ಆನೇಕಲ್: ಎರಡು ದಿನಗಳ ಹಿಂದೆ ಅತಿವೇಗದಿಂದ ಬಂದು ಇಲ್ಲಿಯ ಕೆರೆಗೆ ಉರುಳಿದ್ದ (Car accident) ಕಾರಿನಲ್ಲಿ ವಿದ್ಯಾರ್ಥಿಯೊಬ್ಬ ಇದ್ದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತನ ಶವ ಇಂದು ಪತ್ತೆಯಾಗಿದೆ. ಪೊಲೀಸರು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದೇ ಭಾವಿಸಿದ್ದರು.
ಆಗಸ್ಟ್ ೧೨ ರಂದು ಕಾರು ಕೆರೆಗೆ ಉರಳಿತ್ತು. ಕೂಡಲೇ ಸ್ಥಳೀಯರು ಕಾರನ್ನು ಮೇಲಕ್ಕೆತ್ತಿದ್ದು, ಅದರಲ್ಲಿದ್ದವರನ್ನು ರಕ್ಷಿಸಿದ್ದರು. ಆದರೆ ವಿದ್ಯಾರ್ಥಿಯೊಬ್ಬ ನೀರುಪಾಲಾಗಿರುವುದು ಪೊಲೀಸರ ಗಮನಕ್ಕೆ ಬಂದಿರಲಿಲ್ಲ. ಇಂದು ವಿದ್ಯಾರ್ಥಿಯ ಮೃತ ದೇಹ ತೇಲಿ ಬಂದ ಮೇಲಷ್ಟೇ ಒಬ್ಬ ಮೃತಪಟ್ಟಿರುವುದು ಗೊತ್ತಾಗಿದೆ.
ಮೃತ ಯುವಕನನ್ನು ವಿನ್ಯಾಸ್ ಎಂದು ಗುರುತಿಸಲಾಗಿದೆ. ತನಿಖೆಗೆ ಇಳಿದ ಪೊಲೀಸರಿಗೆ ವಿನ್ಯಾಸ್ ಕುಮಾರಸ್ವಾಮಿ ಲೇಔಟ್‌ನ ನಿವಾಸಿಯಾಗಿದ್ದು, ವಿವಿ ಪುರಂನ ಜೈನ್ ಕಾಲೇಜಿನಲ್ಲಿ ದ್ವಿತೀಯ ಸೆಮಿಸ್ಟರ್ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ನಡೆದಿದ್ದೇನು?
ವಿನ್ಯಾಸ್ ತನ್ನ ಜೈನ್ ಕಾಲೇಜು ಹಾಗೂ ಕ್ರೈಸ್ಟ್ ಕಾಲೇಜಿನ ಏಳು ಜನ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದರು. ಪಾರ್ಟಿ ಮುಗಿಸಿ ವಾಪಸ್ ಬರುವಾಗ ಚಿನ್ನಯ್ಯನಪಾಳ್ಯದ ಬುಜಂಗದಾಸಯ್ಯನ ಕೆರೆ ತಿರುವಿನಲ್ಲಿ ಅತಿವೇಗ ಚಾಲನೆಯಿಂದಾಗಿ ಕಾರು ಕೆರೆಗೆ ಉರುಳಿ ಬಿದ್ದಿದೆ.
ಸ್ಥಳೀಯರ ಸಹಾಯದಿಂದ ಜೆಸಿಬಿ ಮೂಲಕ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಮೊದಮೊದಲು ಕಾರಿನೊಳಗೆ ಇದ್ದವರೆಲ್ಲ ಸುರಕ್ಷಿತವಾಗಿ ಇದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ ಘಟನೆ ನಡೆದು ಮೂರು ದಿನ ಬಳಿಕ ಕೆರೆಯಲ್ಲಿ ವಿನ್ಯಾಸ್ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ | ಬಾಗಲಕೋಟೆಯಲ್ಲಿ ತ್ರಿವಳಿ ನದಿಗಳ ಅಬ್ಬರ, ಪಂಪ್‌ಸೆಟ್ ತರಲು ಹೋದ ಯುವಕ ನೀರುಪಾಲು