Site icon Vistara News

BJPಗೆ ಹೊರಟ್ಟಿ ಅಧಿಕೃತ ಸೇರ್ಪಡೆ: ದೇವೇಗೌಡರಿಗೆ ಮುಖ ತೋರಿಸೋ ಧೈರ್ಯವಿಲ್ಲವೆಂದ ನಾಯಕ

ಬೆಂಗಳೂರು: ಜಾತ್ಯಾತೀತ ಜನತಾದಳದೊಂದಿಗೆ ದಶಕಗಳ ಕಾಲ ಗುರುತಿಸಿಕೊಂಡಿದ್ದ ಹಿರಿಯ ರಾಜಕೀಯ ಮುಖಂಡ ಬಸವರಾಜ್‌ ಹೊರಟ್ಟಿ ಭಾರತೀಯ ಜನತಾ ಪಕ್ಷಕ್ಕೆ (BJP) ಅಧಿಕೃತವಾಗಿ ಬುಧವಾರ ಸೇರ್ಪಡೆಯಾಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ವಿಧಾನಪರಿಷತ್ತಿನ ಮಾಜಿ ಹಿರಿಯ ಸದಸ್ಯ ಹಾಗೂ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ BJP ಸೇರ್ಪಡೆಯಾದರು. ಹೂಗುಚ್ಛ ನೀಡುವ ಮೂಲಕ ಬಸವರಾಜ್‌ ಬೊಮ್ಮಾಯಿ ಪಕ್ಷಕ್ಕೆ ಸ್ವಾಗತಿಸಿದರು.

https://vistaranews.com/2022/05/16/basvaraja-horatti-resigns/

ಮೇ 3ರಂದು ಕೇಂದ್ರ ಗೃಹಸಚಿವ ಅಮಿತ್‌ ಷಾ ಎದುರು ಅನೌಪಚಾರಿಕವಾಗಿ ಪಕ್ಷಕ್ಕೆ ಸೇರ್ಪಡೆ ಆಗಿದ್ದರು. ಸಭಾಪತಿ ಸ್ಥಾನದಲ್ಲಿರುವವರು ಯಾವುದೇ ಪಕ್ಷಕ್ಕೆ ಅಧಿಕೃತವಾಗಿ ಸೇರಲು ಅವಕಾಶವಿಲ್ಲ. ಹೀಗಾಗಿ, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸೇರ್ಪಡೆ ಆಗುವುದಾಗಿ ತಿಳಿಸಿದ್ದರು. ಸಭಾಪತಿ ಸ್ಥಾನಕ್ಕೆ ಮೇ 16ರಂದು ರಾಜೀನಾಮೆ ನೀಡಿದ್ದರು. ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಹೊರಟ್ಟಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಲಿದ್ದಾರೆ. ಏಳು ಬಾರಿ ಜೆಡಿಎಸ್‌ನಿಂದ ಸದಸ್ಯರಾಗಿದ್ದ ಹಿರಿಯ ನಾಯಕ ಎಂಟನೇ ಬಾರಿಯ ಚುನಾವಣೆಗೆ ಪಕ್ಷ ಬದಲಿಸಿದ್ದಾರೆ.

ಈ ಕುರಿತು ಎರಡು ದಿನದ ಹಿಂದೆ ಮಾತನಾಡಿದ್ದ ಹೊರಟ್ಟಿ, ಜೆಡಿಎಸ್‌ ಪಕ್ಷದ ಮೇಲೆ ಯಾವುದೇ ಅಸಮಾಧಾನ ಇಲ್ಲ. ದೇವೇಗೌಡರು, ಕುಮಾರಸ್ವಾಮಿ ಸೇರಿ ಎಲ್ಲರೂ ಅಪಾರ ಪ್ರೀತಿ ತೋರಿದ್ದಾರೆ. ಈ ಬಾರಿ ಬಿಜೆಪಿಯಿಂದಲೇ ಕಣಕ್ಕಿಳಿಯುವಂತೆ ನನ್ನ ಮತದಾರರು ಒತ್ತಡ ಹೇರಿದ್ದರಿಂದ ಬಿಜೆಪಿಗೆ ಸೇರುತ್ತಿದ್ದೇನೆ. ಇಷ್ಟು ಪ್ರೀತಿ ತೋರಿಸಿದ ದೇವೇಗೌಡರನ್ನು ಮಾತಾಡಿಸುವ ಧೈರ್ಯ ಇಲ್ಲ. ಕುಮಾರಸ್ವಾಮಿಯವರು ಸ್ವತಃ ಆಗಮಿಸಿ ಮಾತನಾಡಿಸಿಕೊಂಡು ಹೋಗಿದ್ದಾರೆ. ರಾಜಕೀಯದಲ್ಲಿ ತತ್ವ ಸಿದ್ಧಾಮತಗಳನ್ನು ಕೇಳಬೇಡಿ ಎಂದಿದ್ದರು.

ಇದೀಗ ಅಧಿಕೃತ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಗೋವಿಂದ ಕಾರಜೋಳ, ಸಿಸಿ ಪಾಟೀಲ್, ಆರ್ ಅಶೋಕ್, ಅರಗ ಜ್ಞಾನೆಂದ್ರ , ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕರಾದ ಸಿದ್ದು ಸವದಿ, ಕಳಕಪ್ಪ ಬಂಡಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: JDS ಮೇಲೆ ಇನ್ನೂ ಪ್ರೀತಿ ಇದೆ ಎಂದರು BJP ಸೇರ್ಪಡೆಯಾದ ಬಸವರಾಜ ಹೊರಟ್ಟಿ

Exit mobile version