ಬೆಂಗಳೂರು: ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ (ಆಗಸ್ಟ್ 25) ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ವಾದ-ಪ್ರತಿವಾದಗಳನ್ನು ಆಲಿಸಿದೆ. ಅಲ್ಲದೆ, ಮೊದಲು ಪ್ರಾಧಿಕಾರದ ಮುಂದೆ ಹೋಗುವಂತೆ ತಮಿಳುನಾಡಿಗೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 1ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಕಾವೇರಿ ಜಲವಿವಾದಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಕಾವೇರಿ ಪ್ರಾಧಿಕಾರ 10 ಸಾವಿರ ಕ್ಯೂಸೆಕ್ ನಿತ್ಯ ಬಿಡುವಂತೆ ಆದೇಶಿಸಿತ್ತು. ಆದರೆ, 15 ಸಾವಿರ ಕ್ಯೂಸೆಕ್ ನೀರನ್ನು ಬಿಡಬೇಕು ಎಂದು ಕ್ಯಾತೆ ತೆಗೆದ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಸುಪ್ರೀಂ ಕೋರ್ಟ್ ತಕರಾರು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು ವಾದ-ಪ್ರತಿವಾದವನ್ನು ಆಲಿಸಿದೆ. ಬಳಿಕ ವಿಚಾರಣೆಯನ್ನು ಮುಂದಿನ ಶುಕ್ರವಾರ ಅಂದರೆ, ಸೆಪ್ಟೆಂಬರ್ 1ಕ್ಕೆ ಮುಂದೂಡಿ ಆದೇಶಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನೇತೃತ್ವದ ಪೀಠವು, ತಮಿಳುನಾಡಿನ ತಕರಾರಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. “ನೀವು ಪ್ರಾಧಿಕಾರದ ಮುಂದೆ ಏಕೆ ಹೋಗುವುದಿಲ್ಲ? ಪ್ರಾಧಿಕಾರದಲ್ಲಿರುವವರು ತಜ್ಞರಿದ್ದಾರೆ. ನೀವು ಅವರನ್ನು ಸಂಪರ್ಕಿಸಿ. ನೇರವಾಗಿ ಏಕೆ ಸುಪ್ರೀಂ ಕೋರ್ಟ್ಗೆ ಬಂದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ತಮಿಳುನಾಡು ಪರ ವಕೀಲರು, ಪ್ರಾಧಿಕಾರದ ಆದೇಶ ಇದ್ದರೂ ಕರ್ನಾಟಕ ಪಾಲಿಸಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ಪರ ವಕೀಲರು, ತಮಿಳುನಾಡಿನ ವಾದ ಸುಳ್ಳು. ನಾವು ಪ್ರಾಧಿಕಾರದ ಆದೇಶವನ್ನು ಪಾಲಿಸಿದ್ದೇವೆ. ನಮಗೆ ನೀರಿನ ಕೊರತೆ ತುಂಬಾ ಇದೆ ಎಂದು ಹೇಳಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ವಕೀಲರು, ಪ್ರಾಧಿಕಾರದ ಆದೇಶ ಪಾಲನೆ ಆಗೇ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ನ್ಯಾಯಪೀಠವು, ಆದೇಶ ಪಾಲಿಸಿಲ್ಲ ಎಂದರೆ ಅದರ ಬಗ್ಗೆ ಪ್ರಾಧಿಕಾರಕ್ಕೆ ದೂರು ನೀಡಿ. ಆದೇಶ ಪಾಲನೆ ಆಗಿದೆಯೇ ಇಲ್ಲವೇ ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ ಎಂದ ಪ್ರಶ್ನೆ ಮಾಡಿದೆ. ಆಗ ಪ್ರಾಧಿಕಾರದಿಂದ ನೀವೇ ಒಂದು ವರದಿ ಪಡೆದುಕೊಳ್ಳಿ ಎಂದು ಕೋರ್ಟ್ಗೆ ತಮಿಳುನಾಡು ಪರ ವಕೀಲ ಮುಖುಲ್ ರೋಹಟಗಿ ಸಲಹೆ ನೀಡಿದರು. ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್, ಮೋಹನ್ ಕಾತರಕಿ ವಾದ ಮಂಡಿಸಿದ್ದಾರೆ.
ವಾದ-ಪ್ರತಿವಾದವನ್ನು ಆಲಿಸಿದ ನ್ಯಾ. ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿ ಆದೇಶಿಸಿದೆ.
ಇದನ್ನೂ ಓದಿ: Modi in Bangalore : ನಾಳೆ ಬೆಂಗಳೂರಲ್ಲಿ ಮೋದಿ ರೋಡ್ ಶೋ ಕ್ಯಾನ್ಸಲ್; ಬಿಜೆಪಿ ಧ್ವಜಕ್ಕಿಲ್ಲ ಅವಕಾಶ!
ಕರ್ನಾಟಕ-ತಮಿಳುನಾಡಿನ ವಾದದ ಸಾರಾಂಶ ಏನು?
ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ಸೋಮವಾರ ನಡೆಯಲಿದೆ. ಮುಂದಿನ 15 ದಿನಗಳ ತನಕ ನೀರು ಹಂಚಿಕೆ ಬಗ್ಗೆ ಅದು ಪರಿಶೀಲಿಸಿ ಸೂಕ್ತ ಆದೇಶ ನೀಡಲಿದೆ. ನಂತರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಪಾಲನೆ ಆಗಿದೆಯೇ ಇಲ್ಲವೇ ಎಂಬುದನ್ನು ಗಮನಿಸಲಿದೆ. ಪ್ರಾಧಿಕಾರ ನೀಡಿದ್ದ ಆದೇಶ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧ ಎಂದು ಕರ್ನಾಟಕ ಹೇಳಿದೆ. ಈ ವಾದವನ್ನು ತಮಿಳುನಾಡು ವಿರೋಧಿಸಿದ್ದು ನೀರಿನ ಪ್ರಮಾಣ ಹೆಚ್ಚಬೇಕು ಎಂದು ಹೇಳಿದೆ.