Site icon Vistara News

ಬೆಂಗಳೂರು ಶಾಲೆಗಳಿಗೆ ಬಾಂಬ್‌ ಬೆದರಿಕೆ

ಬೆಂಗಳೂರು: ತಮ್ಮ ಶಾಲೆಯಲ್ಲಿ ಅತ್ಯಂತ ಶಕ್ತಿಯುತವಾದ ಬಾಂಬ್‌ ಇರಿಸಲಾಗಿದ್ದು, ಕೂಡಲೆ ಪೊಲೀಸರನ್ನು ಕರೆಸಿ ನಿಷ್ಕ್ರಿಯಗೊಳಿಸದಿದ್ದರೆ ಭಾರೀ ಅನಾಹುತವಾಗುತ್ತದೆ ಎಂಬ ಇಮೇಲ್‌ ಸಂದೇಶವೊಂದು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹುಸ್ಕೂರು ಬಳಿಯಿರುವ ಎಬನೈಜರ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಹಾಗೂ ಹೆಣ್ಣೂರು ಬಳಿ ಇರುವ ಸೈಂಟ್‌ ವಿನ್ಸೆಂಟ್‌ ಪಲ್ಲೋಟ್ಟಿ ಶಾಲೆಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂಬ ಮಾಹಿತಿ ಲಭಿಸಿತು. ಕೂಡಲೆ ಪೊಲೀಸರು ಶಾಲೆಗಳಿಗೆ ಧಾವಿಸಿ ಮಕ್ಕಳು ಹಾಗೂ ಸಿಬ್ಬಂದಿಯನ್ನು ಹೊರಗೆ ಕಳಿಸಿದ್ದಾರೆ. ಈ ಶಾಲೆಗಳ ಜತೆಗೆ ಮಹದೇವಪುರ, ವರ್ತೂರು, ಹೆಣ್ಣೂರು, ಮಾರತ್ತಹಳ್ಳಿ, ಹೆಬ್ಬಗೋಡಿಯಲ್ಲಿರುವ ಇನ್ನೂ ಅನೇಕ ಶಾಲೆಗಳಿಗೆ ಇಮೇಲ್‌ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಲೆಗಳಿಗೆ ಪೊಲೀಸರು ತೆರಳುತ್ತಿದ್ದಂತೆ ಮಕ್ಕಳು ಹಾಗೂ ಸಿಬ್ಬಂದಿ ಗಾಬರಿಯಿಂದ ಹೊರಗೆ ಬಂದಿದ್ದಾರೆ.

ಬೆಳಗ್ಗೆ 11ರಿಂದ 11.40ರ ಸುಮಾರಿಗೆ ನಾಲ್ಕೈದು ಶಾಲೆಗಳಿಗೆ barons.masarfm@gmail.com ಇಮೇಲ್‌ ವಿಳಾಸದಿಂದ ಸಂದೇಶವೊಂದು ಬಂದಿದೆ. “ನಿಮ್ಮ ಶಾಲೆಯಲ್ಲಿ ಶಕ್ತಿಯುತ ಬಾಂಬ್‌ ಅಳವಡಿಸಲಾಗಿದೆ. ಎಚ್ಚರಿಕೆಯಿಂದ ಇರಿ, ಇದು ತಮಾಷೆ ಅಲ್ಲ. ತಕ್ಷಣವೇ ಪೊಲೀಸರನ್ನು ಕರೆಯಿರಿ. ನಿಮ್ಮ ಜೀವವೂ ಸೇರಿ ನೂರಾರು ಜೀವಗಳು ಅಪಾಯಕ್ಕೆ ಸಿಲುಕಬಹುದು. ಇನ್ನು ತಡ ಮಾಡಬೇಡಿ, ಎಲ್ಲವೂ ನಿಮ್ಮ ಕೈಯಲ್ಲೇ ಇದೆ” ಎಂದು ಇಂಗ್ಲಿಷ್‌ನಲ್ಲಿ ಸಂದೇಶ ಸ್ವೀಕಾರವಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸ್‌ ಕಮಿಷನರ್‌ ಕಮಪಲ್‌ ಪಂತ್‌, ಬಾಂಬ್‌ ಇರುವುದಾಗಿ ಇಮೇಲ್‌ ಮೂಲಕ ಬೆದರಿಕೆ ಒಡ್ಡಿರುವುದು ತಿಳಿದುಬಂದಿದೆ. ವಿವಿಧ ಸ್ಥಳಗಳ ಶಾಲೆಗಳಿಗೆ ಇಮೇಲ್‌ ಮಾಡಲಾಗಿದೆ. ಇಲ್ಲಿವರೆಗೆ ತಿಳಿದುಬಂದಿರುವ ಶಾಲೆಗಳಿಗೆ ಸ್ಥಳೀಯ ಪೊಲೀಸರು ಹಾಗೂ ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳಗಳನ್ನು ಕಳಿಸಲಾಗಿದೆ. ಮತ್ತಷ್ಟು ಮಾಹಿತಿ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.

Exit mobile version