ಬೆಂಗಳೂರು: ಕಲುಷಿತ ನೀರು (polluted driniking water) ಹಾಗೂ ಆಹಾರದಿಂದ ಹರಡುವ ಕಾಲರಾ ಸಾಂಕ್ರಾಮಿಕ (Cholera Outbreak) ಈ ಬೇಸಿಗೆಯಲ್ಲಿ (Summer) ರಾಜ್ಯಾದ್ಯಂತ ವ್ಯಾಪಿಸುವ ಆತಂಕ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಈವರೆಗೆ 13 ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 8, ನಗರ ವ್ಯಾಪ್ತಿಯಲ್ಲಿ 5 ಕೇಸ್‌ಗಳು ಕಂಡುಬಂದಿವೆ. ರಾಮನಗರದಲ್ಲಿ ಒಂದು ಕಾಲರಾ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಈ ನಡುವೆ ಬಿಬಿಎಂಪಿ ವತಿಯಿಂದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಈ ಬಗ್ಗೆ ಕಟ್ಟುನಿಟ್ಟಾಗಿ ತಪಾಸಣೆ ಮಾಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ.
ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ (Water Scarcity) ಉಂಟಾಗಿರುವುದರಿಂದ, ಪೂರೈಕೆಯಾಗುತ್ತಿರುವ ನೀರಿನಲ್ಲಿ ಕಲುಷಿತ ಅಂಶಗಳು ಪತ್ತೆಯಾಗುತ್ತಿವೆ. ಬೀದಿ ಬದಿಯ ಆಹಾರದಲ್ಲಿಯೂ ಸೋಂಕುಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳು ಇರಬಹುದು. ಆದ್ದರಿಂದ ಆಹಾರದ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸಹ ಈಗಾಗಲೇ ಸೂಚಿಸಿದೆ. ಈಗ ಬಿಬಿಎಂಪಿ ಸಹ ಕೆಲವು ಸೂಚನೆಗಳನ್ನು ನೀಡಿದೆ.
ಬಿಬಿಎಂಪಿ ಮಾರ್ಗಸೂಚಿಯಲ್ಲೇನಿದೆ?
ಬೇಸಿಗೆ ಕಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಕಲುಷಿತ ನೀರು, ಕಲುಷಿತ ಆಹಾರದ ಸೇವನೆಯಿಂದ ಸಾಂಕ್ರಾಮಿಕ ರೋಗಗಳು ಸಂಭವಿಸುವ ಸಾಧ್ಯತೆಗಳಿವೆ. ಸಾಂಕ್ರಾಮಿಕ ರೋಗಗಳು ಸಂಭವಿಸದಂತೆ ಮತ್ತು ಉಲ್ಬಣಗೊಳ್ಳದಂತೆ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ಆರೋಗ್ಯಾಧಿಕಾರಿಗಳು/ಆರೋಗ್ಯ ವೈದ್ಯಾಧಿಕಾರಿಗಳು ಈ ಕೆಳಕಂಡಂತೆ ಕ್ರಮವಹಿಸಬೇಕಿದೆ ಎಂದು ಬಿಬಿಎಂಪಿ ಹೇಳಿದೆ.
- ಹಿರಿಯ ಆರೋಗ್ಯ ಪರೀವೀಕ್ಷಕರು ಸ್ಥಳೀಯ ಹೋಟೆಲ್ ಮತ್ತು ಅಂಗಡಿಗಳನ್ನು ತಪಾಸಣೆ ನಡೆಸಬೇಕು.
- ಆಹಾರ ಮತ್ತು ನೀರಿನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು.
- ಕುಡಿಯಲು ಬಿಸಿ ನೀರು ವ್ಯವಸ್ಥೆ ಮಾಡುವ ಜತೆಗೆ ಹೋಟೆಲ್ ಆವರಣದ ಸ್ವಚ್ಛತೆಯನ್ನು ನಿರ್ವಹಿಸಲು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
- ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಆರೋಗ್ಯ ಪರಿವೀಕ್ಷಕರು ಕ್ರಮವಹಿಸಬೇಕು.
- ರಸ್ತೆ ಬದಿಗಳಲ್ಲಿ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ಕ್ರಮವಹಿಸಬೇಕು.
- ಕುಡಿಯುವ ನೀರಿನ ಮೂಲಗಳಿಂದ ಕಾಲಕಾಲಕ್ಕೆ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು.
- ಕುಡಿಯಲು ಯೋಗ್ಯವಿರುವುದರ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಹಿರಿಯ ಆರೋಗ್ಯ ಪರಿವೀಕ್ಷಕರ ಮುಖಾಂತರ ಆರೋಗ್ಯ ವೈದ್ಯಾಧಿಕಾರಿಗಳು ಕ್ರಮವಹಿಸಬೇಕು.
- ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಸಾಂಕ್ರಾಮಿಕ ರೋಗಗಳ ವರದಿಯನ್ನು ಪ್ರತಿನಿತ್ಯ ಪಡೆಯಬೇಕು.
- ಸೂಕ್ತ ಚಿಕಿತ್ಸೆಗಾಗಿ ಅಗತ್ಯವಾದ ಔಷಧಿಗಳನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್, ಹೆರಿಗೆ ಆಸ್ಪತ್ರೆ, ರೆಫರಲ್ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ಕ್ರಮವಹಿಸಿ ಎಆರ್ಎಸ್ ಅಥವಾ ಪಾಲಿಕೆ ಅನುದಾನದಿಂದ ಖರೀದಿಸಬೇಕು ಎಂಬಿತ್ಯಾದಿ ಹಲವಾರು ಮುಂಜಾಗ್ರತಾ ಕ್ರಮವನ್ನು ಅನುಸರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕಾಲರಾ ಹೇಗೆ ಹರಡುತ್ತದೆ?
ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಮಾನವರಿಗೆ ಹರಡುತ್ತದೆ. ಕಾಲರಾ ಕರುಳಿನ ಸೋಂಕು ಆಗಿದ್ದು, ತೀವ್ರವಾದ ಅತಿಸಾರ ಭೇದಿ, ವಾಂತಿ ಇದರ ಪ್ರಮುಖ ಲಕ್ಷಣವಾಗಿದೆ. ಉಳಿದಂತೆ ಈ ರೋಗ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಇದನ್ನೂ ಓದಿ: Cholera disease: ವಿದ್ಯಾರ್ಥಿನಿಯರಲ್ಲಿ ಕಾಲರಾ ಪತ್ತೆ; ಬೆಂಗಳೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ವಾರ್ಡನ್ ಸಸ್ಪೆಂಡ್
ಮುನ್ನೆಚ್ಚರಿಕಾ ಕ್ರಮಗಳೇನು?
-ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು.
-ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು.
-ದೇಹವು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು.
-ವಾಂತಿ, ಭೇದಿಯಿಂದ ದೇಹದೊಳಗಿನ ನೀರಿನ ಅಂಶ ಹೊರಬರುತ್ತದೆ. ಹೀಗಾಗಿ ನೀರಿಗೆ ಎಲೆಕ್ಟ್ರೋಲೈಟ್ ಬೆರಸಿ ಕುಡಿಯಿರಿ.
-ವಾಂತಿ, ಭೇದಿ ಕಾಣಿಸಿಕೊಂಡ ಕೂಡಲೇ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ
-ಕಾಲರಾ ಬ್ಯಾಕ್ಟಿರಿಯಾ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.