ಬೆಂಗಳೂರು: ಒಂಟಿ ಮನೆಗೆ ದರೋಡೆ ಮಾಡಲು ನುಗ್ಗಿದವರು ಸಿನಿಮೀಯ ರೀತಿಯಲ್ಲಿ ಸೆರೆಯಾದ ರೋಚಕ ಕಥೆಯಿದು. ಸ್ವಲ್ಪ ಯಾಮಾರಿದರೂ ಆ ಬಂಗಲೆಯಲ್ಲಿ ರಕ್ತದೋಕುಳಿಯೇ ಹರಿಸ್ತಿದ್ದ ದರೋಡೆಕೋರರು ಸಿಸಿಟಿವಿ ಹಾಗೂ ಯುವಕನ ಸಮಯಪ್ರಜ್ಞೆಯಿಂದ ಅಂದರ್ ಆಗಿದ್ದಾರೆ.
ಇದು ಆವಲಹಳ್ಳಿಯ ವಿಶ್ರಾಂತಿ ಲೇಔಟ್‌ನಲ್ಲಿ ನಡೆದ ಘಟನೆ. ಸಾಬ್ ಇಂಜಿನಿಯರ್ ಕಂಪನಿ ಮಾಲೀಕ ಅಜಯ್ ಬಾಲಗೋಪಾಲ್ ಅವರ ಒಂಟಿ ಮನೆಯನ್ನೇ ಟಾರ್ಗೆಟ್ ಮಾಡಿದ್ದ ದರೋಡೆಕೋರರು ರಾತ್ರಿ ಸುತ್ತಿಗೆ, ಕಬ್ಬಿಣದ ರಾಡ್ ಮುಂತಾದ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿದ್ದರು. ಮನೆಯಲ್ಲಿ ಮನೆ ಮಾಲೀಕರಿರುವುದು ಗೊತ್ತಿದ್ದರೂ ಸಕಲ ಸಲಕರಣೆಗಳೊಂದಿಗೆ ದರೋಡೆಗೆ ಬಂದಿದ್ದ ಇವರು ಟೆರೆಸ್ ಮೇಲಿನಿಂದ ಮನೆಯೊಳಗೆ ಇಳಿದಿದ್ದರು. ಮನೆಯೊಳಗೆ ಐವರು ನುಗ್ಗಿದ್ದು, ಉಳಿದಿಬ್ಬರು ರೋಡ್‌ನಲ್ಲಿ ನಿಂತು ಯಾರಾದರೂ ಬರ್ತಾರಾ ಎಂದು ಕಾವಲಿಗಿದ್ದರು.
ಇದನ್ನೂ ಓದಿ | Crime news | ಫೇಸ್‌ಬುಕ್ ಸುಂದರಿಗಾಗಿ ಪತ್ನಿಗೆ ವಿಷ ಹಾಕಿದ ಪತಿರಾಯ
ದರೋಡೆಕೋರರು ಮನೆಗೆ ನುಗ್ಗಿರುವ ಅರಿವಿಲ್ಲದೆ ಎಂದಿನಂತೆ 5 ಗಂಟೆಗೆ ನಿದ್ರೆಯಿಂದೆದ್ದ ಮನೆ ಮಾಲೀಕರ ಮಗ ರಾಹುಲ್, ತಂದೆಗೆ ಟೀ ಮಾಡಿಕೊಡಲು ಕಿಚನ್‌ಗೆ ಹೋಗುತ್ತಿದ್ದಂತೆ, ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳು ಕಣ್ಣಿಗೆ ಬಿದ್ದಿದ್ದವು. ಅನುಮಾನ ಮೂಡಿ, ಮನೆಗೆ ಯಾರೋ ಪ್ರವೇಶಿಸಿರಬಹುದು ಎಂದು ಆತಂಕಗೊಂಡು ಮೊಬೈಲ್‌ನಲ್ಲಿ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾನೆ. ಆಗ, ಮನೆಯ ಮೂಲೆ ಮೂಲೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ನಿಂತಿದ್ದ ದರೋಡೆಕೋರರು ಕಣ್ಣಿಗೆ ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಹುಡುಗ ಮೆಲ್ಲಗೆ ದರೋಡೆಕೋರರು ಒಂದು ಕೋಣೆಗೆ ಹೋಗುವುದನ್ನೇ ಕಾಯುತ್ತಿದ್ದು, ಮೂವರು ದರೋಡೆಕೋರರನ್ನು ರೂಮಿನಲ್ಲಿ ಕೂಡಿಹಾಕಿ ಡೋರ್ ಲಾಕ್ ಮಾಡಿದ್ದ. ಬಳಿಕ ಮತ್ತೊಂದು ರೂಂಗೆ ತೆರಳಿ 112ಕ್ಕೆ ಕರೆ ಮಾಡಿದ್ದ.
ಕರೆ ಬಂದ ಹತ್ತು ನಿಮಿಷಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ತಲಘಟ್ಟಪುರ ಪೊಲೀಸರು ಮನೆ ಸುತ್ತುವರಿದು ಆರೋಪಿಗಳನ್ನು ಬಂಧಿಸಿದ್ದಾರೆ. ಮಾರಕಾಸ್ತ್ರಗಳು ಪೊಲೀಸರ ವಶವಾಗಿವೆ. ಆರೋಪಿಗಳ ಎಂಟ್ರಿ, ಕಾರ್ಯಾಚರಣೆ, ಮಗನ ಓಡಾಟ, ಆರೋಪಿಗಳನ್ನು ಲಾಕ್ ಮಾಡಿದ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬಂಧಿತ ಆರೋಪಿಗಳ ಮಾಹಿತಿ ಮೇರೆಗೆ ಸದ್ಯ ಏಳು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ತಲಘಟ್ಟಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | Crime news | ಗುಂಡೇಟಿನಿಂದ ಹತ್ಯೆ | ಮೀನುಬೇಟೆ ವೇಳೆ ಕೊಲೆ ಮಾಡಿದ ಆರೋಪಿಗಳ ನಾಟಕ ಬಯಲು