ್ಲ. ನಗರದ ಯಾವುದೇ ಶಾಲಾ, ಕಾಲೇಜು, ಕಚೇರಿಗಳಿಗೆ ಹೋದ್ರೂ ಕಾರ್ ಹಾಗು ದ್ವಿಚಕ್ರವಾಹನಗಳಿಗೆ ಪಾರ್ಕಿಂಗ್ ವ್ಯವ್ಯಸ್ಥೆ ಕಲ್ಪಿಸಲಾಗಿರುತ್ತೆ. ಆದ್ರೆ ಎಲ್ಲಿಯೂ ಕೂಡ ಸೈಕಲ್‌ಗಳಿಗೆ ಸೂಕ್ತವಾದ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿಲ್ಲ.
ಸೈಕಲ್ ಬಳಕೆಯನ್ನು ಮತ್ತಷ್ಟು ಉತ್ತೇಜಿಸಲು ರೂಪಿಸಿರೋ ಕಾರ್ಯಕ್ರಮಗಳು
1.. ಕೋವಿಡ್ ನಂತರ ಬೆಂಗಳೂರಿನಲ್ಲಿ ಸೈಕಲ್ ಬಳಕೆ ಶೇ. 500ರಷ್ಟು ಹೆಚ್ಚಳವಾಗಿದೆ. ಈ ಏರಿಕೆಯನ್ನು ಮುಂದುವರಿಸಲು ಸೈಕಲ್ ಟು ವರ್ಕ್ ಅನ್ನೋ ಕಾರ್ಯಕ್ರಮವನ್ನು ಬೆಂಗಳೂರು ಸೈಕಲ್ ಮೇಯರ್ ಸತ್ಯ ಶಂಕರನ್ ರೂಪಿಸಿದ್ದಾರೆ. Cycletowork ಅನ್ನೋ ಆ್ಯಪ್ ಅನ್ನು ಪ್ಲೇ ಸ್ಟೋರ್‌ನಿಂದ ಸೈಕಲ್ ಬಳಕೆದಾರ ಡೌನ್ ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬೇಕು. ಆಗ, ಸೈಕಲ್ ಬಳಸುತ್ತಿರೋದ್ರಿಂದಾಗಿ ಎಷ್ಟು ವಾಯುಮಾಲಿನ್ಯ ತಡೆಗಟ್ಟಲಾಗಿದೆ, ಎಷ್ಟು ಟ್ರಿಪ್‌ಗಳನ್ನು ಸವಾರ ಕ್ರಮಿಸಿದ್ದಾರೆ, ಎಷ್ಟು ಪೆಟ್ರೋಲ್ ಅಥವ ಡೀಸೆಲ್ ಉಳಿಸಲಾಗಿದೆ ಎಂಬುದರ ಮಾಹಿತಿ ತೋರಿಸಲಾಗುತ್ತೆ.
ಇದನ್ನೂ ಓದಿ: ಇಂದು Bicycle Day ವಿಶೇಷ: ವಿಶಿಷ್ಟ ಫೋಟೋ ಟ್ವೀಟ್ ಮಾಡಿದ ಮೋದಿ
2. ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗು ಡಲ್ಟ್ ಸಹಯೋಗದಲ್ಲಿ ಸ್ಲೋ ಸ್ಟ್ರೀಟ್ಸ್ ಅನ್ನೋ ಕಾರ್ಯಕ್ರಮಕ್ಕೆ ಕೈ ಹಾಕಲಾಗಿದೆ. ವಾಹನ ಸಂಚಾರ ಕಡಿಮೆ ಇರೋ ರಸ್ತೆಗಳಲ್ಲಿ ಸೈಕಲ್ ಬಳಕೆ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಜೊತೆಗೆ ದ್ವಿಚಕ್ರ ಸವಾರರಿಗೆ ಸೈಕಲ್ ಸವಾರರ ಕುರಿತು ಸೂಚನಾ ಫಲಕಗಳ ಮೂಲಕ ಅರಿವು ಮೂಡಿಸಲಾಗುತ್ತೆ. ಸೈಕಲ್ ಟ್ರ್ಯಾಕ್ ಅಂದ್ರೆ ಏನು, ಸೂಚನಾ ಫಲಕಗಳನ್ನು ನೋಡಿ ಸೈಕಲ್ ಟ್ರ್ಯಾಕ್ ಎಲ್ಲಿದೆ ಅನ್ನೋದನ್ನು ಅರಿಯಲು ಈ ಕಾರ್ಯಕ್ರಮ ಅನುವು ಮಾಡಿಕೊಡಲಿದೆ.
ಸೈಕ್ಲಿಸ್ಟ್‌ಗಳ ಬೇಡಿಕೆಗಳು
1..ಸರ್ಕಾರ ಈ ಹಿಂದೆ ತಿಳಿಸಿದ್ದಂತೆ ನಗರದಲ್ಲಿರೋ ಸೈಕಲ್ ಟ್ರ್ಯಾಕ್‌ಗಳ ವ್ಯಾಪ್ತಿಯನ್ನು ಹೆಚ್ಚಿಸಬೇಕು.
2. ಅಂಗಡಿ ಮುಂಗಟ್ಟು, ಶಾಲಾ ಕಾಲೇಜು, ಕಚೇರಿ, ಶಾಪಿಂಗ್ ಮಾಲ್, ಆಸ್ಪತ್ರೆ ಸೇರಿದಂತೆ ನಗರದ ಪ್ರತಿಯೊಂದು ಸ್ಥಳದಲ್ಲೂ ವಾಹನ ಪಾರ್ಕಿಂಗ್ ನೀಡುವ ಪ್ರಾಮುಖ್ಯತೆಯಂತೆ ಸೈಕಲ್‌ಗೂ ನೀಡಬೇಕು.
3. ಸೈಕ್ಲಿಸ್ಟ್‌ಗಳಿಗೆ ಮನೆಯಿಂದ ಕಚೇರಿಗಳಿಗೆ ಬಂದ ನಂತರ ಫ್ರೆಶ್ ಆಗಲು ಕ್ಲೋಕ್ ರೂಂಗಳ ವ್ಯವಸ್ಥೆ ಮಾಡಬೇಕು.
ಸೈಕ್ಲಿಸ್ಟ್‌ಗಳ ನಿರೀಕ್ಷೆಗಳು
1.. ನಗರದಲ್ಲಿ ಸದ್ಯ 2 ಲಕ್ಷಕ್ಕೂ ಅಧಿಕ ಸೈಕ್ಲಿಸ್ಟ್‌ಗಳು ಇದ್ದಾರೆ. ರಾಜ್ಯದ ಶೇ. 38ರಷ್ಟು ಜನರ ಬಳಿ ಸೈಕಲ್ ಇದೆ. ಇಷ್ಟೆಲ್ಲಾ ಇದ್ರೂ ಕೂಡ ಸೈಕ್ಲಿಸ್ಟ್‌ಗಳ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಸಿಗ್ತಿಲ್ಲ. ಸೈಕಲ್ ಸವಾರರಿಗೆ ಜಾಗತಿಕ ಮಟ್ಟದಲ್ಲಿ, ವಿದೇಶಗಳಲ್ಲಿ ಸಿಗ್ತಿರೋ ಸೌಲಭ್ಯಗಳು ಇಲ್ಲಿ ಲಭಿಸುತ್ತಿಲ್ಲ. ಹೆಚ್ಚು ಸೈಕಲ್ ಬಳಕೆದಾರರು ಉದ್ಭವಿಸಿದಾಗ ಮಾತ್ರ ಸೌಲಭ್ಯ ನೀಡಲಾಗುತ್ತೆ ಅನ್ನೋ ಮನಸ್ಥಿತಿಯಲ್ಲಿ ಸರ್ಕಾರ ಇರಬಾರದು. ಬದಲಾಗಿ ಸರ್ಕಾರ ಸೌಲಭ್ಯ ನೀಡಿದಾಗ, ಸೈಕಲ್ ಬಳಕೆ ಮತ್ತಷ್ಟು ಹೆಚ್ಚಳವಾಗುತ್ತೆ. ವಾಯುಮಾಲಿನ್ಯದ ಜೊತೆಗೆ ಸಂಚಾರ ದಟ್ಟಣೆಯೂ ಕ್ಷೀಣಿಸುತ್ತೆ.
2. ಹೊರವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ದೊಡ್ಡನೆಕ್ಕುಂದಿ ಭಾಗದಲ್ಲಿ ಪ್ರತಿನಿತ್ಯ 600ಕ್ಕೂ ಹೆಚ್ಚು ಸೈಕಲ್‌ಗಳು ಬಳಸಲಾಗ್ತಿದೆ ಅಂತ ಅಳವಡಿಸಿರೋ ಮೀಟರ್ ದಾಖಲೆ ತೋರಿಸಿದ್ರೆ, ಬೆಳ್ಳಂದೂರಿನ ಭಾಗದಲ್ಲಿ ಇನ್ನೂ ಹೆಚ್ಚಿನ ಅಂಕಿಅಂಶಗಳನ್ನು ತೋರಿಸುತ್ತೆ. ಒಂದು ವೇಳೆ ಸರ್ಕಾರ ಪ್ರತಿಯೊಂದು ಮುಖ್ಯ ಹಾಗು ಪ್ರಮುಖ ರಸ್ತೆಯಲ್ಲೂ ಸೈಕಲ್ ಟ್ರ್ಯಾಕ್ ನಿರ್ಮಿಸಿದ್ರೆ, ಸೈಕಲ್ ಬಳಕೆ 600ರಿಂದ 6000ಕ್ಕೆ ಹೆಚ್ಚಾಗೋದ್ರಲ್ಲಿ ಖಂಡಿತಾ ಸಂಶಯವಿಲ್ಲ.
3. ಈ ಹಿಂದೆ ರಾಜ್ಯ ಸರ್ಕಾರ ಮಾಡಿಕೊಂಡಿದ್ದ ಪ್ಲಾನ್ ಪ್ರಕಾರ, ನಗರದ ಸೈಕಲ್ ಸವಾರರಿಗೆ 3 ಹಂತಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲು ನಿರ್ಧರಿಸಲಾಗಿತ್ತು. ಮೊದಲನೇ ಹಂತದಲ್ಲಿ 2020ರಿಂದ 2022ರೊಳಗೆ ನಗರದಲ್ಲಿ ಹಾಲಿ ಇರೋ ಸೈಕಲ್ ಟ್ರ್ಯಾಕ್ ಹೊರತುಪಡಿಸಿ ಹೆಚ್ಚುವರಿಯಾಗಿ 50 ಕಿಲೋಮೀಟರ್ ಸೈಕಲ್ ಟ್ರ್ಯಾಕ್ ನಿರ್ಮಿಸಲು ನಿರ್ಧರಿಸಲಾಗಿತ್ತು. ಎರಡನೇ ಹಂತದಲ್ಲಿ ಅಂದ್ರೆ 2023ರಿಂದ 2027ರೊಳಗೆ ಹೆಚ್ಚುವರಿ 250 ಕಿಲೋಮೀಟರ್ ಟ್ರ್ಯಾಕ್ ಹಾಗು ಮೂರನೇ ಹಂತದಲ್ಲಿ, 2028ರಿಂದ 2035ರೊಳಗೆ 300 ಕಿಲೋಮೀಟರ್ ಟ್ರ್ಯಾಕ್ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದ್ರೆ, ಇದು ಸದ್ಯ ಕೇವಲ ಪ್ಲಾನ್ ಆಗಿಯೇ ಉಳಿದ್ದಿದ್ದು, ಕಾಮಗಾರಿ ಕುಂಠಿತವಾಗಿದೆ. ಆದಷ್ಟು ಬೇಗ ಈ ಕಾಮಗಾರಿ ಮುಕ್ತಾಯವಾಗಬೇಕಿದೆ.
ಇದನ್ನೂ ಓದಿ: Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು