Site icon Vistara News

ವಿದ್ಯಾರಣ್ಯಪುರ ಉದ್ಯಾನವನಕ್ಕೆ ದೀನದಯಾಳ್‌ ಉಪಾಧ್ಯಾಯ ಹೆಸರು: ಸಿಎಂ ಬೊಮ್ಮಾಯಿ ಭಾಗಿ

deendayal upadhyaya park

ಬೆಂಗಳೂರು: ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಪಾರ್ಕ್‌ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಉದ್ಘಾಟನೆ ಮಾಡಿದರು. ವಿದ್ಯಾರಣ್ಯಪುರದ ವಿರೂಪಾಕ್ಷಪುರದ ಉದ್ಯಾನಕ್ಕೆ ದೀನದಯಾಳ್‌ ಉಪಾಧ್ಯಾಯ ಪಾರ್ಕ್‌ ಎಂದು ನಾಮಕರಣ ಮಾಡಲಾಗಿದೆ.

ಭಾರತ್ ಮಾತಾಕಿ ಜೈ ಎಂದು ಭಾಷಣ ಶುರು ಮಾಡಿದ ಸಿಎಂ ಬೊಮ್ಮಾಯಿ‌, ಈ ದೇಶ ಕಂಡ ಅಪರೂಪದ ದೇಶಪ್ರೇಮಿ ದೀನದಯಾಳ್ ಉಪಾಧ್ಯಾಯರು. ಭಾರತಕ್ಕೆ ಬೇರೆಯದೇ ಕಲ್ಪನೆ ಕೊಟ್ಟ ಚಿಂತಕರು ದೀನದಯಾಳ್. ಪತ್ರಕರ್ತರಾಗಿಯೂ ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.

ದೇಶದಲ್ಲಿ ಕೆಲವರು ಪಾಶ್ಚಿಮಾತ್ಯ ಪ್ರಭಾವದಲ್ಲಿದ್ದರು, ಇನ್ನು ಕೆಲವರು ಕಮ್ಯುನಿಸ್ಟ್ ಪ್ರಭಾವದಲ್ಲಿದ್ದರು. ಈ ಸಮಯದಲ್ಲಿ ಭಾರತದ ನೆಲೆಗಟ್ಟನ್ನು ಪ್ರತಿಪಾದಿಸಿದ್ದು ದೀನದಯಾಳರು. ಏಕಾತ್ಮ ಮಾನವತಾವಾದ ಎಂಬ ಚಿಂತನೆ ನೀಡಿ, ಭಗವಂತನನ್ನು ಓಲೈಸಿ ಜಗತ್ತಿನಲ್ಲಿ ಸತ್ಯದ ಮಾರ್ಗದಲ್ಲಿ ನಡೆಯಬೇಕೆಂದು ದೀನದಯಾಳರು ಬೋಧಿಸಿದ್ದರು ಎಂದು ತಿಳಿಸಿದರು.

ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ದೀನದಯಾಳರು ಶ್ರಮಿಸಿದರು ಎಂದ ಸಿಎಂ ಬೊಮ್ಮಾಯಿ, ತಮ್ಮ ಹೆಸರಿಗೆ ತಕ್ಕಂತೆ ದೀನದಯಾಳರಾಗಿ ಬದುಕಿದರು. ಅವರ ಹೆಸರಿನಲ್ಲಿ ಪಾರ್ಕ್ ಆಗಿರುವುದು ಒಳ್ಳೆಯ ಕೆಲಸ. ಈ ದೇಶದ ಬಗ್ಗೆ ಅಪಾರ ಚಿಂತನೆ ಇದ್ದ ವ್ಯಕ್ತಿಯ ಹೆಸರಲ್ಲಿ ಪಾರ್ಕ್ ಆಗಿರುವುದು ಸ್ಫೂರ್ತಿದಾಯಕವಾದುದು. ದೀನದಯಾಳರ ಆದರ್ಶ ಜನರಿಗೆ ಮುಟ್ಟಲಿ ಎಂದು ಆಶಿಸಿದರು.

ಕಾರ್ಪೊರೇಷನ್‌ ಅನುಮತಿ ಪಡೆಯಿರಿ

ಪಾರ್ಕ್‌ಗೆ ನಾಮಕರಣ ಮಾಡುವ ಮುನ್ನ ಬಿಬಿಎಂಪಿ ಅನುಮತಿಯನ್ನು ಪಡೆಯಬೇಕಿತ್ತು ಎಂದು ತಿಳಿಸಿದ ಸಿಎಂ ಬೊಮ್ಮಾಯಿ, ಈ ಕುರಿತು ಸ್ಥಳೀಯ ಬಿಜೆಪಿ ನಾಯಕ ಚಕ್ರಪಾಣಿಯವರಿಗೆ ತಿಳಿಸಿದ್ದೇನೆ. ದೊಡ್ಡವರ ಹೆಸರಿನಲ್ಲಿ ಕಾರ್ಯಕ್ರಮ ಮಾಡಿದಾಗ ಯಾವುದೇ ಚ್ಯುತಿಯಾಗಬಾರದು. ಹಾಗಾಗಿ ಎಲ್ಲ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಕ್ರಪಾಣಿ ವಿರುದ್ಧ ಗರಂ

ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ಬಿಜೆಪಿ ಮುಖಂಡ ಚಕ್ರಪಾಣಿ ವಿರುದ್ಧ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ, ಲೋಕಸಭಾ ಸದಸ್ಯರಾದ ಡಿ.ವಿ. ಸದಾನಂದಗೌಡರು ಆಗಮಿಸಿರಲಿಲ್ಲ. ಇನ್ನೂ ಅನೇಕ ನಾಯಕರು ಆಗಮಿಸಿಲ್ಲ. ನೀವು ಸರಿಯಾಗಿ ಆಹ್ವಾನ ನೀಡಿಲ್ಲ ಎಂದು ಸಿಎಂ ಗರಂ ಆದರು. ಇದಕ್ಕೆ ಸಮಜಾಯಿಷಿ ನೀಡಲು ಚಕ್ರಪಾಣಿ ಮುಂದಾದರೂ, ಸಿಎಂ ಕೋಪ ತಣ್ಣಗಾದಂತೆ ಕಾಣಲಿಲ್ಲ.

ಇದನ್ನೂ ಓದಿ | ವ್ಯಕ್ತಿ ಮೇಲೆ ಹಲ್ಲೆ, ಬೆಂಗಳೂರಿನ ಬಿಜೆಪಿ ಮುಖಂಡನ ವಿರುದ್ಧ ಎಫ್​ಐಆರ್

Exit mobile version