Site icon Vistara News

Breast cancer: ಬೈಕಥಾನ್‌ ಮೂಲಕ ಗಲ್ಲಿ ಗಲ್ಲಿಯಲ್ಲೂ ಸ್ತನ ಕ್ಯಾನ್ಸರ್‌ ಜಾಗೃತಿ ಮೂಡಿಸಿದ ಬೈಕರ್ಸ್‌ಗಳು

Breast Cancer Awareness Month celebrated through bikethon

ಬೆಂಗಳೂರು: ಸ್ತನಕ್ಯಾನ್ಸರ್‌ (Breast cancer) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ಪಿಂಕ್‌ ವುಮೆನ್ಸ್‌ ಶೀರ್ಷಿಕೆಯಡಿ ಬೈಕಥಾನ್‌ ಆಯೋಜಿಸಿತ್ತು. ಸ್ತನಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ನಡೆದ ಈ ಬೈಕಥಾನ್‌ ಕೆ.ಆರ್‌. ರಸ್ತೆಯ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದಿಂದ ಸೋಮವಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಂಡು, ಎಂ.ಜಿ. ರಸ್ತೆ, ಟ್ರಿನಿಟಿ ಸರ್ಕಲ್‌, ವಿಧಾನಸೌಧದ ಮುಂಭಾಗದಿಂದ ಹಾದು 10 ಕಿಲೋಮೀಟರ್ ದೂರದವರೆಗೆ ಸಾಗಿತು.

180ಕ್ಕೂ ಹೆಚ್ಚು ಮಹಿಳಾ ಬೈಕರ್ಸ್‌ಗಳು ಈ ಬೈಕಥಾನ್‌ನಲ್ಲಿ ಪಾಲ್ಗೊಂಡು, ಸ್ತನಕ್ಯಾನ್ಸರ್‌ನ ಬಗ್ಗೆ ಹಾಗೂ ಆರಂಭಿಕ ತಪಾಸಣೆಗೆ ಆದ್ಯತೆ ನೀಡುವ ಕುರಿತು ಜಾಗೃತಿ ಮೂಡಿಸಿದರು. ಇದಷ್ಟೇ ಅಲ್ಲದೆ, ಬೈಕಥಾನ್‌ಗೂ ಮುನ್ನ, ಜುಂಬಾ ಸೆಷನ್‌, ಮೈಕಲ್‌ ಜಾಕ್ಸನ್‌ ಅವರ “ಡೇಂಜರಸ್‌” ಪ್ರೇರಿತಗೊಂಡ ಸ್ಟೆಪ್ಸ್‌ ಹಾಕುವ ಮೂಲಕ ಸ್ತನ ಕ್ಯಾನ್ಸರ್‌ ಆರಂಭಿಕ ಪತ್ತೆಯ ಬಗ್ಗೆ “ಬೀಟ್ ಇಟ್” ಶೀರ್ಷಿಕೆಯ ಫಲಕಗಳನ್ನು ಹಿಡಿದು ವಿಭಿನ್ನವಾಗಿ ಜಾಗೃತಿ ಮೂಡಿಸಿದರು.

ಎಚ್‌ಸಿಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್, ಮೆಡಿಕಲ್‌ ಆಂಕೊಲಾಜಿಸ್ಟ್ ಡಾ. ರೋಶನಿ ದಾಸ್‌ಗುಪ್ತ, ಸರ್ಜಿಕಲ್ ಆಂಕೊಲಾಜಿಸ್ಟ್ ಡಾ ಮಹೇಶ್ ಬಂಡೇಮೆಗಲ್ ಈ ಬೈಕಥಾನ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮನೀಶಾ ಕುಮಾರ್, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನಕ್ಯಾನ್ಸರ್‌ ಕಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಆರಂಭದಲ್ಲಿಯೇ ಈ ಕ್ಯಾನ್ಸರ್‌ನನ್ನು ಪತ್ತೆ ಹಚ್ಚಿದರೆ ಸುಲಭವಾಗಿ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ನಾವಷ್ಟೇ ಜಾಗೃತರಾದೆ ಸಾಲದು, ನಮ್ಮ ಸುತ್ತಮುತ್ತ ಹಾಗೂ ಗ್ರಾಮೀಣ ಭಾಗದ ಮಹಿಳೆಯರಿಗೂ ಕೂಡ ಈ ಬಗ್ಗೆ ಅರಿವು ಮೂಡಿಸಬೇಕು. ಆಗಷ್ಟೇ ಎಲ್ಲರಿಗೂ ಸ್ತನಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಲಿದೆ. ಮಹಿಳಾ ಬೈಕರ್ಸ್‌ಗಳು ವಿಶೇಷವಾಗಿ ಬೈಕ್‌ ಸವಾರಿ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಿದ್ದು ಪ್ರಶಂಸನೀಯ ಎಂದರು.

ಮೆಡಿಕಲ್‌ ಆಂಕೊಲಾಜಿಸ್ಟ್ ಡಾ ರೋಶನಿ ದಾಸ್‌ಗುಪ್ತ ಮಾತನಾಡಿ, ಸ್ತನಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಿದಷ್ಟೂ ಈ ಬಗ್ಗೆ ಭಯಗೊಳ್ಳುವವರ ಸಂಖ್ಯೆಯೂ ಕಡಿಮೆಯಾಗಲಿದೆ. ಜನರು ಈ ಕ್ಯಾನ್ಸರ್‌ನ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿ, ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಈ ರೋಗದಿಂದ ಮುಕ್ತಿಗೊಂಡು ಎಂದಿನಂತೆ ಜೀವನ ನಡೆಸಬಹುದು, ಹೀಗಾಗಿ ಜನರು ಈ ಬಗ್ಗೆ ಹೆಚ್ಚು ಜಾಗೃತರಾಗುವುದು ಒಳಿತು ಎಂದು ಸಲಹೆ ನೀಡಿದರು.

ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಮಹೇಶ್ ಬಂಡೇಮೆಗಲ್ ಮಾತನಾಡಿ, “ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಂದು ಪಿಂಕ್ ಮಹಿಳಾ ಬೈಕ್‌ಥಾನ್ 2024 ನಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಅವಶ್ಯಕತೆ ಹೆಚ್ಚಿದೆ. ಇದರಿಂದಲಾದರೂ ಮಹಿಳೆಯರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹೇಳಿದರು.

Exit mobile version