ಬೆಂಗಳೂರು: ಬ್ಯಾಂಕ್‌ನ ನಕಲಿ ಐಡಿ ಸೃಷ್ಟಿ ಮಾಡಿಕೊಂಡು ಅದರ ಮೂಲಕ ಆನ್‌ಲೈನ್‌ನಲ್ಲಿ (cyber crime) ಒಂದು ಲಕ್ಷ ರೂಪಾಯಿ ಗುಳುಂ ಮಾಡಿದ ಪ್ರಕರಣ ನಡೆದಿದೆ. ನಿವೃತ್ತ ಯೋಧರೊಬ್ಬರು ಹೀಗೆ ‘ಮೋಸ’ ಹೋಗಿದ್ದಾರೆ.
ಮೋಸ ಮಾಡಲೆಂದೇ MOSA1122@SBI ಎಂಬ ಯುಪಿಐ ಐಡಿಯನ್ನು ವಂಚಕರು ಸೃಷ್ಟಿಸಿಕೊಂಡಿದ್ದಾರೆ. ಇವರು ಫೋನ್ ಮಾಡುತ್ತಾರೆ, ಅಕೌಂಟ್ ಚೆಕ್ ಮಾಡು ಅನ್ನುತ್ತಾರೆ. ಅವರು ಹೇಳಿದಂತೆ ಬ್ಯಾಂಕ್ ಅಪ್ಲಿಕೇಶನ್ ಓಪನ್ ಮಾಡುತ್ತಿದ್ದಂತೆ ಹಣ ಮಂಗಮಾಯವಾಗುತ್ತದೆ. ನಿವೃತ್ತ ಯೋಧರಿಗೆ ಹೀಗೆ ಹಂತ ಹಂತವಾಗಿ 1 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ.
ಮಹೇಶ್ ವಂಚನೆಗೊಳಗಾದ ನಿವೃತ್ತ ಯೋಧ. ಇವರು ಅಮೇಜಾನ್ ತಾಣದಲ್ಲಿ 5499 ರೂ. ಮೌಲ್ಯದ ಸ್ಪೀಕರ್ ಬುಕ್ ಮಾಡಿದ್ದರು. ನಂತರ ಬುಕಿಂಗ್ ಕ್ಯಾನ್ಸಲ್ ಆಗಿತ್ತು. ಮೂರು ದಿನದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗುತ್ತೆ ಎಂಬ ಸಂದೇಶ ಕೂಡ ಬಂದಿತ್ತು. ಹಣ ಜಮೆ ಆಗದಿದ್ದಾಗ ಮಹೇಶ್ ಗೂಗಲ್‌ನಲ್ಲಿ ಹೆಲ್ಪ್ ಲೈನ್ ನಂಬರ್ ಹುಡುಕಿದ್ದರು.
ಅದಕ್ಕೆ ಕರೆ ಮಾಡಿದ ಬಳಿಕ ಮತ್ತೊಂದು ನಂಬರ್‌ನಿಂದ ವಂಚಕರ ಕರೆ ಬಂದಿತ್ತು. RUSKDESK ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಓಕೆ ಬಟನ್ ಪ್ರೆಸ್ ಮಾಡುವಂತೆ ಹೇಳಿದರು. ಹಾಗೇ ಮಾಡಿದ ತಕ್ಷಣ ಅಕೌಂಟ್‌ನಿಂದ 81 ಸಾವಿರ ರೂ. ಹಣ ಕಡಿತಗೊಂಡಿದೆ. ಮತ್ತೆ ಕರೆ ಮಾಡಿ ವಿಚಾರಿಸಿದಾಗ, ತಪ್ಪಾಗಿ ನಂಬರ್ ಟೈಪ್ ಮಾಡಿದ್ದೀರಿ ಎಂದು ವಂಚಕ ನಂಬಿಸಿದ್ದ. ಹಣ ನಿಮ್ಮ ಖಾತೆಗೆ ಬರುತ್ತೆ ಎಂದು ಪದೆ ಪದೇ ಅಕೌಂಟ್ ಪರೀಕ್ಷಿಸಲು ಹೇಳಿದ್ದ. ಹೀಗೆ ಹಂತ ಹಂತವಾಗಿ 1 ಲಕ್ಷ ರೂ. ಹಣ ಅಕೌಂಟ್‌ನಿಂದ ಮಾಯವಾಗಿದೆ. ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಮಹೇಶ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Nisha narasapa: ಬಗೆದಷ್ಟು ಬೆಳಕಿಗೆ ಬರ್ತಿದೆ ನಿಶಾ ನರಸಪ್ಪ ಮಾಡಿರುವ ಮಹಾ ಮೋಸ!