Site icon Vistara News

BMTC Conductor: 5 ರೂ. ಚಿಲ್ಲರೆ ಕೊಡದೆ ಪ್ರಯಾಣಿಕನ ಮೇಲೆ ಹಲ್ಲೆ; ಬಿಎಂಟಿಸಿ ಕಂಡಕ್ಟರ್‌ ಸಸ್ಪೆಂಡ್!

BMTC Conductor

ಬೆಂಗಳೂರು: ಅವು ಬಿಎಂಟಿಸಿ ಬಸ್ ಇರಲಿ, ಕೆಎಸ್‌ಆರ್‌ಟಿಸಿ ಬಸ್‌ಗಳೇ ಇರಲಿ, ಸಂಚರಿಸುವಾಗ ಪ್ರಯಾಣಿಕರು ಹಾಗೂ ಬಸ್‌ ಕಂಡಕ್ಟರ್‌ ಮಧ್ಯೆ ಸಣ್ಣದೊಂದು ಗಲಾಟೆ, ವಾಗ್ವಾದ ಆಗುವುದು ಸಹಜ. ಆದರೆ, ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ 5 ರೂ. ಚಿಲ್ಲರೆ ಕೊಡದೆ, ಅವರ ಮೇಲೆಯೇ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಬಿಎಂಟಿಸಿ ಬಸ್‌ ಕಂಡಕ್ಟರ್‌ನನ್ನು (BMTC Conductor) ಅಮಾನತುಗೊಳಿಸಿದೆ. ಈ ಕುರಿತು ಬಿಎಂಟಿಸಿ ಆದೇಶ ಹೊರಡಿಸಿ ಪ್ರಕಟಣೆ ತಿಳಿಸಿದೆ.

ಆಗಸ್ಟ್‌ 6ರಂದು ಘಟನೆ ನಡೆದಿದ್ದು, ಕ್ಷಿಪ್ರವಾಗಿ ಬಸ್‌ ಕಂಡಕ್ಟರ್‌ ವಿರುದ್ಧ ಬಿಎಂಟಿಸಿ ಕ್ರಮ ತೆಗೆದುಕೊಂಡಿದೆ. ಬಿಎಂಟಿಸಿ ಬಸ್‌ನಲ್ಲಿ ಅಭಿನವ್‌ ರಾಜ್‌ ಎಂಬ ಯುವಕ ಪ್ರಯಾಣಿಸುತ್ತಿದ್ದರು. ಅವರು 15 ರೂ. ಟಿಕೆಟ್‌ಗೆ 20 ರೂ. ನೀಡಿದ್ದರು. 5 ರೂ. ಚಿಲ್ಲರೆ ವಾಪಸ್‌ ಕೇಳಿದಾಗ ಪ್ರಯಾಣಿಕನ ಮೇಲೆ ಕಂಡಕ್ಟರ್‌ ರೇಗಾಡಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದೇ ಕೋಪದಲ್ಲಿ ಕಂಡಕ್ಟರ್‌ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೊ ಮಾಡಿಕೊಂಡಿದ್ದ ಅಭಿನವ್‌ ರಾಜ್‌, ಬಿಎಂಟಿಸಿಗೆ ದೂರು ನೀಡಿದ್ದರು. ಅದರಂತೆ, ಅಮಾನತು ಮಾಡಲಾಗಿದೆ.

ಕಂಡಕ್ಟರ್‌ ವರ್ತನೆಯ ವಿಡಿಯೊ

https://vistaranews.com/wp-content/uploads/2024/08/Bus.mp4

“ಬೆಂಗಳೂರು ಮಹಾನಗರ ಸಾರಿಗೆ ಘಟಕ-32ರ ಬಸ್‌ನ ನಿರ್ವಾಹಕರು ಆಗಸ್ಟ್‌ 6ರಂದು ರಾತ್ರಿ ಸುಮಾರು 9..40 ಸುಮಾರಿಗೆ ಕರ್ತವ್ಯ ನಿರ್ವಹಿಸುವಾಗ ಅಭಿನವ್‌ ರಾಜ್‌ ಎಂಬ ಪ್ರಯಾಣಿಕರು 5 ರೂ. ಚಿಲ್ಲರೆ ವಾಪಸ್‌ ಕೊಡಿ ಎಂಬುದಾಗಿ ಕೇಳಿದ್ದಾರೆ. ಇದಕ್ಕೆ ನಿರ್ವಾಹಕರು ಪ್ರಯಾಣಿಕರ ಎದುರು ಅನುಚಿತವಾಗಿ ವರ್ತನೆ ತೋರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

“ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದಲ್ಲದೆ, ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುವುದು ಸುರಕ್ಷಿತ ಎನ್ನುವ ಭಾವನೆ ಉಂಟಾಗಲು ಅಗತ್ಯವಿರುವ ಕ್ರಮಗಳನ್ನು ಸಹ ಕೈಗೊಳ್ಳಲಾಗಿರುತ್ತದೆ. ಪ್ರಯಾಣಿಕರ ಮೇಲೆ ಯಾವುದೇ ತರಹದ ದೌರ್ಜನ್ಯ ಅಸಭ್ಯ ವರ್ತನೆ ಮತ್ತು ಅಹಿತಕರ ಘಟನೆಗಳು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುತ್ತದೆ” ಎಂದು ಕೂಡ ಬಿಎಂಟಿಸಿ ಮಾಹಿತಿ ನೀಡಿದೆ.

ಇದನ್ನೂ ಓದಿ: Yogi Adityanath: ನೀರು ಎರಚಿ ಮಹಿಳೆಗೆ ಕಿರುಕುಳ ಕೇಸ್‌; ಇಡೀ ಪೊಲೀಸ್‌ ಚೌಕಿಯೇ ಅಮಾನತು; ಇನ್ಮುಂದೆ ʼಬುಲೆಟ್‌ ರೈಲ್‌ʼ ಓಡಿಸಲಾಗುತ್ತೆ ಎಂದು ವಾರ್ನಿಂಗ್‌

Exit mobile version