Site icon Vistara News

BS Yediyurappa : ಸಮಸ್ಯೆ ಆಲಿಸಿದ ನನ್ನವಿರುದ್ಧವೇ ದೂರು ನೀಡಿದ್ದಾರೆ; ಪೋಕ್ಸೋ ಆರೋಪಕ್ಕೆ BSY ಪ್ರತಿಕ್ರಿಯೆ

BS Yediyurappa POCSO Case

ಬೆಂಗಳೂರು: ಯಾರೋ ಒಬ್ಬ ತಾಯಿ-ಮಗಳು (Mother and Daughter) ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದರು. ಅವರ ಸಮಸ್ಯೆ ಕೇಳಿದ್ದೆ. ಆದರೆ, ಈಗ ಅವರು ನನ್ನ ಮೇಲೆ ಹೀಗೆ ಆರೋಪ ಮಾಡಿದ್ದಾರೆ; ಇದು ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ (POCSO Case) ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ನೀಡಿರುವ ಪ್ರತಿಕ್ರಿಯೆ.

ಬಿ.ಎಸ್‌. ಯಡಿಯೂರಪ್ಪ ಅವರು ಫೆಬ್ರುವರಿ 2ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಪ್ರಾಪ್ತ ಬಾಲಕಿಗೆ (Minor Girl) ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಾಯಿ ಗುರುವಾರ ರಾತ್ರಿ ಸದಾಶಿವ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೋಕ್ಸೋ ಕಾಯಿದೆಯ (Protection of Children from Sexual Offences (Pocso) Act) ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್‌ 354 (ಎ) ಅಡಿಯಲ್ಲಿ ಮಾಜಿ ಸಿಎಂ ವಿರುದ್ಧ ಪ್ರಕರಣ ದಾಖಲಾಗಿದೆ. ಈ ನಡುವೆ ರಾಜ್ಯ ಸರ್ಕಾರ ಪ್ರರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

ಮಹಿಳೆ ನೀಡಿದ ದೂರಿನಲ್ಲಿ ಏನಿದೆ?

ಒಬ್ಬ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಈ ಹಿಂದೆ ಅತ್ಯಾಚಾರ ಆಗಿತ್ತು ಎನ್ನಲಾಗಿದೆ. ಈ ಸಂಬಂಧ ಎಸ್‌ಐಟಿ ತನಿಖೆಗೆ ವಹಿಸುವಂತೆ ಸಹಕರಿಸಬೇಕು ಎಂದು ಒತ್ತಾಯಿಸಲು 2024ರ ಫೆಬ್ರವರಿ 2ರಂದು ಯಡಿಯೂರಪ್ಪನವರ ಮನೆಗೆ ಸಂತ್ರಸ್ತ ಮಗಳ ಜತೆಗೆ ಆಕೆ ಹೋಗಿದ್ದರು. ಈ ವೇಳೆ ಯಡಿಯೂರಪ್ಪ ಅವರು ತಾಯಿ ಮತ್ತು ಮಗಳ ಜತೆ 9 ನಿಮಿಷಗಳ ಕಾಲ ಮಾತನಾಡಿದ್ದರು ಎನ್ನಲಾಗಿದೆ. ಆಗ ಅವರು ಬಾಲಕಿಯನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು ಸಾಂತ್ವನ ಹೇಳಿದ್ದರು ಎನ್ನಲಾಗಿದೆ. ಯಡಿಯೂರಪ್ಪ ಅವರು ಮುಂದೆ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ ಐದು ನಿಮಿಷ ಬಾಗಿಲು ಹಾಕಿಕೊಂಡಿದ್ದರು. ಈ ವೇಳೆ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಾಲಕಿ ತಾಯಿ ಬಳಿ ಹೇಳಿದ್ದಾಳೆ ಎನ್ನುವುದು ದೂರು.

ಈ ಮಹಿಳೆ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಬಿಸಿನೆಸ್ ಮ್ಯಾನ್‌ಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ. ಇಷ್ಟೊಂದು ಜನ ಆರೋಪಿಗಳಾಗಿದ್ದು ಹೇಗೆ, ಅವರ ಪಾತ್ರ ಏನು? ಅವರೆಲ್ಲರೂ ದೌರ್ಜನ್ಯ ಎಸಗಿದರಾ ಎನ್ನುವುದು ತನಿಖೆಯಿಂದ ಸ್ಪಷ್ಟವಾಗಬೇಕಾಗಿದೆ.

ಇದನ್ನೂ ಓದಿ : Lok Sabha Election 2024: ಡಿಕೆ ಬ್ರದರ್ಸ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಿಂದೆ ‘ಆಪರೇಷನ್‌ ಜೆಡಿಎಸ್‌ ಕಾರ್ಯಕರ್ತ’?

ಇದಕ್ಕೆ ಯಡಿಯೂರಪ್ಪ ಅವರು ಹೇಳುವುದೇನು?

ತಮ್ಮ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದ ಬಳಿಕ ಶುಕ್ರವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್‌. ಯಡಿಯೂರಪ್ಪ ಅವರು, ನಾನು ಉಪಕಾರ ಮಾಡಲು ಹೋದರೆ ನನ್ನ ವಿರುದ್ಧವೇ ಹೀಗೆ ಮಾಡಿದ್ದಾರೆ ಎಂದು ಹೇಳಿದರು.

ಯಾರೋ ಒಬ್ಬ ಹೆಣ್ಣು ಮಗಳು ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದರು. ತಾಯಿ- ಮಗಳು ಹಲವು ಬಾರಿ ಬಂದಿದ್ದರು. ಅವರನ್ನು ಮನೆಯ ಒಳಗೆ ಕರೆಸಿ ಸಮಸ್ಯೆ ಕೇಳಿದ್ದೇನೆ. ಈ ವೇಳೆ ತಮಗೆ ಅನ್ಯಾಯವಾಗಿದೆ ಎಂದಿದ್ದರು. ಆಮೇಲೆ ನನ್ನ ಬಗ್ಗೆಯೇ ಏನೇನೋ ಮಾತನಾಡಲು ಶುರು ಮಾಡಿದರು. ಆಗ ಕಮಿಷನರ್‌ಗೆ ಕರೆ ಮಾಡಿ ಅವರನ್ನು ಕಳುಹಿಸಿಕೊಟ್ಟೆ” ಎಂದು ಯಡಿಯೂರಪ್ಪ ವಿವರಣೆ ನೀಡಿದ್ದಾರೆ.

ನಾನು ಸಹಾಯ ಮಾಡಲು ಹೋದರೆ ಇನ್ನ ವಿರುದ್ಧವೇ ಏನೇನೋ ಮಾತನಾಡುತ್ತಿದ್ದಾರೆ. ನನ್ನ ಮೇಲೆ ದೂರು ಕೊಟ್ಟಿದ್ದಾರೆ. ಈ ಆರೋಪಗಳು ನಿರಾಧಾರವಾಗಿದೆ. ಏನೇ ಇದ್ದರೂ ಎಲ್ಲವನ್ನು ಎದುರಿಸೋಣ ಎಂದು ಅವರು ಹೇಳಿದ್ದಾರೆ.

ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂದು ಎಂದು ಹೇಳಲು ಇಷ್ಟಪಡುವುದಿಲ್ಲ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಸ್ಪಷ್ಟಪಡಿಸಿದರು. ಆದರೆ, ಏನೋ ಷಡ್ಯಂತ್ರ ನಡೆದಿದೆ ಎನ್ನುವ ಧಾಟಿಯಲ್ಲಿ ಮಾತನಾಡಿದರು. ಅತ್ಯಂತ ನಿರಾಳವಾಗಿ, ನಗುನಗುತ್ತಾ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದರು.

ದೂರಿನ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್‌ ಪ್ರತಿಕ್ರಿಯೆ

ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಗುರುವಾರ ರಾತ್ರಿ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಇದರನ್ನು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖೆ ಆಗುವವರೆಗೂ ಯಾವುದೇ ವಿಷಯ ತಿಳಿಸಲು ಸಾಧ್ಯವಿಲ್ಲ. ಇದು ಒಬ್ಬ ಮಾಜಿ ಮುಖ್ಯಮಂತ್ರಿ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಇದು ಬಹಳ ಸೂಕ್ಷ್ಮ ವಿಷಯ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ. ಮಹಿಳೆ ದೂರನ್ನು ಲಿಖಿತವಾಗಿ ನೀಡಿಲ್ಲ. ಬದಲಾಗಿ ಟೈಪ್‌ ಮಾಡಿ ನೀಡಲಾಗಿದೆ ಎಂದು ತಿಳಿಸಿದರು.

ಧವಳ ಗಿರಿ ನಿವಾಸಕ್ಕೆ ಪೊಲೀಸರ ಭೇಟಿ, ಮಾಹಿತಿ ಸಂಗ್ರಹ

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಸದಾಶಿವ ನಗರ ಮತ್ತು ಹೈಗ್ರೌಂಡ್ಸ್‌ ಠಾಣೆಯ ಇನ್‌ಸ್ಪೆಕ್ಟರ್‌ಗಳು ಧವಳಗಿರಿ ನಿವಾಸಕ್ಕೆ ಭೇಟಿ ನೀಡಿ ಬಿ.ಎಸ್‌.ವೈ ಅವರಿಂದ ಮಾಹಿತಿ ಪಡೆದಿದ್ದಾರೆ. ಕಾನೂನಾತ್ಮಕವಾಗಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಬಿ.ಎಸ್‌. ಯಡಿಯೂರಪ್ಪ್‌ ಹೇಳಿದ್ದಾರೆ ಎನ್ನಲಾಗಿದೆ.

Exit mobile version