ಬೆಂಗಳೂರು: ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಕಂಪನಿ ಮಾಲೀಕರೊಬ್ಬರಿಗೆ, ಮೈಸೂರು ರಾಜವಂಶಸ್ಥ ತಾನು ಎಂದು ಕೋಟಿಗಟ್ಟಲೆ ರೂ. ಹಣಕಾಸು ವಂಚಿಸಿದ ಹಾಗೂ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಆರೋಪಿಗಳನ್ನು ಬಂಧಿಸಲಾಗಿದೆ.
ಹೈದರಾಬಾದ್‌ನ ನಾಗ ರಮಣೇಶ್ವರ ಎಂಬ ಸಾಫ್ಟ್‌ವೇರ್ ಕಂಪನಿ ಮಾಲೀಕ ವಂಚನೆಗೆ ಹಾಗೂ ಹಲ್ಲೆಗೀಡಾಗಿದ್ದಾರೆ. ಸಾಫ್ಟ್‌ವೇರ್ ಕಂಪನಿ ಡೆವಲಪ್ ಮಾಡಲು ನಾಗ ರಮಣೇಶ್ವರ್ ಸಾಲದ ಮೊರೆ ಹೋಗಿದ್ದರು. ಅವರನ್ನು ಈ ವಿಚಾರಕ್ಕೆ ಸಂಪರ್ಕಿಸಿದ್ದ ಕುಮಾರ್ ಎಂಬ ಮಧ್ಯವರ್ತಿ ಮನೋಜ್ ಎಂಬಾತನನ್ನು ಪರಿಚಯಿಸಿದ್ದ. ತಾನು ʻಮನೋಜ್ ಅರಸುʼ ಎಂದು, ಮೈಸೂರು ರಾಜವಂಶಸ್ಥನೆಂದು ಪರಿಚಯಿಸಿಕೊಂಡಿದ್ದ. ಅನುಮಾನ ಬರದಂತೆ ರಾಜನ ವೇಷಭೂಷಣದಲ್ಲಿ, ಮೈ ತುಂಬ ಬಂಗಾರ, ರೇಷ್ಮೆ ಬಟ್ಟೆ ಧರಿಸಿ ಕೈಯಲ್ಲಿ ಕೋಲು ಹಿಡಿದು ಬಿಲ್ಡಪ್ ಕೊಟ್ಟೇ ಭೇಟಿಯಾಗಿದ್ದ!
ಮನೋಜ್‌ನಿಂದ ಲೋನ್ ಕೊಡಿಸುತ್ತೇವೆಂದು, ಅದಕ್ಕೆ ಮೊತ್ತದ ಹತ್ತು ಪರ್ಸೆಂಟ್ ಕಮೀಷನ್ ನೀಡಬೇಕು ಎಂದು ಸಾಲ ನೀಡುವ ಮೊದಲೇ ಆರೋಪಿಗಳು ಹಣ ಪಡೆದಿದ್ದರು. 20 ಕೋಟಿಗೆ ಎರಡು ಕೋಟಿಯಂತೆ ಕಮೀಷನ್ ಪಡೆದಿದ್ದರು. ಕೊನೆಗೆ ಲೋನ್ ಕೊಡಿಸದ ಹಿನ್ನೆಲೆಯಲ್ಲಿ ಹಣ ವಾಪಸ್ ನೀಡುವಂತೆ ನಾಗ ರಮಣೇಶ್ವರ್ ಒತ್ತಡ ಹಾಕಿದಾಗ, ಇವತ್ತು ಕೊಡುತ್ತೇವೆ ನಾಳೆ ಕೊಡುತ್ತೇವೆ ಎಂದು ಹೈದರಾಬಾದ್- ಬೆಂಗಳೂರು ರೌಂಡ್ ಹೊಡೆಸಿದ್ದರು. 10ಕ್ಕು ಹೆಚ್ಚು ಬಾರಿ ವಿಮಾನದಲ್ಲಿ ಬೆಂಗಳೂರಿಗೆ ಅಲೆದಾಡಿ ನಾಗ ರಮಣೇಶ್ವರ್ ಸುಸ್ತಾಗಿದ್ದರು.
ಇದನ್ನೂ ಓದಿ | Murder case | ಕಾಲಿಗೆ ಹಗ್ಗ ಕಟ್ಟಿ ಕೆರೆಗೆ ಎಸೆದು ಯುವಕನ ಕೊಲೆ: ಮಾನವ ಹಕ್ಕು ಹೋರಾಟಗಾರನಾ?
ಕೊನೆಗೆ ಹಣ ವಾಪಸ್ಸು ನೀಡದ ಹಿನ್ನೆಲೆಯಲ್ಲಿ ಹೈದರಾಬಾದಿನಲ್ಲಿ ದೂರು ನೀಡುವುದಾಗಿ ರಮಣೇಶ್ವರ ಎಚ್ಚರಿಕೆ ನೀಡಿದಾಗ, ಹಣ ಕೊಡುತ್ತೇವೆಂದು ಆರೋಪಿಗಳು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಫೋರಂ ಸೆಂಟರ್ ಹೋಟೆಲ್‌ನಲ್ಲಿ ತಂಗಿದ್ದ ರಮಣೇಶ್ವರ್‌ರನ್ನು ಬೂದಿಗೆರೆಗೆ ಬರಲು ಸೂಚಿಸಿ, ಮಾರ್ಗಮಧ್ಯೆ ಗೊಲ್ಲಹಳ್ಳಿ ಎಂಬಲ್ಲಿ ಕಾರು ತಡೆದು ರಮಣೇಶ್ವರ್ ಮೇಲೆ ಹಲ್ಲೆ ನಡೆಸಿದ್ದರು. ಕಾರಿನಿಂದ ಎಳೆದುಹಾಕಿ ಕಬ್ಬಿಣದ ರಾಡ್‌ಗಳಿಂದ ಮನಸೋ ಇಚ್ಛೆ ಬಡಿದಿದ್ದರು. ಎರಡೂ ಕಾಲುಗಳನ್ನು ಫುಟ್‌ಪಾತ್ ಸ್ಲಾಬ್ ಮೇಲೆ ಇಟ್ಟು ಕಾಲಿನ ಮೂಳೆ ಪುಡಿಯಾಗುವಂತೆ ಹಲ್ಲೆ ಮಾಡಿದ್ದರಿಂದ, ರಮಣೇಶ್ವರರ ಎರಡೂ ಕಾಲು ಮುರಿದಿತ್ತು. ಅದನ್ನು ಖಚಿತಪಡಿಸಿಕೊಂಡು, ಇನ್ನೊಮ್ಮೆ ಹಣ ಕೇಳಿದರೆ ಜೀವ ಉಳಿಯುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ದಲ್ಲಾಳಿ ಕುಮಾರ್, ರಾಜವಂಶಸ್ಥನೆಂದು ಹೇಳಿಕೊಂಡಿದ್ದ ಮನೋಜ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ದಲ್ಲಾಳಿ ಕುಮಾರ್ ಹೈದರಾಬಾದಿನಲ್ಲೇ ತಲೆಮರೆಸಿಕೊಂಡಿದ್ದ. ಸದ್ಯ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಇದನ್ನೂ ಓದಿ | Moral policing | ಬಸ್ಸಿನಲ್ಲಿ ಮೈ ತಾಗಿದ ವಿಚಾರದಲ್ಲಿ ತಗಾದೆ: ಮುಸ್ಲಿಂ ಕೂಲಿ ಕಾರ್ಮಿಕನ ಮೇಲೆ ಯದ್ವಾತದ್ವಾ ಹಲ್ಲೆ