Site icon Vistara News

Bike Accident | ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಿಎಂಟಿಸಿ ಬಸ್‌ ಅಡಿ ಸಿಲುಕಿ ಬೈಕ್‌ ಸವಾರ ಸ್ಥಳದಲ್ಲೇ ಸಾವು

Accident

ಬೆಂಗಳೂರು: ಇಲ್ಲಿನ ಬಿಟಿಎಂ ಲೇಔಟ್‌ನ ಕುವೆಂಪು ನಗರ ಬಸ್ ನಿಲ್ದಾಣದ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ (Bike Accident) ಸವಾರನೊಬ್ಬ ಬಿಎಂಟಿಸಿ ಬಸ್‌ನ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶಿವಕುಮಾರ್‌ (35) ಮೃತ ದುರ್ದೈವಿ.

ಈ ಅಪಘಾತಕ್ಕೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗಿದೆ. ಕುವೆಂಪುನಗರ ಬಸ್ ಸ್ಟಾಪ್ ಬಳಿಯ ಮುಖ್ಯ ರಸ್ತೆ ಮೇಲೆ ಇದ್ದ ಸಿಮೆಂಟ್ ಸ್ಲ್ಯಾಬ್ ತಪ್ಪಿಸಲು ಬೈಕ್‌ ಸವಾರ ಯತ್ನಿಸಿದ್ದಾನೆ. ಈ ವೇಳೆ ಗುಂಡಿ ಕಾಣದೇ ಬೈಕ್‌ ಸ್ಕಿಡ್ಡಾಗಿದೆ. ಆಗ ಶಿವಕುಮಾರ್‌ ಬಿಎಂಟಿಸಿ ಬಸ್‌ನ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಮಡಿವಾಳ ಸಂಚಾರ ಪೊಲೀಸರಿಂದ ಪರಿಶೀಲನೆ

ಬಿಬಿಎಂಪಿಯ ಅವೈಜ್ಞಾನಿಕ ಸಿಮೆಂಟ್‌ ಸ್ಲ್ಯಾಬ್‌ ನಿರ್ಮಾಣ ಹಾಗೂ ರಸ್ತೆ ಗುಂಡಿ ಮುಚ್ಚದೇ ನಿರ್ಲಕ್ಷ್ಯ ತೋರಿದ್ದೇ ಅಪಘಾತ ಸಂಭವಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಿವಕುಮಾರ್‌ ಕೆಲಸ ಮುಗಿಸಿ ನಾಗರಬಾವಿಯ ತಮ್ಮ ನಿವಾಸಕ್ಕೆ ಮರಳುವಾಗ ಈ ದುರಂತ ಸಂಭವಿಸಿದೆ.

ಘಟನೆ ಬಳಿಕ ಸ್ಥಳಕ್ಕೆ ಮಡಿವಾಳ ಸಂಚಾರ ಪೊಲೀಸರು ಆಗಮಿಸಿದ್ದು, ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಬಿಎಂಟಿಸಿ ಬಸ್‌ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident | ಸ್ಕೂಟರ್‌ಗೆ ಲಾರಿ ಡಿಕ್ಕಿ; ರಸ್ತೆ ಅಪಘಾತದಲ್ಲಿ ನವವಿವಾಹಿತೆ ಸಾವು

Exit mobile version