Site icon Vistara News

Cabinet Meeting : ಪಿಎಸ್‌ಐ ಹಗರಣದ ತನಿಖೆಗೆ SIT ರಚನೆ; ಸಂಪುಟ ಒಪ್ಪಿಗೆ

Cabinet Meeting PSI Scam

ಬೆಂಗಳೂರು: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಗರಣದ (PSI Scam) ತನಿಖೆಗೆ ವಿಶೇಷ ತನಿಖಾ ತಂಡ (Special Investigation Team-SIT) ರಚನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಗರಣದ ನ್ಯಾಯಾಂಗ ತನಿಖೆ (Judicial Enquiry) ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ (Justice B Veerappa) ಅವರು ನೀಡಿದ ತನಿಖಾ ವರದಿಯ ಶಿಫಾರಸಿನ ಮೇರೆಗೆ ತನಿಖೆಯನ್ನು ಎಸ್‌ಐಟಿಗೆ ವಹಿಸಲು ಸಚಿವ ಸಂಪುಟ ಸಭೆ (Cabinet Meeting) ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ‌ ತೀರ್ಮಾನ ಮಾಡಲಾಗಿದೆ ಎಂದು ಸಭೆಯ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಈ ಹಗರಣದಲ್ಲಿ 113 ಮಂದಿ ಭಾಗಿಯಾಗಿರುವ ಬಗ್ಗೆ ನ್ಯಾಯಾಂಗ ತನಿಖೆಯಿಂದ ಬೆಳಕಿಗೆ ಬಂದಿದೆ. ಅದರ ತನಿಖೆಗಾಗಿ ಎಸ್‌ಐಟಿ ರಚನೆಯಾಗಲಿದೆ ಎಂದು ಸಚಿವರು ಹೇಳಿದರು.

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ 545 ಪಿಎಸ್ಐ ನೇರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆಪಾದನೆಗೆ ಸಂಬಂಧಿಸಿ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚಿಸಲಾಗಿತ್ತು,

2021ರ ಜನವರಿ 21ರಂದು ಪಿಎಸ್ಐಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿತ್ತು. ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ, ವಿವಿಧ ಹಂತಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಯಾರೆಲ್ಲಾ ದುರ್ಲಾಭ ಪಡೆದಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಲಾಗಿತ್ತು.

ನ್ಯಾಯಮೂರ್ತಿ ಬಿ. ವೀರಪ್ಪ ನೀಡಿದ ವರದಿಯಲ್ಲಿ ಏನಿತ್ತು?

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿರುವ ನ್ಯಾಯಮೂರ್ತಿ ವೀರಪ್ಪ ಅವರು ಕಳೆದ ಜನವರಿ 23ರಂದು 471 ಪುಟಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದರು. ಈ ವರದಿಯಲ್ಲಿ ಪೊಲೀಸರು ಮತ್ತು ಜನಪ್ರತಿನಿಧಿಗಳ ಗಂಭೀರ ಲೋಪವನ್ನು ಎತ್ತಿ ತೋರಿಸಲಾಗಿತ್ತು.

ಜುಲೈ 2023ರಲ್ಲಿ ರಚನೆಗೊಂಡ ಸಮಿತಿ 324 ದಾಖಲೆಗಳನ್ನು ಪತ್ತೆ ಹಚ್ಚಿದ್ದು, 28 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ ಮತ್ತು ಪೊಲೀಸರು ಸಲ್ಲಿಸಿದ 16 ವರದಿಗಳಲ್ಲಿ ಉಲ್ಲೇಖಿಸಲಾದ 117 ಆರೋಪಿಗಳನ್ನು ದೃಢೀಕರಿಸಿತ್ತು. ಈ ಹಗರಣದಲ್ಲಿ ಆರೋಪ ಕೇಳಿಬಂದ 52 ಅಭ್ಯರ್ಥಿಗಳ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಭವಿಷ್ಯದಲ್ಲಿ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ : PSI Scam: 545 ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ; ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಏನಿದು ಪಿಎಸ್‌ಐ ಹಗರಣ?

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) 545 ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಜನವರಿ 21, 2021ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಕ್ಟೋಬರ್‌ 3, 2021ರಂದು ರಾಜ್ಯದ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಲಿಖಿತ ಪರೀಕ್ಷೆಯಲ್ಲಿ ಅಕ್ರಮಗಳು ಕಂಡು ಬಂದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ಒಳಪಡಿಸಿತ್ತು. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿನ 52 ಅಭ್ಯರ್ಥಿಗಳು ಒಳಗೊಂಡಂತೆ ಇತರೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಅದರ ಬಗ್ಗೆ ನ್ಯಾಯಾಂಗ ತನಿಖೆ ನಡೆದು ಈಗ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲು ಸಂಪುಟು ಒಪ್ಪಿಗೆ ನೀಡಿದೆ.

Exit mobile version