ಬೆಂಗಳೂರು: ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಬೆಂಗಳೂರಿನ ಸುಜಾತಾ ಥೀಯೇಟರ್ ಬಳಿ ಮಹಿಳೆ ಮೃತಪಟ್ಟಿದ್ದರ ಕುರಿತು ತನಿಖೆ ನಡೆಸುವಂತೆ ಪೊಲೀಸರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಈ ಕುರಿತು ಗೃಹ ಕಚೇರಿ ಕೃಷ್ಣಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ ಎಂಬ ಸಂಗತಿ ಗಮನಕ್ಕೆ ಬಂದಿದೆ ಎಂದರು.
ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅದಕ್ಕಿಂತಲೂ ಹೆಚ್ಚಾಗಿ, ಮಹಿಳೆ ನಿಧನವಾಗಲು ನಿಜವಾದ ಕಾರಣ ಏನು ಎಂದು ತನಿಖೆ ನಡೆಸಬೇಕಿದೆ.
ಮಹಿಳೆಯ ಸಂಬಂಧಿಕರು ನೀಡಿದ ದೂರಿನ ಆಧಾರದಲ್ಲಿ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ. ವರದಿಯ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ರಸ್ತೆ ಗುಂಡಿಯಿಂದಾಗಿಯೇ ಸಾವು ಸಂಭವಿಸಿದೆ ಎಂಬುದು ವರದಿಯಲ್ಲಿ ಬಹಿರಂಗವಾದರೆ ತಮ್ಮ ಮೇಲೆ ಆರೋಪ ಬರುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳಲ್ಲಿ ಆತಂಕ ಎದುರಾಗಿದೆ.
ಇದನ್ನೂ ಓದಿ | ರಸ್ತೆ ಗುಂಡಿಗೆ ಮಹಿಳೆ ಸಾವು | ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಕೇಸ್
ಒಕ್ಕಲಿಗ ಸಮುದಾಯಕ್ಕೆ 12% ಮೀಸಲಾತಿ ನೀಡಲು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಾಂದನಾಥ ಸ್ವಾಮೀಜಿ ಆಗ್ರಹದ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಎಲ್ಲ ಸಮುದಾಯಗಳಿಗೂ ಮೀಸಲಾತಿ ಕುರಿತು ನಿರೀಕ್ಷೆಗಳಿವೆ. ಅದರಲ್ಲಿ ತಪ್ಪೇನೂ ಇಲ್ಲ.
ಮೀಸಲಾತಿ ನೀಡುವಾಗ ಕಾನೂನು ಚೌಕಟ್ಟು, ನ್ಯಾಯಾಲಯದ ಆದೇಶಗಳು ಹಾಗೂ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಅದೆಲ್ಲದರ ಆಧಾರದಲ್ಲಿ ಮೀಸಲಾತಿ ನೀಡಬೇಕಾಗುತ್ತದೆ ಎಂದರು.
ಸಚಿವ ಸ್ಥಾನ ನೀಡದಿದ್ದರೆ ಪಕ್ಷ ತ್ಯಜಿಸುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂಬ ಕುರಿತು ಮಾತನಾಡಿದ ಬೊಮ್ಮಾಯಿ, ಪಾಪ ಅವರು ತಮ್ಮ ಕ್ಷೇತ್ರದ ಕೆಲಸಗಳ ಕುರಿತು ಚರ್ಚೆಗೆ ಬಂದಿದ್ದರು. ಪಿಡಬ್ಲ್ಯುಡಿ, ಆರ್‌ಡಿಪಿಆರ್ ಇಲಾಖೆಗಳ ಕಾಮಗಾರಿಗಳ ಕುರಿತು ಮನವಿ ಕೊಟ್ಟಿದ್ದಾರೆ ಎಂದರು.
ಪ್ರತಿಕ್ರಿಯೆಗೆ ನಿರಾಕರಿಸಿದ ಪೈ
ರಸ್ತೆ ಗುಂಡಿಗೆ ಮಹಿಳೆ ಮೃತಪಟ್ಟಿರುವ ಕುರಿತು ಪ್ರತಿಕ್ರಿಯೆ ನೀಡಲು ಉದ್ಯಮಿ ಮೋಹನದಾಸ್ ಪೈ ನಿರಾಕರಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರು ಈ ಕುರಿತು ಪ್ರಶ್ನೆ ಕೇಳಿದರು. ನಾವು ಸಿಎಂ ಜತೆಗೆ ಬೆಂಗಳೂರು ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇವೆ. ಅದೆಲ್ಲ ಈಗ ಮಾತನಾಡುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | State politics | ವಾರಾಂತ್ಯದಲ್ಲಿ ಸಿಎಂ ಬೊಮ್ಮಾಯಿ ದಿಲ್ಲಿಗೆ: ಚುನಾವಣೆ ಬಗ್ಗೆ ಚರ್ಚೆ, ಸಂಪುಟ ವಿಸ್ತರಣೆಯೂ ಫಿಕ್ಸ್