ಬೆಂಗಳೂರು: ಬಿಜೆಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ರಾಜ್ಯ ಪ್ರಕೋಷ್ಠಗಳ ಸಮಾವೇಶ ʼಶಕ್ತಿ ಸಂಗಮʼ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರು ಭಾಗಿಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಮುಖ್ಯವಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಮೊದಲಿಗೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ,ಇಡೀ ಪ್ರಪಂಚವೇ ಅಚ್ಚರಿಪಡುವಂತಹ ನಾಯಕ ಪ್ರಧಾನಿ ಮೋದಿ. ಗುಜರಾತ್‌ನಲ್ಲಿ ಹೇಗೆ ಗೆಲವು ಸಾಧಿಸಿದ್ದೇವೆ ಅಂತ ನೋಡಿದ್ದೀರ. ರಾಜ್ಯಕ್ಕೆ ಕೇಂದ್ರ ರೈಲ್ವೇ ಸಚಿವರು ಕೊಟ್ಟ ಕಾಣಿಕೆ ನೋಡಿದ್ದೀರ. ಇದನ್ನು ಸದುಪಯೋಗಪಡಿಸಿಕೊಳ್ಳಿ. ೧೪೦ಕ್ಕೂ ಹೆಚ್ಚು ಸೀಟ್‌ಗಳನ್ನು ನಾವು ರಾಜ್ಯದಲ್ಲಿ ಪಡೆಯಬೇಕು. ಇತ್ತೀಚಿನ ಸರ್ವೇ ಯಲ್ಲಿ ದೇಶದ ಶೇ.೭೦ರಷ್ಟು ಜನ ಮೋದಿಯವರ ಜತೆಗಿದ್ದಾರೆ ಎನ್ನುವುದು ತಿಳಿದುಬಂದಿದೆ.
ಕಾಂಗ್ರೇಸ್ ಧೂಳಿಪಟ ಆಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಕೇವಲ ೪ ತಿಂಗಳಲ್ಲಿ ಮನೆಮನೆಗೆ ಹೋಗಿ ಮೋದಿಯವರ ಕಾರ್ಯಕ್ರಮಗಳನ್ನು ಮನವರಿಕೆ ಮಾಡಿ. ಜನರ ಮನಸನ್ನು ಗೆದ್ದು ಅವರಿಗೆ ಅರ್ಥೈಸಿ. ಕಾಂಗ್ರೆಸ್ ನಲ್ಲಿ ಎಲ್ಲರೂ ನಾನೇ ಸಿಎಂ ಅಂತ ಕನಸು ಕಾಣುತ್ತಿದ್ದಾರೆ. ಅದು ತಿರುಕನ ಕನಸು. ಮೂರು ತಲೆಮಾರುಗಳಿಗೆ ಆಗೋವಷ್ಟು ಮಾಡಿಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್‌ನ ರಮೇಶ್ ಕುಮಾರ್ ಹೇಳಿದ್ದರು. ಅದನ್ನು ಸೋನಿಯಾ ಹಾಗೂ ರಾಹುಲ್ ಅಲ್ಲಗಳೆಯಲಿಲ್ಲ. ೪ ತಿಂಗಳ ಕಾಲ ಯಾರೂ ಮೈಮರೆಯಬೇಡಿ. ಇಡೀ ದೇಶದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದೇವೆ. ನಮ್ಮ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಕೊಟ್ಟಿದ್ದೇವೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತನಾಡಿ, ನಾವು ಬಿಜೆಪಿಯ ಸಭೆಗಳನ್ನು ಚಾಮರಾಜಪೇಟೆಯ ಕಲ್ಯಾಣ ಮಂಟಪದಲ್ಲಿ ಮಾಡಿದ್ದೆವು. ಅಂತಹ ಕಾಲ ಇತ್ತು. ಈಗ ಪ್ರಕೋಷ್ಠಗಳ ಸಮಾವೇಶವನ್ನು ಇಷ್ಟು ದೊಡ್ಡದಾಗಿ ಮಾಡಿದ್ದೇವೆ. ಇಂತಹ ದೊಡ್ಡ ಕಾರ್ಯಕರ್ತರ ಬಳಗ ಹೊಂದಿರುವ ಪಕ್ಷವನ್ನು ನಾಶ ಮಾಡಲು ನೂರು ಜನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಬಂದರೂ ಆಗುವುದಿಲ್ಲ.
ಬಿಜೆಪಿ ಮಾಡಿದ್ದು ಜಾತಿವಾದದ ರಾಜಕಾರಣ ಅಲ್ಲ. ಹಿಂದುತ್ವದ, ವಿಕಾಸದ ರಾಜಕಾರಣ ಮಾಡಿದ್ದು ಬಿಜೆಪಿ. ನಮ್ಮದು ಅಭಿವೃದ್ಧಿ ರಾಜಕಾರಣ. ನಮ್ಮ ತಾಕತ್ ಇರುವುದೇ ಹಿಂದುತ್ವ, ಅಭಿವೃದ್ಧಿ ರಾಜಕಾರಣದಲ್ಲಿ. ಮನೆ ಒಡೆಯುವ ಜಾತಿ ರಾಜಕಾರಣ ನಮ್ಮದಲ್ಲ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ. ಸಿದ್ದರಾಮಯ್ಯ ಅಂತ ಅವರ ತಂದೆ ಹೆಸರಿಟ್ಟರು. ಆದರೆ ಜನ ಅವರಿಗೆ ಇಟ್ಟ ಹೆಸರು ಸಿದ್ರಾಮುಲ್ಲಾ ಖಾನ್. ಸಿದ್ರಾಮುಲ್ಲಾ ಖಾನ್ ಅಂತ ನಾನು ಇಟ್ಟ ಹೆಸರಲ್ಲ, ರಾಜ್ಯದ ಜನ ಇಟ್ಟ ಹೆಸರು.
ಸಿದ್ದರಾಮಯ್ಯ ಅಂತ ಹೆಸರಿಟ್ಟ ಸಿದ್ದರಾಮಯ್ಯ ಅವರ ತಂದೆಯ ಆತ್ಮ ವಿಲ ವಿಲ ಅಂತ ಒದ್ದಾಡ್ತಿರಬಹುದು. ಟಿಪ್ಪು ಜಯಂತಿ ಆಚರಿಸಿದ ಮತಾಂಧ ರಾಜಕಾರಣಿ ಸಿದ್ದರಾಮಯ್ಯ. ನಾನು ಶುದ್ಧ ಅಂತ ಹೇಳಿಕೊಳ್ಳಲೂ ಶುದ್ಧತೆ ಇರಬೇಕು. ಶುದ್ಧತೆ ಇಲ್ಲದವರು ಬೆರಕೆಯ ರಾಜಕಾರಣಿ ಆಗುತ್ತಾರೆಯೇ ಹೊರತು, ಶುದ್ಧ ಆಗುವುದಕ್ಕೆ ಸಾಧ್ಯವಿಲ್ಲ.
ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಆರೋಪಗಳಿಗೆ ಡಿಕೆಶಿ, ದೆ ಆರ್ ಮೈ ಬ್ರದರ್ಸ್ ಎಂದರು. ಕುಕ್ಕರ್ ಮೇಲೆ ಡಿಕೆಶಿ ಅಣ್ಣನಿಗೆ ಪ್ರೀತಿ ಬಂದಿದೆ. ಕುಕ್ಕರ್ ಅನ್ನು ಬಿರಿಯಾನಿ ಮಾಡುವುದಕ್ಕೆ ತೆಗೆದುಕೊಂಡು ಹೋಗುತ್ತಿರಲಿಲ್ಲ. ಬ್ಲಾಸ್ಟ್ ಮಾಡಲು ಕುಕ್ಕರ್ ತೆಗೆದುಕೊಂಡು ಹೋಗುತ್ತ ಇರಲಿಲ್ಲ. ಮನೆಹಾಳು ರಾಜಕಾರಣ ಮಾಡಿದ್ದು ಕಾಂಗ್ರೆಸ್, ಜಾತಿ ರಾಜಕಾರಣ ಮಾಡಿದ್ದು ಕಾಂಗ್ರೆಸ್ ಎಂದರು.
ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಮಾತನಾಡಿ, ರಾಜ್ಯದ ೨೪ ಪ್ರಕೋಷ್ಠಗಳ ಶಕ್ತಿ ಸಂಗಮವಿದು. ಇಡೀ ದೇಶದಲ್ಲಿ ಬಿಜೆಪಿಯ ಪ್ರಕೋಷ್ಠಗಳ ಮೊಟ್ಟಮೊದಲ ಸಮಾವೇಶ ಇದು. ಇದಕ್ಕಾಗಿ ಚಪ್ಪಾಳೆ ಹೊಡೆಯಬೇಕಿದೆ.
ಇಂದಿನ ಪ್ರಕೋಷ್ಠಗಳ ಸಮ್ಮಿಲನದಲ್ಲಿ ವಕೀಲರು, ಪತ್ರಕರ್ತರು ಸೇರಿದಂತೆ ಎಲ್ಲರೂ ಇದ್ದಾರೆ. ನೇಕಾರರು, ಮೀನುಗಾರರು, ಅಸಂಘಟಿತ ಕಾರ್ಯಕರ್ತರು ಇದ್ದಾರೆ. ಕಾರ್ಮಿಕರ ಪ್ರಕೋಷ್ಠದಿಂದ ೨೫,೦೦೦ ಕಾರ್ಮಿಕರಿಗೆ ಅನುಕೂಲ ಮಾಡಲಾಗಿದೆ.
ಈ ಹಿಂದೆ ಸಿ.ಟಿ. ರವಿ ಬೂತ್ ಕಮಿಟಿ ಮಾಡುವುದಕ್ಕೆ ಹೋದಾಗ ಆ ನಾಯಕರು, ಅದೇನ್ ಕಮಿಟಿ ಮಾಡುತ್ತೀರ ಎಂದು ಕೇಳಿದ್ದರು. ಅದಾದ ಮೇಲೆ ಮೋರ್ಚಾಗಳು ಬಂದವು. ಈಗ ಪ್ರಕೋಷ್ಠಗಳನ್ನು ಮಾಡಿದ್ದೇವೆ. ಈಗಲೂ ಬೇಕಾದ್ರೆ ಕೇಳುತ್ತಾರೆ. ಪ್ರಕೋಷ್ಠ ಅಂದರೆ ಏನು? ಅದನ್ನು ನಾವು ನಮ್ಮ ಪಾರ್ಟಿಯಲ್ಲಿ ಅಳವಡಿಸಿಕೊಳ್ಳುತ್ತೇವೆ ಎನ್ನುತ್ತಾರೆ. ಇಂತಹ ಸಂಘಟನೆಯನ್ನು ರೂಪಿಸಲು ಅವರಿಂದ ಸಾಧ್ಯವೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಗ್ರಾಮೀಣ ಭಾಗದ ಜನರಿಗೆ ಮಿಂಚು ಹುಳ ಮರದ ಮೇಲೆ ಬಂದಾಗ ಮಳೆಗಾಲ ಬರುತ್ತೆ ಅಂತ ಅರ್ಥವಾಗುತ್ತದೆ. ಹೀಗೆ ಕೆಲವರು ರಸ್ತೆಗೆ ಬಂದಾಗ ಚುನಾವಣಾ ಕಾಲ ಬಂದಿದೆ ಅಂತ ಅರ್ಥವಾಗುತ್ತದೆ. ಕೆಲವರು ಈಗಲೇ ಪಂಚರತ್ನ ಯಾತ್ರೆ ಮಾಡುವುದಕ್ಕೆ ಮುಂದಾಗುತ್ತಾರೆ. ಅವರ ಭಾಷಣ ಆರಂಭವಾಗೋದೇ ಕಣ್ಣೀರಿನಿಂದ. ತಾತ ಮಗನಿಗೆ ತ್ಯಾಗ ಮಾಡುತ್ತಾರೆ, ಮಗ ಹೆಂಡತಿಗೆ ತ್ಯಾಗ ಮಾಡುತ್ತಾರೆ, ಹೆಂಡತಿ ಮಗನಿಗೆ ತ್ಯಾಗ ಮಾಡುತ್ತಾರೆ, ಆ ಮಗ ತನ್ನ ಮಗನಿಗೆ ತ್ಯಾಗ ಮಾಡುತ್ತಾನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬದ ಕುರಿತು ಟೀಕಿಸಿದರು.
ನಾವು ಗೆದ್ದರೆ ಇತರರಂತೆ ಇಲ್ಲೇ ಕೊಚ್ಚಿಯಲ್ಲಿ ಬಿದ್ದು ಈಜಾಡುವ ರಾಜಕಾರಣ ನಾವು ಮಾಡುವುದಿಲ್ಲ. ಕುಕ್ಕರ್ ಬಾಂಬ್ ಡಿಜಿಪಿ ನಾಡಿದ್ದರಾ ಎನ್ನುವಂತಹ ಎಂಬ ಕೊಳಕು ರಾಜಕಾರಣ ನಾವು ಮಾಡುವುದಿಲ್ಲ. ಇನ್ನು ನೂರು ದಿನಗಳಿಗೆ ಚುನಾವಣೆ ಗೊತ್ತಾಗುತ್ತದೆ. ನಮ್ಮ ರಾಜ್ಯದಲ್ಲಿ ಕೆಲವು ರಾಜಕೀಯ ಮುಖಂಡರು ಬೀದಿಗೆ ಬಂದರು ಎಂದರೆ ಚುನಾವಣೆ ಬಂತು ಎಂದು ಅರ್ಥ. ಅಲ್ಲಿಯವರೆಗೆ ಯಾವುದೇ ರತ್ನವೂ ಇರುವುದಿಲ್ಲ. ಪ್ರತಿ ಬಾರಿಯೂ ಕಡೇ ಚುನಾವಣೆ ಎಂತಲೇ ಕಣ್ಣೀರು ಹಾಕುತ್ತಾರೆ. ಅವರು ಯಾಕೆ ಕಣ್ಣೀರು ಹಾಕುತ್ತಾರೆಯೋ ಗೊತ್ತಿಲ್ಲ. ನಾವು ಒಳ್ಳೆಯ ಆಡಳಿತ ಕೊಟ್ಟಿದ್ದೇವೆ, ಅದಕ್ಕಾಗಿ ಆನಂದವಾಗಿದ್ದೇವೆ ಎಂದರು.
ಕಾಂಗ್ರೆಸ್ ಕಾಲಘಟ್ಟದಲ್ಲಿ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಭಯೋತ್ಪಾದನೆ ಇದ್ದದ್ದು. ಕಸಬ್‌ನ ಜೈಲಿನಲ್ಲಿಟ್ಟು ಬಿರಿಯಾನಿ ಕೊಟ್ಟವರು ಕಾಂಗ್ರೆಸ್. ರಾಷ್ಟ್ರದಲ್ಲಿ ಭಯೋತ್ಪಾದಕ ಸತ್ತರೆ ಕಾಂಗ್ರೆಸ್‌ಗೆ ಕಣ್ಣೀರು ಬರುತ್ತದೆ. ರಾಜ್ಯದಲ್ಲೂ ಈಗ ಇದೇ ಪ್ರವೃತ್ತಿ ಮುಂದುವರಿಯುತ್ತಿದೆ. ನರೇಂದ್ರ ಮೋದಿ ಸರ್ಕಾರ ಭಯೋತ್ಪಾದನೆ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ. ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದರೆ ವಿರೋಧ ಮಾಡುತ್ತಾರೆ. ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಕಾಂಗ್ರೆಸ್ ಈಗ ಭಯೋತ್ಪಾದಕರ ಪಾರ್ಟಿ ಆಗಿದೆ.
ಗೋಹತ್ಯೆ ನಿಷೇಧಕ್ಕೆ ವಿರೋಧ ಮಾಡುತ್ತೀರ? ಮತಾಂತರದ ಕಾಯ್ದೆ ಬಗ್ಗೆ ವಿರೋಧ ಮಾಡುತ್ತೀರ? ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿಗಳ ಪರವಾಗಿ ನಿಲ್ಲದೇ ಓಲೈಕೆ ಮಾಡುತ್ತೀರಾ? ನಮಗೆ ಹಿಂದುಗಳ ಮತಗಳು ಬೇಡ ಎಂದು ನಿಮಗೆ ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಹೇಳಿ ಎಂದು ಕಾಂಗ್ರೆಸ್‌ಗೆ ಸವಾಲೆಸೆದರು.
ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಿದವರು ಸಿದ್ದರಾಮಯ್ಯ. ತಿಹಾರ್ ಜೈಲಿಗೆ ಡಿ.ಕೆ. ಶಿವಕುಮಾರ್ ಯಾಕೆ ಹೋದರು? ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಮುಚ್ಚಿಹಾಕುವಲ್ಲಿ ಸಿನ್ನೀಮ ಆದವರು ಸಿದ್ದರಾಮಯ್ಯ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ೨೦೧೪ರಲ್ಲಿ ನರೇಂದ್ರ ಮೋದಿಯವರನ್ನು ಪಾರ್ಲಿಮೆಂಟರಿ ನಾಯಕರಾಗಿ ಆಯ್ಕೆ ಮಾಡಿದ್ದೆವು. ಆಗ ನಮೋ ಈ ಸರ್ಕಾರ ಬಡವರಿಗೆ ಸಮರ್ಪಿತ ಸರ್ಕಾರ ಎಂದು ಹೇಳಿದ್ದರು. ಈಗ ಇರುವ ಪ್ರಕೋಷ್ಠಗಳಲ್ಲಿನ ಬಡವರಿಗೆ ಸೇವೆ ಸಲ್ಲಿಸುವಂತ ಪ್ರಯತ್ನ ಮಾಡಿದ್ದೇವೆ. ಬೀದಿಬದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆಯಲ್ಲಿ ಸಾಲ ನೀಡಲಾಗಿದೆ. ಆಟೋ ಚಾಲಕರಿಗೆ ಮುದ್ರಾ ಯೋಜನೆಯಲ್ಲಿ ಸಾಲ ನೀಡಲಾಗುತ್ತಿದೆ. ಸಾಮಾನ್ಯರಿಗೆ ಪ್ರತಿಭಾವಂತರಿಗೆ ಹಲವಾರು ಯೋಜನೆಗಳಲ್ಲಿ ಸಾಲ ನೀಡುತ್ತಿದ್ದೇವೆ.
ಎಲ್ಲ ಪ್ರಕೋಷ್ಠಗಳಿಗೆ ಸೇರಿದ ಜನಸಾಮಾನ್ಯರಿಗೂ ಸಹಾಯ ಆಗುತ್ತಿದೆ. ನಾವು ಎಂಪವರಿಂಗ್ ಮಾಡುವ ನಿಜವಾದ ಕೆಲಸ ಮಾಡ್ತಿದ್ದೇವೆ. ಮೋದಿ ಹಾಗು ಬೊಮ್ಮಾಯಿ ಯೋಜನೆ ಕೊಟ್ಟಿದ್ದಾರೆ. ಆ ಫಲಾನುಭವಿಗಳಿಗೆ ಕನೆಕ್ಟ್ ಆಗುವಂತೆ ಹೆಜ್ಜೆ ಹಾಕ್ತಿದ್ದೇವೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಅಧಿಕಾರಕ್ಕಾಗಿಯೇ ಹಲವಾರು ರಾಜಕೀಯ ಪಕ್ಷಗಳು ಇವೆ. ಇಡೀ ವಿಶ್ವದಲ್ಲೇ ಮಾನ್ಯತೆ ಕೊಡುವಂತೆ ಕಟ್ಟುವ ಉದ್ದೇಶ ನಮ್ಮ ಪಕ್ಷದ್ದು. ಸಮಾಜದ ವಿಷಯದಲ್ಲಿ ಸಾಮರಸ್ಯ ಮೂಡಿಸುವ, ಎಲ್ಲ ವೃತ್ತಿಗಳನ್ನು ಗೌರವಿಸಲು ನಾವು ಪ್ರಕೋಷ್ಠ ಮಾಡಿದ್ದೇವೆ. ಪ್ರಕೋಷ್ಠಗಳ ಮುಖಾಂತರ ಸಾಮಾಜಿಕ ಹಿರಿಯರನ್ನು, ಗಣ್ಯರನ್ನು ಮುಖ್ಯ ವಾಹಿನಿಗೆ ಕರೆತರುತ್ತಿದ್ದೇವೆ. ಈ ವಿನೂತನ ಪ್ರಯೋಗವನ್ನು ಬಿಜೆಪಿ ಮಾಡುತ್ತಿದೆ. ಬೇರೆ ಪಕ್ಷಗಳು ಪ್ರಕೋಷ್ಠ ಅಂದ್ರೆ ಏನು ಯಾಕೆ ಮಾಡಬೇಕು ಅಂತ ಕೇಳುತ್ತಾರೆ. ಪೊಲಿಟಿಕಲ್ ಸೈನ್ಸ್ ಜತೆ ಸೋಶಿಯಲ್ ಸೈನ್ಸ್ ಆಧಾರಿತವಾಗಿ ಪಕ್ಷ ಕಟ್ಟಿದ್ದರೆ ಅದು ಬಿಜೆಪಿ ಮಾತ್ರ ಎಂದರು.
ಇದನ್ನೂ ಓದಿ | ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಹವಾ ಶಕ್ತಿ ಸಂಗಮದಲ್ಲಿ ಮತ್ತೆ ಸಾಬೀತು: ಸಿ.ಟಿ. ರವಿ ಪರ ಬಿ.ಎಲ್. ಸಂತೋಷ್ ದನಿ