Site icon Vistara News

ಹೆಸರಘಟ್ಟ ಹುಲ್ಲುಗಾವಲು | ಸದ್ಯಕ್ಕಿಲ್ಲ ʼಸಂರಕ್ಷಿತ ಪ್ರದೇಶʼ ಘೋಷಣೆ: ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ

basavaraja bommai

ಬೆಂಗಳೂರಿನ ಸುತ್ತಮುತ್ತ ಉಳಿದಿರುವ ಏಕೈಕ ಹುಲ್ಲುಗಾವಲನ್ನು ಸಂರಕ್ಷಣೆ ಮಾಡುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ರಾಜ್ಯ ವನ್ಯಜೀವಿ ಮಂಡಳಿಯ 16ನೇ ಸಭೆಯಲ್ಲಿ ಚರ್ಚೆ ನಡೆದಿದೆ. ಮಂಡಳಿಯಿಂದ ತೀರ್ಮಾನ ಕೈಗೊಳ್ಳುವುದಕ್ಕೂ ಮುನ್ನ ಸಾರ್ವಜನಿಕ ಸಮಾಲೋಚನೆ (Public Consultation) ನಡೆಸಬೇಕು ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪರಿಸರವಾದಿಗಳು ಹಾಗೂ ಸ್ಥಳೀಯ ಶಾಸಕರ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟದ ನಡುವೆ ಸರ್ಕಾರ ಸಾರ್ವಜನಿಕ ಸಮಾಲೋಚನೆಗೆ ಮುಂದಾಗಿದೆ. ಈ ನಿರ್ಧಾರವು ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರುವುದರಿಂದ ಮುಂದೆ ಯಾವ ತಿರುವು ಪಡೆಯುತ್ತದೆ ಎಂಬ ಚರ್ಚೆ ಬಲವಾಗಿದೆ.

ಸುಮಾರು ಐದು ಸಾವಿರ ಎಕರೆಯಷ್ಟಿರುವ ಹುಲ್ಲುಗಾವಲಿನಲ್ಲಿ ಅನೇಕ ಅಪರೂಪದ ವನ್ಯಜೀವಿ, ಪಕ್ಷಿ ಸಂಕುಲಗಳನ್ನು ಉಳಿಸುವ ಕುರಿತು ಬಿಜೆಪಿಯ ಶಾಸಕ, ಸಂಸದ, ಮಾಜಿ ಕಾರ್ಪೊರೇಟರ್‌ಗಳ ನಡುವೇ ಭಿನ್ನಾಭಿಪ್ರಾಯವಿದೆ. 2021ರ ಸೆ.5ರಂದು ಈ ಸಭೆ ನಡೆಯಲು ನಿಗದಿಯಾಗಿತ್ತಾದರೂ ಅಂದು ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ಹಾನಿಗೀಡಾದ ಪ್ರದೇಶಗಳ ವೀಕ್ಷಣೆಗೆ ಸಿಎಂ ಬಸವರಾಜ ಬೊಮ್ಮಾಯಿ ತೆರಳಿದ್ದರಿಂದ ಮುಂದೂಡಲ್ಪಟ್ಟಿತ್ತು.

ಹೆಸರಘಟ್ಟ ಹುಲ್ಲುಗಾವಲನ್ನು ಉಳಿಸಬೇಕು, ಅದನ್ನು ಅಭಿವೃದ್ಧಿಯ ಹೆಸರಿನಲ್ಲಿ ಸಾಮಾನ್ಯ ಪ್ರದೇಶವಾಗಿ ಪರಿಗಣಿಸಿದರೆ ವನ್ಯಜೀವಿನಗಳ ಆವಾಸಸ್ಥಾನಕ್ಕೆ ಧಕ್ಕೆ ಉಂಟುಮಾಡಿದಂತೆ ಆಗುತ್ತದೆ. ದೂರಗಾಮಿಯಾಗಿ ಬೆಂಗಳೂರಿನ ಜನಜೀವನದ ಮೇಲೆಯೂ ಪರಿಣಾಮ ಬೀರುತ್ತದೆ ಎನ್ನುವುದು ಪರಿಸರವಾದಿಗಳ ವಾದ. ಈ ಪ್ರದೇಶವನ್ನು `ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ 2021ರ ಜನವರಿ 1ರಂದು ನಡೆದ 15 ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ, ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡುವ ನಿರ್ಧಾರವನ್ನು ಕೈಬಿಡಲಾಗಿತ್ತು. ಇದು ಪರಿಸರವಾದಿಗಳ ವಿರೋಧಕ್ಕೆ ಕಾರಣವಾಗಿತ್ತು.

ಸ್ಥಳೀಯರಿಗೆ ತೊಂದರೆಯಿಲ್ಲ ಎಂದ ಸದಸ್ಯ

ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವುದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತದೆ ಎಂಬ ವಾದವನ್ನು ಮಂಡಳಿ ಸದಸ್ಯರಲ್ಲೊಬ್ಬರಾದ ಸಿದ್ಧಾರ್ಥ ಗೋಯೆಂಕಾ ತಳ್ಳಿಹಾಕಿದ್ದಾರೆ. ಈ ಕುರಿತು ಸಭೆಯಲ್ಲಿ ಸಿದ್ಧಾರ್ಥ ಗೋಯೆಂಕಾ ಮಂಡಿಸಿರುವ ಪ್ರಸ್ತಾವನೆಯ ಪ್ರತಿ ʼವಿಸ್ತಾರ ನ್ಯೂಸ್‌ʼಗೆ ಲಭ್ಯವಾಗಿದೆ.

ರಾಷ್ಟ್ರೀಯ ಅರಣ್ಯ ಎಂದು ಘೋಷಣೆ ಮಾಡಿದಾಗ ಸ್ಥಳೀಯರ ಭೂಮಿಯ ಹಕ್ಕಿಗೆ ತೊಂದರೆ ಆಗುತ್ತದೆಯೇ ವಿನಃ ಸಂರಕ್ಷಿತ ಪ್ರದೇಶ ಎಂದು ಘೊಷಿಸುವುದರಿಂದ ಯಾವ ತೊಂದರೆಯೂ ಆಗುವುದಿಲ್ಲ. ಅದೇ ರೀತಿ, ಸ್ಥಳೀಯರನ್ನು ಒಕ್ಕಲೆಬ್ಬಿಸಬೇಕು ಎನ್ನುವ ವಾದವೂ ಸುಳ್ಳು. ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದ ನಂತರ ಸ್ಥಳೀಯರನ್ನೂ ಒಳಗೊಂಡ ನಿರ್ವಹಣಾ ಸಮಿತಿ ರಚನೆ ಮಾಡಲಾಗುತ್ತದೆ, ಅದರ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.

ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವುದರಿಂದ ಸುತ್ತಮುತ್ತ ಯಾವುದೇ ಬಫರ್‌ ಜೋನ್‌, ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗುವುದಿಲ್ಲ. ಒಮ್ಮೆ ಘೋಷಣೆಯಾದ ನಂತರ, ಅಲ್ಲಿಯವರೆಗೆ ಪ್ರದೇಶದಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡಲಷ್ಟೆ ಆದೇಶ ಸೀಮಿತವಾಗಿರುತ್ತದೆ. ಹೊಸ ವನ್ಯ ಜೀವಿಗಳನ್ನು ಸೇರ್ಪಡೆ ಮಾಡಲಾಗುವುದಿಲ್ಲ. ಸ್ಥಳೀಯ ಸಮುದಾಯಗಳು ಈಗಾಗಲೆ ಹೊಂದಿರುವ ರಸ್ತೆ ಮಾರ್ಗ, ಜೀವನೋಪಾಯಗಳನ್ನು ಕಳೆದುಕೊಳ್ಳುವುದಿಲ್ಲ. ಪೂರ್ಣ ಐದು ಸಾವಿರ ಎಕರೆ ಪ್ರದೇಶವನ್ನು ಅಲ್ಲದಿದ್ದರೂ, 350 ಎಕರೆ ಹುಲ್ಲುಗಾವಲು, 1000 ಎಕರೆ ಕುರುಚಲು ಕಾಡು ಹಾಗೂ 1500 ಎಕರೆಯಷ್ಟು ಹೆಸರಘಟ್ಟ ಕೆರೆ ಪ್ರದೇಶ ಸೇರಿ 2,800 ಎಕರೆ ಪ್ರದೇಶವನ್ನಾದರೂ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಸಿದ್ಧಾರ್ಥ ಗೋಯೆಂಕಾ ಮನವಿ ಮಾಡಿದ್ದಾರೆ.

ಸಾರ್ವಜನಿಕ ಸಮಾಲೋಚನೆ ನಡೆಸುವ, ಮಂಡಳಿಯ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಲು ಸಿದ್ಧಾರ್ಥ ಗೋಯೆಂಕಾ ನಿರಾಕರಿಸಿದ್ದಾರೆ. ಸಮಾಲೋಚನಾ ಕಾರ್ಯಕ್ಕೆ ಅನುಸರಿಸುವ ಮಾನದಂಡ, ಪ್ರಕ್ರಿಯೆಯನ್ನು ಸರ್ಕಾರ ಇನ್ನಷ್ಟೇ ತಿಳಿಸಬೇಕಿದೆ ಎಂದು ಹೇಳಿದ್ದಾರೆ.

ಮಂಡಳಿ ನಿರ್ಧಾರವನ್ನು ರದ್ದುಪಡಿಸಿದ್ದ ಕೋರ್ಟ್‌

ಈಗಾಗಲೇ ಹುಲ್ಲುಗಾವಲು ಪ್ರದೇಶ ಒತ್ತುವರಿಯಾಗಿ ಸದ್ಯ 5,010 ಎಕರೆ ಮಾತ್ರ ಉಳಿದಿದೆ. ಅಪರೂಪದ ಪ್ರಾಣಿ, ಪಕ್ಷಿಗಳು ನೆಲೆಸಿರುವ ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಪಶುಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಹುಲ್ಲುಗಾವಲು ಪ್ರದೇಶವನ್ನು ಸಂರಕ್ಷಣಾ ಪ್ರದೇಶವಾಗಿ ಘೋಷಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ನಲ್ಲಿ ಕೋರಲಾಗಿತ್ತು. ವಾದವನ್ನು ಆಳಿಸಿದ್ದ ಅಂದಿನ ಮುಖ್ಯನ್ಯಾಯಮೂರ್ತಿ ಎ.ಎಸ್. ಓಕ್‌ ನೇತೃತ್ವದ ವಿಭಾಗೀಯ ಪೀಠ, ಹುಲ್ಲುಗಾವಲು ಪ್ರದೇಶವು ಅಪರೂಪದ 40 ಬಗೆಯ ವನ್ಯಜೀವಿ ಹಾಗೂ 133 ಬಗೆಯ ಪಕ್ಷಿ ಸಂಕುಲಗಳ ಆವಾಸ ಸ್ಥಾನವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮಧ್ಯಂತರ ಆದೇಶ ನೀಡಿತ್ತು. ಮತ್ತೊಮ್ಮೆ ಮಂಡಳಿಯು ಸೂಕ್ತ ಪ್ರಕ್ರಿಯೆಯ ಮೂಲಕ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿತ್ತು.

ಎಸ್‌.ಆರ್‌. ವಿಶ್ವನಾಥ್‌ ವಿರೋಧ

ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶ ಎಂದು ಪರಿಗಣಿಸುವುದಕ್ಕೆ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಈ ಹಿಂದಿನಿಂದಲೂ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದರೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನನುಕೂಲವಾಗುತ್ತದೆ ಎಂದು ವಾದಿಸಿದ್ದರು. ಆದರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಮಾಜಿ ಕಾರ್ಪೊರೇಟರ್‌ ಜಿ. ಮಂಜುನಾಥ ರಾಜು ಅವರುಗಳು ಹೆಸರಘಟ್ಟ ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಬೆಂಬಲ ನೀಡಿದ್ದರು.

ಕ್ರಿಕೆಟಿಗ ಅನಿಲ್‌ ಕುಂಬ್ಳೆ ಸಹ, ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವುದರ ಪರವಾಗಿದ್ದು, ಆನ್‌ಲೈನ್‌ನಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನಕ್ಕೆ ಸುಮಾರು 75 ಸಾವಿರ ಜನರು ಬೆಂಬಲ ನೀಡಿದ್ದಾರೆ.

ಇದನ್ನೂ ಓದಿ | ಹೆಸರಘಟ್ಟ ಹುಲ್ಲುಗಾವಲು | ಸ್ವಪಕ್ಷದಲ್ಲೇ ಭಿನ್ನಮತ: ಇಂದು ಸಂಜೆ ಸಿಎಂ ಅಧ್ಯಕ್ಷತೆಯ ಮಹತ್ವದ ಸಭೆ

ಬನ್ನೇರುಘಟ್ಟದಲ್ಲಿ ಎಲಿವೇಟೆಡ್ ಫ್ಲೈ ಓವರ್ ನಿರ್ಮಾಣಕ್ಕೆ ವಿರೋಧ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಎಲಿವೆಡೆಡ್ ಫ್ಲೈ ಓವರ್ ನಿರ್ಮಾಣ ಪ್ರಸ್ತಾಪಕ್ಕೆ ಸಿಎಂ ಬೊಮ್ಮಾಯಿ ಅಸಮ್ಮತಿ ಸೂಚಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು ರಿಂಗ್ ರೋಡ್ ರಸ್ತೆ ಮಾಡುತ್ತಿದೆ. ಆ ರಿಂಗ್ ರೋಡ್ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವಂತೆ ರೂಪಿಸಲಾಗಿದೆ. ಇದಕ್ಕಾಗಿ ಅರಣ್ಯ ಪ್ರದೇಶದಲ್ಲಿ ಎಲಿವೇಟೆಡ್ ಫ್ಲೈ ಓವರ್ ನಿರ್ಮಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ‌.‌
ಬನ್ನೇರುಘಟ್ಟದಲ್ಲಿ ಈಗ ಎಲೆವೆಟೆಡ್ ಫ್ಲೈ ಓವರ್ ನಿರ್ಮಾಣಕ್ಕೆ ಅವಕಾಶ ಕೊಟ್ಟರೆ ಮುಂದೆ ಬಂಡೀಪುರ, ನಾಗರಹೊಳೆಯಲ್ಲೂ ಕೇಳುವ ಸಾಧ್ಯತೆ ಇದೆ. ಇದಕ್ಕೆ ಅನುಮತಿ ನೀಡಬಾರದು ಎಂದು ವನ್ಯಜೀವಿ ಮಂಡಳಿ ಸದಸ್ಯರು ಸಭೆಯಲ್ಲಿ ಸಿಎಂ ಎದುರು ವಾದ ಮಂಡಿಸಿದರು. ವನ್ಯಜೀವಿ ಮಂಡಳಿ ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಸಿಎಂ, ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ಮಾಡಿ. ಅರಣ್ಯ ಪ್ರದೇಶದಲ್ಲಿ ಎಲಿವೇಟೆಡ್ ಫ್ಲೈ ಓವರ್ ನಿರ್ಮಿಸುವುದು ಬೇಡ ಎಂದು ತಿಳಿಸಿದ್ದಾರೆ.

Exit mobile version