ಬೆಂಗಳೂರು: ಕರ್ನಾಟಕದಲ್ಲಿರುವ ಮರಾಠಿಗರಿಗೆ ಪುಲೆ ಆರೋಗ್ಯ ವಿಮೆ ಘೋಷಣೆ, ಸ್ವಾತಂತ್ರ್ಯ ಯೋಧರಿಗೆ ಪಿಂಚಣಿ ಹೆಚ್ಚಳ ಮಾಡುವಂತಹ ನಿರ್ಧಾರದ ಮೂಲಕ ಗಡಿ ಭಾಗದಲ್ಲಿ ಗೊಂದಲ (Border Dispute) ಉಂಟುಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರದ ನಡೆಗೆ ಸಿಎಂ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ರಾಜ್ಯಗಳ ನಡುವೆ ವಿವಾದವನ್ನು ಹುಟ್ಟುಹಾಕಿ ರಾಜಕೀಯ ಮಾಡಬಾರದು ಎಂದ ಬೊಮ್ಮಾಯಿ, ಮಹಾರಾಷ್ಟ್ರದ ಜತ್ ತಾಲ್ಲೂಕು ಜನರು ಕರ್ನಾಟಕಕ್ಕೆ ಸೇರುವ ನಿರ್ಣಯ ಕೈಗೊಂಡಿದ್ದರು ಎನ್ನುವುದನ್ನು ನೆನಪಿಸಿ ಪ್ರತಿದಾಳಿ ನಡೆಸಿದ್ದಾರೆ.
ಜತ್ ತಾಲೂಕು ತೀವ್ರ ಬರಗಾಲಕ್ಕೆ ತುತ್ತಾಗಿತ್ತು. ಆಗ ನೀರಿನ ಸಮಸ್ಯೆ ಎದುರಾಗಿತ್ತು. ನಾವು ಆ ತಾಲೂಕಿನ ಜನರಿಗೆ ನೀರು ಕೊಟ್ಟಿದ್ದೆವು, ಎಲ್ಲ ಸವಲತ್ತು ಮಾಡಿದ್ದೆವು. ಜೆತ್ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತ್‌ಗಳೂ, ಕರ್ನಾಟಕ ಸೇರುವ ನಿರ್ಣಯವನ್ನು ಮಾಡಿದ್ದರು. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೆವು ಎಂದರು.
ನಮ್ಮ ಗಡಿ ಪ್ರಾಧಿಕಾರದಿಂದ ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ಕೊಡುವ ತೀರ್ಮಾನ ಮಾಡಿದ್ದೇವೆ. ಮಹಾರಾಷ್ಟ್ರ ದಲ್ಲಿರುವ ಕನ್ನಡಿಗರಿಗೆ, ಏಕೀಕರಣ ಹೋರಾಟ, ಸ್ವಾತಂತ್ರ್ಯ ಹೋರಾದಲ್ಲಿ ಕೆಲಸ ಮಾಡಿದವರಿಗೆ ಪಿಂಚಣಿ ಕೊಡುವ ತೀರ್ಮಾನವನ್ನು ನಮ್ಮ ಸರ್ಕಾರ ಮಾಡಿದೆ. ಇವರಿಗೆಲ್ಲ ಪಿಂಚಣಿ ಕೊಡುತ್ತೇವೆ ಎಂದರು.
ಇದನ್ನೂ ಓದಿ | ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದ; ಪ್ರಧಾನಿ ಮೋದಿ ಎದುರು ಪ್ರಸ್ತಾಪ ಮಾಡಲು ಹೊರಟ ಶಿಂಧೆ ಸರ್ಕಾರದ ಉನ್ನತ ನಿಯೋಗ
ಮಹಾರಾಷ್ಟ್ರ ಸರ್ಕಾರ ರಾಜ್ಯ ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ವ್ಯಾಜ್ಯ ಹಚ್ಚುವ ಕೆಲಸವನ್ನು ಮಹಾರಾಷ್ಟ್ರ ಸಿಎಂ ಮಾಡಬಾರದು. ಎರಡು ರಾಜ್ಯಗಳ ಸೌಹಾರ್ದತೆ ಇರಬೇಕು. ನಾವು ಎಲ್ಲ ಭಾಷಿಕರನ್ನೂ ಒಂದೇ ರೀತಿಯಲ್ಲಿ ನೋಡಿಕೊಳ್ಳುತ್ತೇವೆ. ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಇದ್ದಾರೆ. ಅವರ ಹಿತರಕ್ಷಣೆಯನ್ನು ಮಾಡಬೇಕಾದ ಕರ್ತವ್ಯ ನಮ್ಮದು, ನಾವು ಆ ಕೆಲಸವನ್ನು ಮಾಡುತ್ತೇವೆ ಎಂದರು.
ಮರಾಠಿಗರ ನಿಯೋಗ ಭೇಟಿ ಮಾಡಿ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಕರೆ ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಿಯೋಗ ಬರುವುದು ದೊಡ್ಡ ವಿಷಯ ಅಲ್ಲ. ನಮ್ಮ ನಿಯೋಗ ಅವರನ್ನು ಭೇಟಿ ಮಾಡುತ್ತದೆ. ಅವರ ನಿಯೋಗ ನಮ್ಮನ್ನು ಭೇಟಿ ಮಾಡುವುದು ಸಹಜ. ಇದೆಲ್ಲ ಪರಿಗಣೆಗೆ ಬರುವುದಿಲ್ಲ ಎಂದರು.
ಇದನ್ನೂ ಓದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ | ಸುಪ್ರೀಂನಲ್ಲಿ ವಾದ ಮಂಡನೆಗೆ ವಕೀಲರ ತಂಡ ರಚಿಸಿದ ಬೊಮ್ಮಾಯಿ