ಬೆಂಗಳೂರು: ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿಎಂ ಸಿಟಿ ರೌಂಡ್ಸ್ ಮುಂದುವರಿದಿದ್ದು, ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ರಾಜರಾಜೇಶ್ವರಿ ನಗರ, ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರಗಳ ಬಳಿಕ ಇಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ರೌಂಡ್ಸ್ ಕೈಗೊಂಡರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುಮಹಡಿ ವಾಹನ ನಿಲ್ದಾಣ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಇದನ್ನೂ ಓದಿ | ಮುಂದಿನ ಸಿಎಂ ಶ್ರೀರಾಮುಲು ಎಂದು ಎತ್ತಿನ ಮೇಲೆ ಬರೆದ ರೈತ, ಫೋಟೊ ವೈರಲ್
ಅದೇ ವ್ಯಾಪ್ತಿಯ ಬೈರಸಂದ್ರ ಬಡಾವಣೆಯಲ್ಲಿ ನವೀಕರಣಗೊಂಡಿರುವ ಬೈರಸಂದ್ರ ಕೆರೆಯನ್ನು, ಶಾಂತಿನಗರ ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ನಾಗರಿಕರ ಜಲಮಾರ್ಗ (water way) ಹಾಗೂ ಕೋರಮಂಗಲ ಕಣಿವೆ ಕೆ-100ನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ ಗರುಡಾಚಾರ್, ರವಿಸುಬ್ರಹ್ಮಣ್ಯ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರರು ಉಪಸ್ಥಿತರಿದ್ದರು.
ನಾನು ಕಲಾಸಿಪಾಳ್ಯದ ಕಾಯಂ ಗಿರಾಕಿ
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ʼʼಕೆ ಆರ್ ಮಾರ್ಕೆಟ್‌ಗೂ ನನಗೂ ಹಳೆ ಸಂಬಂಧವಿದೆ. ಮೊದಲಿಂದಲೂ ನಾನು ಕೈಗಾರಿಕೆ ನಡೆಸುತ್ತಿದ್ದೇನೆ. ಹಾಗಾಗಿ ಎಸ್‌ಪಿ ರಸ್ತೆಗೆ ಆಗಾಗ ಬರುತ್ತೇನೆ. ನಾನು ಕಲಾಸಿಪಾಳ್ಯದ ಕಾಯಂ ಗಿರಾಕಿʼʼ ಎಂದು ಹೇಳಿದರು.
ʼʼಬಹಳ ಸಂತೋಷದಿಂದ ಚಿಕ್ಕಪೇಟೆ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಚಿಕ್ಕಪೇಟೆಯಲ್ಲಿ ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆಯಿಂದ ಹೊಸ ಯೋಜನೆಗಳು ನಡೆಯುತ್ತಿವೆ. ರಾಜಕಾಲುವೆ ನೀರನ್ನು ಡೈವರ್ಟ್ ಮಾಡಿ ಶುದ್ದ ನೀರನ್ನು ಕಾಲುವೆಗೆ ಬಿಟ್ಟು, ಅಕ್ಕಪಕ್ಕ ಗಾರ್ಡನ್ ಮಾಡಲಾಗುತ್ತಿದೆ. ಮೆಜೆಸ್ಟಿಕ್‌ನಿಂದ ಶುರು ಮಾಡಿ ಬೆಳ್ಳಂದೂರುವರೆಗೂ ಸುಮಾರು 23 ಕಿ.ಮೀ ವಿಸ್ತೀರ್ಣದಲ್ಲಿ ಹೀಗೆ ಮಾಡಲಾಗುತ್ತಿದೆ. ಬೆಂಗಳೂರಿನ ಬಗ್ಗೆ ದೂರದೃಷ್ಟಿ ಇಟ್ಟುಕೊಂಡಿದ್ದ ಯಡಿಯೂರಪ್ಪ ಅವರು ಈ ಯೋಜನೆಗೆ ಅನುದಾನ ನೀಡಿದ್ದರು. ಇನ್ನೂ ಎರಡು ಮೂರು ತಿಂಗಳಲ್ಲಿ ಚಿಕ್ಕಪೇಟೆ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರಿಂದಲೇ ಇದನ್ನು ಉದ್ಘಾಟನೆ ಮಾಡಿಸಲಾಗುವುದುʼʼ ಎಂದು ಸಿಎಂ ಹೇಳಿದರು.
ʼʼಬೆಂಗಳೂರು ಬೃಹತ್ ಆಗಿ ಬೆಳೆಯುತ್ತಿದೆ. ನಿತ್ಯ 5 ಸಾವಿರ ಹೊಸ ವಾಹನಗಳು ರಸ್ತೆಗೆ ಇಳಿಯುತ್ತವೆ. ಬೆಂಗಳೂರಿನ ಟ್ರಾಫಿಕ್ ತಡೆಗಟ್ಟಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ವಾರ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿಯವರು 15 ಸಾವಿರ ಕೋಟಿ ರೂ. ವೆಚ್ಚದ ಸಬ್ ಅರ್ಬನ್ ರೈಲು ಯೋಜನೆಗೆ ಅಡಿಗಲ್ಲು ಹಾಕುತ್ತಾರೆ. ಬೆಂಗಳೂರು ಅಭಿವೃದ್ಧಿಗೆ ೮೦೦೦ ಕೋಟಿ ರೂ. ಅನುದಾನ ನೀಡಲಾಗಿದೆʼʼ ಎಂದರು.
ಸಂಸದ ತೇಜಸ್ವಿ ಸೂರ್ಯ ಸೀಟು ಸಿಟ್ಟು!
ನವೀಕರಣಗೊಂಡ ಭೈರಸಂದ್ರ ಕೆರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಸಿಟ್ಟಾದ ಘಟನೆ ನಡೆಯಿತು. ಸಿಎಂ ಹಿಂದೆ ಕುಳಿತುಕೊಳ್ಳಲು ಜಾಗ ಇಲ್ಲದೆ ಇರೋದಕ್ಕೆ ತೇಜಸ್ವಿ ಸೂರ್ಯ ಕೋಪಗೊಂಡರು. ಕೆರೆ ಉದ್ಘಾಟಿಸಿದ ಬಳಿಕ ಎಲೆಕ್ಟ್ರಿಕ್ ಕಾರಿನಲ್ಲಿ ಕೆರೆ ರೌಂಡ್ಸ್ ಹಾಕಲು ಸಿಎಂ ಮುಂದಾದರು. ಈ ವೇಳೆ ಮೊದಲೇ ಬಂದು ಎಲೆಕ್ಟ್ರಿಕ್ ಕಾರಿನಲ್ಲಿ ಸಿಎಂ ಹಿಂಬದಿಯ ಜಾಗದಲ್ಲಿ ಮಾಜಿ ಮೇಯರ್ ಗಂಗಾಬಿಕೆ ಹಾಗೂ ಅವರ ಪತಿ ಮಲ್ಲಿಕಾರ್ಜುನ ಕುಳಿತಿದ್ದರು. ಅವರು ಕುಳಿತಿದ್ದನ್ನು ನೋಡಿ ಸಿಟ್ಟಾದ ತೇಜಸ್ವಿ ಸೂರ್ಯ, ನಡೆದುಕೊಂಡೇ ಬರುತ್ತೇನೆ ಎಂದು ಸಿಟ್ಟಿನಿಂದ ಹೇಳೀದರು. ಅವರನ್ನು ಸಮಾಧಾನಪಡಿಸಿದ ಸಚಿವ ಆರ್ ಅಶೋಕ್, ಎಲೆಕ್ಟ್ರಿಕ್ ವಾಹನದ ಮೂರನೇ ಲೈನ್ ಸೀಟ್‌ನಲ್ಲಿ ಕೂರಿಸಿಕೊಂಡು ಬಂದರು.
ಬಳಿಕ ಬೈರಸಂದ್ರ ಕೆರೆಯಲ್ಲಿ ಗಿಡ ನೆಡಲು ಸಿಎಂ ಕೆಳಗೆ ಇಳಿದಾಗ ಒಂದು ಕಡೆ ವಾಹನದಿಂದ ಇಳಿದು ಹತ್ತುವ ಮೊದಲೇ ಬಂದು ಎರಡನೇ ಸೀಟನ್ನು ತೇಜಸ್ವಿ ಸೂರ್ಯ ಹಿಡಿದುಕೊಂಡರು. ಜತೆಗೆ ಅದೇ ಸೀಟ್‌ನ ಪಕ್ಕದಲ್ಲೇ ಅಶೋಕ್‌ರನ್ನು ಕೂರಿಸಿಕೊಂಡರು. ಇತ್ತ ಇವರಿಬ್ಬರೂ ಕುಳಿತಿದ್ದನ್ನು ನೋಡಿ, ಮೂರನೇ ಸಾಲಿನ ಸೀಟ್‌ನಲ್ಲಿ ಗಂಗಾಂಬಿಕೆ ಹಾಗೂ ಮಲ್ಲಿಕಾರ್ಜುನ ಕುಳಿತರು!
ಸಿಎಂ ಜೊತೆ ದೋಸೆ ಸವಿಯಲು ವಿದ್ಯಾರ್ಥಿ ಭವನಕ್ಕೆ ತೆರಳಿದ ಭಾಸ್ಕರ್ ರಾವ್
ಕಾರ್ಯಕ್ರಮದ ನಂತರ ಗಾಂಧಿ ಬಜಾರ್‌ನ ʼವಿದ್ಯಾರ್ಥಿ ಭವನʼಕ್ಕೆ ತೆರಳಿದ ಸಿಎಂ ಬೊಮ್ಮಾಯಿ ಬಿಸಿ ಬಿಸಿ ಉಪ್ಪಿಟ್ಟು, ಮಸಾಲೆ ದೋಸೆ ಸವಿದರು. ಇದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸಹ ಸಿಎಂ ಜೊತೆ ದೋಸೆ ಸವಿದರು. ಭಾಸ್ಕರ ರಾವ್ ಇತ್ತೀಚೆಗೆ AAP ಪಾರ್ಟಿಗೆ ಸೇರ್ಪಡೆಯಾಗಿದ್ದರು. ಇವರೊಂದಿಗೆ ಕಾಂಗ್ರೆಸ್ ಪರಿಷತ್ ಸದಸ್ಯ ನಾಗರಾಜ್ ಯಾದವ್ ಸಾಥ್ ನೀಡಿದರು..
ಸಿಎಂ ಸ್ವಾಗತಕ್ಕೆ ಎಲ್ಲೆಲ್ಲೂ ರಾರಾಜಿಸಿದ ಫ್ಲೆಕ್ಸ್
ಭೈರಸಂದ್ರ ಕೆರೆ ಉದ್ಘಾಟ ಕಾರ್ಯಕ್ರಮದಲ್ಲಿ ಕೈ ನಾಯಕರು/ ಬಿಜೆಪಿ ನಾಯಕರ ಫ್ಲೆಕ್ಸ್ ಅಬ್ಬರ ಜೋರಾಗಿತ್ತು. ಸಿಎಂ ಕಾರ್ಯಕ್ರಮದಲ್ಲಿ ಸ್ವಾಗತ ಕೋರಲು ಒಂದು ಕಡೆ ಕಾಂಗ್ರೆಸ್, ಮತ್ತೊಂದು ಕಡೆ ಬಿಜೆಪಿಯಿಂದ ಫ್ಲೆಕ್ಸ್ ಫೈಟ್ ಇರುವುದು ಕಂಡು ಬಂತು. ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನರಿಂದ ಸ್ವಾಗತ ಕೋರುವ ಫ್ಲೆಕ್ಸ್ ಇದ್ದರೆ, ಇನ್ನೊಂದು ಕಡೆ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್‌ರಿಂದ ಸಿಎಂಗೆ ಸ್ವಾಗತ ಕೋರಿ ಫ್ಲೆಕ್ಸ್ ಹಾಕಲಾಗಿತ್ತು.
ಇದನ್ನೂ ಓದಿ | ಪ್ರವರ್ಗ 2ಎಗೆ ಪಂಚಮಸಾಲಿ ಸೇರ್ಪಡೆ; ಸಿಎಂ ಭೇಟಿಯಾದ ಶ್ರೀ ವಚನಾನಂದ ಸ್ವಾಮೀಜಿ