Site icon Vistara News

BY Vijayendra : ಬಿಜೆಪಿ ಸಂಸದರು ಗಂಡಸರಲ್ಲ ಎಂಬ ಹೇಳಿಕೆಗೆ ಇಂದಿರಾ ಫೋಟೊ ಮೂಲಕ ವಿಜಯೇಂದ್ರ ಉತ್ತರ

BY Vijayendra Indira Gandhi Photo

ಬೆಂಗಳೂರು: ಬಿಜೆಪಿ ಸಂಸದರು ಬರೀ ಶೋ ಪೀಸ್‌ಗಳು, ಅವರಲ್ಲಿ ಯಾರೂ ಗಂಡಸರಿಲ್ಲ ಎಂಬ ಮಾಗಡಿ ಕಾಂಗ್ರೆಸ್‌ ಶಾಸಕ (Magadi Congress MLA) ಎಚ್‌.ಸಿ. ಬಾಲಕೃಷ್ಣ (HC Balakrishna) ಅವರ ವಿವಾದಾತ್ಮಕ ಹೇಳಿಕೆಗೆ (controversial Statement) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರು ಇಂದಿರಾ ಗಾಂಧಿ ಅವರ ಫೋಟೊದ ಮೂಲಕ ತಿರುಗೇಟು ನೀಡಿದ್ದಾರೆ.

ರಾಮನಗರದ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಮಾತನಾಡಿದ್ದ ಶಾಸಕ ಎಚ್.ಸಿ.ಬಾಲಕೃಷ್ಣ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಪಾಲನ್ನು ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಆಪಾದಿಸಿ ದಿಲ್ಲಿಯಲ್ಲಿ ಆಯೋಜಿಸಲಾಗಿರುವ ಜಂತರ್‌ ಮಂತರ್‌ ಪ್ರತಿಭಟನೆಗೆ ಸಂಬಂಧಿಸಿ ಹೇಳಿಕೆ ನೀಡಿದ ಅವರು ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ರಾಜ್ಯ ಸಂಸದರ ಅಸಹಾಯಕತೆಯನ್ನು ಆಡಿಕೊಂಡರು.

ʻʻಬಿಜೆಪಿಯ ಸಂಸದರು ನರೇಂದ್ರ ಮೋದಿ ಮುಂದೆ ಕೂರೋದು ಇಲ್ಲ, ಏಳೋದು ಇಲ್ಲ. ಕೇವಲ ಮೋದಿ ಹೆಸರಲ್ಲಿ ಗೆಲ್ತಾರೆ, ಆದರೆ ವೈಯಕ್ತಿಕ ವರ್ಚಸ್ಸು ಇಲ್ಲ. ಪಕ್ಕದ ತಮಿಳುನಾಡು ತನ್ನ ಹಕ್ಕಿಗಾಗಿ ಮಾಡುವ ಹೋರಾಟವನ್ನ ನೋಡಿ ಕಲಿಯಲಿ. ಬಿಜೆಪಿ ಸಂಸದರೆಲ್ಲಾ ಶೋ ಪೀಸ್ ಗಳು. ಕೇವಲ ದೆಹಲಿಗೆ ಹೋಗೋದು ಟಿಎ-ಡಿಎ ತಕೊಂಡು ಬರೋದು ಅಷ್ಟೇ ಇವರ ಕೆಲಸ. ಬಿಜೆಪಿ ಎಂಪಿಗಳು, ಮಂತ್ರಿಗಳು ರಾಜ್ಯದ ಧ್ವನಿ ಎತ್ತಿಲ್ಲ. ಹಾಗಾಗಿ ನಾವು ಹೋರಾಟ ಮಾಡ್ತಿದ್ದೀವಿʼʼ ಎಂದು ಹೇಳಿದ್ದರು.

ʻʻಪಾಪ.. ನಮ್ಮ ಹೋರಾಟ ನೋಡಿಯಾದರೂ ಬಿಜೆಪಿಯ ಗಂಡಸರು ಹೋರಾಟ ಮಾಡ್ತಾರಾ ನೋಡೋಣ.. ಇದರ ಅರ್ಥ ಬಿಜೆಪಿಯಲ್ಲಿ ಯಾರು ಗಂಡಸರು ಇಲ್ಲ ಅಂತ.! ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ ಎಂದು ಅರ್ಥʼʼ ಎಂದು ಬಿಜೆಪಿ ಸಂಸದರ ವಿರುದ್ಧ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ಮಾಡಿದ್ದರು.

ಇದನ್ನೂ ಓದಿ: Congress Protest : ಜಂತರ್‌ ಮಂತರ್‌ ಹೋರಾಟಕ್ಕೆ ನೀವೂ ಬನ್ನಿ; ಬಿಜೆಪಿ ನಾಯಕರು, ಸಂಸದರಿಗೆ ಸಿಎಂ ಆಹ್ವಾನ

ಇಂದಿರಾ ಫೋಟೊ ಹಂಚಿಕೊಂಡ ಬಿ.ವೈ ವಿಜಯೇಂದ್ರ

ಬಾಲಕೃಷ್ಣ ಅವರ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್‌ನ ಗುಲಾಮಿತನವನ್ನು ಪ್ರತಿಪಾದಿಸುವ ಚಿತ್ರವೊಂದನ್ನು ಹಂಚಿಕೊಂಡು ಟಾಂಗ್‌ ನೀಡಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ.

ಬ್ರಿಟಿಷರು ದೇಶಬಿಟ್ಟು ತೊಲಗಿದರೂ ನೆಹರೂ ಕುಟುಂಬದ ಗುಲಾಮಗಿರಿಯ ನೆರಳಲ್ಲೇ ಇರುವ ಶಾಸಕ ಬಾಲಕೃಷ್ಣನವರಂತಹ ಕಾಂಗ್ರೆಸ್ಸಿಗರು ಇಂದು ನಮ್ಮ ಪಕ್ಷದ ಸಂಸದರುಗಳನ್ನು ಕುರಿತು ನೀಡಿರುವ ಕೀಳುಮಟ್ಟದ ಹೇಳಿಕೆಗೆ ಈ ಚಿತ್ರವೇ ಉತ್ತರ ಹೇಳುತ್ತದೆ ಎಂದು ಬರೆದು ಅವರು ಟ್ವಿಟರ್‌ನಲ್ಲಿ ಪ್ರಕಟಿಸಿರುವ ಚಿತ್ರದಲ್ಲಿ ಇಂದಿರಾ ಗಾಂಧಿ ಅವರು ಕುರ್ಚಿಯೊಂದರಲ್ಲಿ ಕುಳಿತುಕೊಂಡಿರುವುದು, ಉಳಿದ ನಾಯಕರೆಲ್ಲ ಸುತ್ತ ದೈನ್ಯ ಸ್ಥಿತಿಯಲ್ಲಿ ನಿಂತಿರುವುದು ಕಾಣುತ್ತದೆ. ಈ ಚಿತ್ರ ಹಿಂದೆಯೂ ಸಾಕಷ್ಟು ಜನಪ್ರಿಯವಾಗಿತ್ತು. ಇದಕ್ಕೆ ಸಂಪುಟದ ಏಕೈಕ ಗಂಡಸು ಇಂದಿರಾ ಗಾಂಧಿ ಎಂದೆಲ್ಲ ಶೀರ್ಷಿಕೆ ಹಾಕಿ ಇಂದಿರಾ ಗಾಂಧಿ ಅವರನ್ನು ಹಾಡಿ ಹೊಗಳಲಾಗುತ್ತಿತ್ತು.

Exit mobile version