ಬೆಂಗಳೂರು: ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೋಟೆಲ್‌ಗೆ ಬಾಂಬ್ ಬೆದರಿಕೆ ಪತ್ರ (Bomb Threat) ಬಂದಿದೆ. ಜಾಲಹಳ್ಳಿಯಲ್ಲಿರುವ ಕದಂಬ ಗಾರ್ಡೇನಿಯಾ (Kadamba Hotel) ಹೋಟೆಲ್‌ಗೆ ಪತ್ರದ ಮೂಲಕ ಬೆದರಿಕೆ ಸಂದೇಶ ಬಂದಿದೆ. ಹೋಟೆಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಪತ್ರ ಬಂದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ಪೋಸ್ಟ್ ಮೂಲಕ ಬಂದಿರುವ ಬೆದರಿಕೆ ಪತ್ರವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಹಕರು ಹಾಗೂ ಹೋಟೆಲ್ ಸಿಬ್ಬಂದಿಯನ್ನು ಹೊರಗೆ ಕಳಿಸಿ ಹೋಟೆಲ್‌ನೊಳಗೆ ಜಾಲಹಳ್ಳಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಸೋಮವಾರ (ಏ.22) ಮಧ್ಯಾಹ್ನ 12ರ ಸುಮಾರಿಗೆ ಪೋಸ್ಟ್ ಮುಖಾಂತರ ಬೆದರಿಕೆ ಪತ್ರವು ಹೋಟೆಲ್ ಸಿಬ್ಬಂದಿ ಕೈಸೇರಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಂಡ ರಚನೆ ಮಾಡಿ ಪತ್ರದ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಜಾಲಹಳ್ಳಿಯ ಕದಂಬ ಹೋಟೆಲ್‌ಗೆ ಬಾಂಬ್ ಇಟ್ಟಿದ್ದೇವೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಗೂ ಅನಾಮಿಕ ಪತ್ರ ಬಂದಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಹೋಟೆಲ್‌ಗೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಪತ್ರ ಎಲ್ಲಿಂದ ಬಂತು, ಯಾರು ಬರೆದಿದ್ದು ಎಂಬುದರ ಕುರಿತು ತನಿಖೆ ಚುರುಕುಗೊಂಡಿದೆ.
ರಾಮೇಶ್ವರಂ ಕೆಫೆ ಬ್ಲಾಸ್ಟ್ ನಂತರ ಬೆಂಗಳೂರು ನಗರ ಪೊಲೀಸರು ಹೆಚ್ಚು ಅಲರ್ಟ್ ಆಗಿದ್ದಾರೆ. ಈಗಾಗಲೇ ಹೋಟೆಲ್ ಅನ್ನು ಸುಪರ್ದಿಗೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
12 ಗಂಟೆ ಸುಮಾರಿಗೆ ಪೊಲೀಸರು ಹೋಟೆಲ್‌ಗೆ ಬಂದು ಎಲ್ಲರೂ ಹೊರಗೆ ಬನ್ನಿ ಅಂದರು. ಅಡುಗೆ ಭಟ್ಟರು, ಸಪ್ಲೈಯರ್‌ಗಳು, ಕ್ಲೀನರ್ಸ್ ಸೇರಿ ನಾವು ನೂರಕ್ಕೂ ಹೆಚ್ಚು ಸಿಬ್ಬಂದಿ ಇದ್ದೀವಿ. ಆಗಷ್ಟೇ ಗ್ರಾಹಕರು ಸಹ ಹೋಟೆಲ್‌ಗೆ ಬರುತ್ತಿದ್ದರು. ಅಷ್ಟರಲ್ಲಿ ನಮ್ಮನ್ನೆಲ್ಲಾ ಹೊರಗೆ ಕಳಿಸಿದರು ಎಂದು ಹೋಟೆಲ್ ಸಿಬ್ಬಂದಿ ಗಣಪತಿ ವಿಸ್ತಾರ ನ್ಯೂಸ್ ತಿಳಿಸಿದರು. ವಿಷಯ ಏನು ಎಂದು ನಮಗೆ ಹೇಳಿಲ್ಲ. ಏನಾಗಿದೆ ಅಂತಲೂ ಗೊತ್ತಿಲ್ಲ ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ