ಬೆಂಗಳೂರು: ಮಾರ್ಚ್ 1ರಂದು ಬಾಂಬ್ ಸ್ಫೋಟ (Blast in Bengaluru) ನಡೆದ ಬಳಿಕ ಮುಚ್ಚಿದ್ದ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್‌ನಲ್ಲಿರುವ ಪ್ರತಿಷ್ಠಿತ ಫುಡ್ ಜಾಯಿಂಟ್ ರಾಮೇಶ್ವರಂ ಕೆಫೆ (Rameshwaram Cafe) ಮುಂದಿನ ಶನಿವಾರ ಅಂದರೆ ಮಾರ್ಚ್ 9ರಂದು ಮತ್ತೆ ತೆರೆಯಲಿದೆ (Rameshwaram Cafe reopen). ಈ ಮೂಲಕ ಈ ಭಾಗದ ಫುಡ್ ಪ್ರಿಯರಿಗೆ ಸಂತಸ ತರಲಿದೆ.
ಮಾರ್ಚ್ 1ರಂದು ಮಧ್ಯಾಹ್ನ 12.55ಕ್ಕೆ ರಾಮೇಶ್ವರಂ ಕೆಫೆಯಲ್ಲಿ ಕೇವಲ 10 ಸೆಕೆಂಡ್‌ಗಳ ಅಂತರದಲ್ಲಿ ಎರಡು ಬಾಂಬ್ ಗಳು ಸ್ಫೋಟಿಸಿದ್ದವು. ಕಸದ ಡಬ್ಬಿಯ ಸಮೀಪ ಇಟ್ಟಿದ್ದ ಬಾಂಬ್‌ಗಳು ಸ್ಫೋಟಿಸಿ 10 ಮಂದಿ ಗಾಯಗೊಂಡಿದ್ದರು. ಆರಂಭದಲ್ಲಿ ಇದೊಂದು ಸಾಮಾನ್ಯ ಸ್ಫೋಟ ಎಂಬ ಎಣಿಕೆ ಇತ್ತಾದರೂ ಮುಂದೆ ಭಯೋತ್ಪಾದಕ ಕೃತ್ಯವೆನ್ನುವುದು ಸ್ಪಷ್ಟವಾಯಿತು. ಇದೀಗ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ. ಆದರೂ ಈ ಪ್ರಕರಣದ ರೂವಾರಿ ಟೋಪಿವಾಲಾನ ಜಾಡನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
ಶಿವರಾತ್ರಿಗೆ ಕೆಫೆ ಮರು ಆರಂಭ ಎಂದಿದ್ದರು ಮತ್ತೆ ಮುಂದೂಡಿದ್ದರು
ಈ ಸ್ಫೋಟ ನಡೆದಾಗ ಹೋಟೆಲ್‌ನ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್ ಅವರು ಮುಂಬಯಿಯಲ್ಲಿದ್ದರು. ಅವರ ಪತಿ ರಾಘವೇಂದ್ರ ರಾವ್ ಅವರು ಗುಜರಾತ್‌ನ ಜಾಮ್ ನಗರದಲ್ಲಿದ್ದರು. ಅವರು ಈ ಪ್ರಕರಣದ ತನಿಖೆಯಲ್ಲಿ ಸಹಕರಿಸಿದ್ದರು.
ಅದರ ನಡುವೆ ಮಾತನಾಡಿ, ಬಾಂಬ್ ಸ್ಫೋಟದಿಂದ ಹೋಟೆಲ್‌ಗೆ ಏನೂ ತೊಂದರೆಯಾಗಿಲ್ಲ. ಹೋಟೆಲ್‌ನಿಂದ ಯಾವುದೇ ತಪ್ಪು ಆಗಿಲ್ಲ. ಹೀಗಾಗಿ ಅತಿ ಶೀಘ್ರದಲ್ಲಿ ಮತ್ತೆ ಹೋಟೆಲ್ ತೆರೆಯಲಾಗುವುದು ಎಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕೂಡಾ ಪೋಸ್ಟ್ ಹಾಕಿದ್ದರು. ಶಿವರಾತ್ರಿ ದಿನವಾದ ಮಾರ್ಚ್ 8ರಂದು ಮರು ಆರಂಭ ಮಾಡುವ ಬಗ್ಗೆ ಮಾತನಾಡಿದ್ದರು.
ಆದರೆ, ತನಿಖಾಧಿಕಾರಿಗಳು ಈ ಹೋಟೆಲ್‌ನಲ್ಲಿ ಇನ್ನೂ ತನಿಖೆ ಪೂರ್ಣಗೊಂಡಿಲ್ಲ ಎಂದು ಹೇಳಿದ್ದರಿಂದ ಸದ್ಯ ಅದು ಮತ್ತೆ ತೆರೆಯುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗಿತ್ತು. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್‌ನ್ನು ತೆಗೆದುಹಾಕಿದ್ದರು.
ಇದನ್ನೂ ಓದಿ : Rameshwaram Cafe : ರಾಮೇಶ್ವರಂ ಕೆಫೆ ಮಾಲಕಿ ದಿವ್ಯಾ ರಾಘವೇಂದ್ರ ರಾವ್ ಯಾರು? ಅರ್ಚಕರ ಮಗಳ ಅಡ್ವೆಂಚರ್!
ರಾಮೇಶ್ವರಂ ಕೆಫೆ ಎದುರು ಫ್ಲೆಕ್ಸ್
ಈ ನಡುವೆ, ರಾಮೇಶ್ವರಂ ಕೆಫೆನಲ್ಲಿ ರೀನೋವೇಶನ್ ಕಾರ್ಯ ಶುರುವಾಗಿದ್ದು, ಶನಿವಾರ (ಮಾರ್ಚ್ 9) ಬೆಳಗ್ಗೆ 6:30 ಕ್ಕೆ ಪುನಾರಂಭ ಮಾಡ್ತೇವೆ ಎಂದು ಫ್ಲೆಕ್ಸ್ ಹಾಕಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು ಈಗಾಗಲೇ ಇಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಿಸಿಬಿ ಕೂಡಾ ಪರಿಶೀಲನೆ ನಡೆಸಿದೆ. ನಂತರ ರಾಮೇಶ್ವರಂ ಕೆಫೆಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ. ಅದಾದ ಬಳಿಕ ಈಗ ಒಳಗಿನಿಂದ ದುರಸ್ತಿ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ. ಹೀಗಾಗಿ ಮಾರ್ಚ್ 9ರ ಬೆಳಗ್ಗೆ 6.30ರಿಂದ ಮತ್ತೆ ಹೋಟೆಲ್ ತೆರೆದುಕೊಳ್ಳಲಿದೆ.
ಇನ್ನೂ ಪತ್ತೆಯಾಗದ ಸ್ಫೋಟ ಆರೋಪಿ
ಮಾರ್ಚ್ 1ರಂದು ಹೋಟೆಲ್‌ಗೆ ಬಂದು ಬಾಂಬ್ ಇಟ್ಟು ಹೋದ ದುಷ್ಕರ್ಮಿ ಆರು ದಿನವಾದರೂ ಪತ್ತೆಯಾಗಿಲ್ಲ. ಅಂದು ಬೆಳಗ್ಗೆ 11.34ಕ್ಕೆ ಟೋಪಿ ಹಾಕಿಕೊಂಡು ಹೋಟೆಲ್ ಪ್ರವೇಶಿಸಿದ್ದ ದುಷ್ಕರ್ಮಿ ರವಾ ಇಡ್ಲಿ ಖರೀದಿಸಿ ಅದನ್ನು ತಿಂದು ಬಾಂಬ್‌ನ್ನು ಇಟ್ಟು 11.43ಕ್ಕೆ ಹೋಟೆಲ್‌ನಿಂದ ಹೊರಬಿದ್ದಿದ್ದ. ಬಳಿಕ ಆತ ಎಲ್ಲಿ ಹೋಗಿದ್ದಾನೆ ಎಂಬ ಬಗ್ಗೆ ಎಲ್ಲೂ ದಾಖಲೆಗಳು ಇದುವರೆಗೆ ಸಿಕ್ಕಿಲ್ಲ ಎನ್ನಲಾಗಿದೆ.