Site icon Vistara News

CM Siddaramaiah : ಇಂದಿರಾ ಕ್ಯಾಂಟೀನ್, ಶಾಲಾ ಊಟದಲ್ಲಿ ಸಿರಿಧಾನ್ಯ ಬಳಕೆ: ಸಿಎಂ ಘೋಷಣೆ

Millets Mela Siddaramaiah

ಬೆಂಗಳೂರು: ಇಂದಿರಾ ಕ್ಯಾಂಟೀನ್ (Indira Canteen) ಮತ್ತು ಮಧ್ಯಾಹ್ನದ ಶಾಲಾ ಊಟದಲ್ಲಿ (Midday Meal) ಸಿರಿಧಾನ್ಯ ಬಳಕೆ (Usage of Millets) ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಘೋಷಿಸಿದ್ದಾರೆ. ಕೃಷಿ ಇಲಾಖೆ (Agriculture Department) ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2024 ಮತ್ತು ಸಿರಿಧಾನ್ಯ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ರಾಜ್ಯದ ಜನರು ಮತ್ತು ಶಾಲಾ ಮಕ್ಕಳು ಇನ್ನಷ್ಟು ಸದೃಡವಾಗಿ, ಆರೋಗ್ಯವಂತರಾಗಲು ಇಂದಿರಾ ಕ್ಯಾಂಟೀನ್ ಮತ್ತು ಶಾಲಾ ಊಟದಲ್ಲಿ ಸಿರಿ ಧಾನ್ಯ ಬಳಸುವ ಸಂಬಂಧ ಸದ್ಯದಲ್ಲೇ ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.

Millets Mela Siddaramaiah Shobha Karandlaje inauguration

ಹಾಗೆಯೇ ಉತ್ತಮ ಗುಣಮಟ್ಟದ ಸಿರಿಧಾನ್ಯ ಬೀಜ ಉತ್ಪಾದನೆ, ಹೊಸ ತಳಿ ಅಭಿವೃದ್ಧಿ ಹಾಗೂ ಸಿರಿಧಾನ್ಯ ರಫ್ತಿಗೆ ಅನುಕೂಲ ಆಗುವಂತೆ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹದಾಯಕವಾಗಿ ಅಗತ್ಯ ಕೇಂದ್ರವನ್ನು ರಾಜ್ಯ ಸರ್ಕಾರ ಸ್ಥಾಪಿಸಲಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಎಲ್ಲಿ ಮಳೆ ಕಡಿಮೆ ಬೀಳುತ್ತದೆಯೋ, ಭೂಮಿಯ ಫಲವತ್ತತೆ ಕಡಿಮೆ ಇರುವ ಪ್ರದೇಶಗಳಲ್ಲೂ ಬೆಳೆಯಬಹುದಾದ ಸಿರಿಧಾನ್ಯ ಉತ್ತಮ ಆರೋಗ್ಯಕ್ಕೆ ಬಹಳ ಸಹಕಾರಿ. ಇದಕ್ಕಾಗಿ ರಾಜ್ಯ ಸರ್ಕಾರ ನಿರಂತರವಾಗಿ ಸಿರಿಧಾನ್ಯ ಮೇಳವನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದರು ಸಿದ್ದರಾಮಯ್ಯ.

ಸಾರಜನಕ, ಲವಣ, ವಿಟಮಿನ್ ಮತ್ತು ನಾರಿನ ಅಂಶಗಳು ಸಿರಿಧಾನ್ಯಗಳಲ್ಲಿ ಹೆಚ್ಚಾಗಿವೆ. ಇವತ್ತಿನ ಹಲವು ಕಾಯಿಲೆಗಳಿಗೆ ರಸಾಯನಿಕ ಮಿಶ್ರಿತ ಆಹಾರ ಪದಾರ್ಥ ಸೇವನೆ ಕೂಡ ಒಂದು ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ಇದಕ್ಕೆ ಸಾವಯವ ಸಿರಿಧಾನ್ಯ ಸೇವನೆ ಉತ್ತಮ ಪರಿಹಾರ ಆಗುತ್ತಿದೆ ಎಂದರು.

Millets Mela Siddaramaiah Shobha Karandlaje inauguration

ಇದನ್ನೂ ಓದಿ : Millets and Organics Fair: ದೇಶದಲ್ಲಿ ಕರ್ನಾಟಕ ಅತಿಹೆಚ್ಚು ಸಿರಿಧಾನ್ಯ ಬೆಳೆಯುವ ರಾಜ್ಯವಾಗಬೇಕು: ಸಿಎಂ

2004ರಲ್ಲಿ ಸಾವಯವ ಕೃಷಿ ನೀತಿ, 2014 ರಲ್ಲಿ ಪರಿಷ್ಕೃತ ಸಾವಯವ ಕೃಷಿ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಆ ಮೂಲಕ ಸವಯವ ಮತ್ತು ಸಿರಿಧಾನ್ಯ ಬೆಳೆ ಬೆಳೆಯಲು ನಮ್ಮ ಸರ್ಕಾರ ನಿರಂತರವಾಗಿ ಉತ್ತೇಜನ ನೀಡುತ್ತಿದೆ. ಇದರಿಂದ ಜನರ ಆರೋಗ್ಯಕ್ಕೂ ಬಹಳ ಸಹಕಾರಿಯಾಗುತ್ತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಇತ್ತೀಚಿನ ವರ್ಷಗಳಲ್ಲಿ ಸಾವಯವ ಮತ್ತು ಸಿರಿಧಾನ್ಯ ಹೆಚ್ಚು ಜನಪ್ರಿಯ ಆಗುತ್ತಿದೆ. ಭಾರತ ಕೃಷಿ ಪ್ರಧಾನ ದೇಶವಾದ್ದರಿಂದ ಆಹಾರ ಸ್ವಾವಲಂಭನೆ ಸಾಧಿಸಲು ಇಂದಿರಾಗಾಂಧಿ ಅವರ ಅವಧಿಯಲ್ಲಿ ಹಸಿರು ಕ್ರಾಂತಿ ನಡೆಸಲಾಯಿತು. ಪ್ರತಿಯೊಬ್ಬರಿಗೂ ಆಹಾರ ಒದಗಿಸಲು ಹಸಿರು ಕ್ರಾಂತಿ ನೆರವಾಯಿತು ಎಂದರು.

Millets Mela Siddaramaiah Shobha Karandlaje inauguration

ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲ್, ಉತ್ತರ ಪ್ರದೇಶ ಸರ್ಕಾರದ ಕೃಷಿ ಸಚಿವರಾದ ಸೂರ್ಯ ಪ್ರತಾಪ್ ಸಾಹಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರುಗಳಾದ ವಿನಯ್ ಕುಲಕರ್ಣಿ, ಸುಧಾಮ ದಾಸ್, ರಾಜೂಗೌಡ, ವಿನಯ್ ಕುಲಕರ್ಣಿ, ದಿನೇಶ್ ಗೂಳಿಗೌಡ, ಕೋನರೆಡ್ಡಿ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version