Site icon Vistara News

D.K. Shivakumar : ಚುನಾವಣಾ ಅಫಿಡವಿಟ್‌ನಲ್ಲಿ ಡಿಕೆಶಿ ಘೋಷಿಸಿದ್ದೇನು? ದುಬೈ, ಲಂಡನ್‌ ಮನೆಗಳ ಉಲ್ಲೇಖವಿದೆಯೇ? ಕಂಟಕವಾಗುತ್ತ ಜಾರಕಿಹೊಳಿ ಆಡಿಯೊ?

yuva kranti DK Shivakumar speech

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇದೀಗ ಮತ್ತೊಂದು ಸುತ್ತಿನ ಆಡಿಯೊ, ವಿಡಿಯೊ, ಸಿಡಿ ಸಮರ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಬಿಡುಗಡೆ ಮಾಡಿರುವ 18 ಸೆಕೆಂಡ್‌ ವಿಡಿಯೋದಿಂದ ಡಿ.ಕೆ. ಶಿವಕುಮಾರ್‌ (D.K. Shivakumar) ಅವರಿಗೆ ಮತ್ತಷ್ಟು ಸಂಕಷ್ಟ ಎದುರಾವಗುವ ಸಾಧ್ಯತೆಯಿದೆ.

ತಮ್ಮ ವಿರುದ್ಧ ಸಿಡಿಯನ್ನು ಬಿಡುಗಡೆ ಮಾಡಿ ರಾಜಕೀಯ ಜೀವನವನ್ನು ಮುಗಿಸಿದ್ದು ಡಿ.ಕೆ. ಶಿವಕುಮಾರ್‌ ಎಂದು ಸೋಮವಾರ ಬೆಳಗ್ಗೆ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ರಮೇಶ್‌ ಜಾರಕಿಹೊಳಿ ಆರೋಪಿಸಿದ್ದರು. ತಮ್ಮನ್ನು ಮುಗಿಸಲು ಡಿ.ಕೆ. ಶಿವಕುಮಾರ್‌ ಸಂಚು ರೂಪಿಸಿದ್ದರು ಎನ್ನುವುದನ್ನು ನಿರೂಪಿಸಲು 20 ಸಿಡಿಗಳಿವೆ ಎಂದು ಹೇಳಿದ್ದರು.ʼಕೆಲ ಹೊತ್ತಿನ ನಂತರ 18 ಸೆಕೆಂಡ್‌ನ ಆಡಿಯೊವನ್ನು ರಮೇಶ್‌ ಜಾರಕಿಹೊಳಿ ಬಿಡುಗಡೆ ಮಾಡಿದ್ದರು. ಡಿ.ಕೆ. ಶಿವಕುಮಾರ್‌ ಮಾತನಾಡಿದ್ದಾರೆ ಎನ್ನಲಾದ ಈ ಆಡೊಯೋದಲ್ಲಿ, “ನನಗೆ ದುಬೈಯಲ್ಲಿ ಮನೆ ಇದೆ, ಲಂಡನ್‌ನಲ್ಲಿ ಮನೆ ಇದೆ, ಮುಂಬೈಯಲ್ಲಿ ಫ್ಲಾಟ್‌ ಇದೆ. ನನ್ನ ಮನೆ ಮೇಲೆ ರೈಡ್‌ ಆದಾಗ 45 ಕೋಟಿ ರೂ. ಸಿಕ್ಕಿತ್ತು” ಎಂದು ಹೇಳುತ್ತಿರುವುದು ಕೇಳುತ್ತದೆ. ಮೇಲ್ನೋಟಕ್ಕೆ ಈ ಧ್ವನಿ ಡಿ.ಕೆ. ಶಿವಕುಮಾರ್‌ ಅವರದ್ದು ಎನ್ನುವಂತೆಯೇ ಇದೆ.

ಡಿ.ಕೆ.ಶಿವಕುಮಾರ್‌ ಘೋಷಿತ ಆಸ್ತಿ
ಚುನಾವಣೆಗೆ ಸ್ಪರ್ಧೆ ಮಾಡುವಾಗ ಪ್ರತಿಯೊಬ್ಬರೂ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು. ಹಾಗೇನಾದರೂ ಈ ಮಾಹಿತಿಯಲ್ಲಿ ತಪ್ಪು ಇದೆ ಎನ್ನುವುದು ನಿರೂಪಿತವಾದರೆ, ಶಾಸಕರಾಗಿ ಅಥವಾ ಸಂಸದರಾಗಿ ಆಯ್ಕೆಯಾಗಿದ್ದರೂ ಅದನ್ನು ರದ್ದುಪಡಿಸಲು ಅವಕಾಶವಿದೆ. 2018ರ ವಿಧಾನಸಭೆ ಚುನಾವಣೆಗೂ ಮುನ್ನವೂ ಡಿ.ಕೆ. ಶಿವಕುಮಾರ್‌ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಕೃಷಿ ಜಮೀನು, ಕೃಷಿಯೇತರ ಜಮೀನು, ವಾಣಿಜ್ಯ ಆಸ್ತಿ, ಅಪಾರ್ಟ್‌ಮೆಂಟ್‌ ಜತೆಗೆ ವಾಸದ ಮನೆಗಳ ವಿವರವನ್ನೂ ಘೋಷಿಸಿದ್ದಾರೆ. ದೆಹಲಿಯ ಕೃಷ್ಣನಗರ ಸ್ಟಾಫ್‌ ಕ್ವಾಟರ್ಸ್‌ನಲ್ಲಿ ಒಂದು, ಸಫ್ದರ್‌ಜಂಗ್‌ ಎನ್‌ಕ್ಲೇವ್‌ನಲ್ಲಿ ಎರಡು ಮನೆಗಳಿವೆ. ಬೆಂಗಳೂರಿನ ಕೆ.ಆರ್‌. ಪುರಂನಲ್ಲಿರುವ ಪೂರ್ವಾ ಎಂಐಡಿ ಟೌನ್‌ನಲ್ಲಿ ಒಟ್ಟು 52 ಫ್ಲಾಟ್‌ಗಳಿವೆ ಎಂದು ತಮ್ಮ ಅಫಿಡವಿಟ್‌ನಲ್ಲಿ ಶಿವಕುಮಾರ್‌ ಘೋಷಿಸಿದ್ದಾರೆ. 2018ರಲ್ಲಿ ಇವೆಲ್ಲದರ ಮಾರುಕಟ್ಟೆ ಮೌಲ್ಯ 56.84 ಕೋಟಿ ರೂ. ಅಂದು ಹೇಳಿದ್ದಾರೆ. ಅದರ ಹೊರತಾಗಿ ಶೋಭಾ ಇಂದ್ರಪ್ರಸ್ಥದಲ್ಲಿ ಎರಡು ಫ್ಲಾಟ್‌ನಲ್ಲಿ ಹೂಡಿಕೆಯಿದ್ದು, ಅದರ ಮೌಲ್ಯ 1.16 ಕೋಟಿ ರೂ. ಎಂದು ಹೇಳಿದ್ದಾರೆ.

ಪತ್ನಿ ಉಷಾ ಶಿವಕುಮಾರ್‌ ಹೆಸರಿನಲ್ಲಿ ವಿವಿಧೆಡೆ ಕೃಷಿ ಭೂಮಿ, ವಾಣಿಜ್ಯ ಕಟ್ಟಡಗಳಿವೆ. ಜತೆಗೆ ಬೆಂಗಳೂರಿನ ಹೈ ಪಾಯಿಂಟ್‌, ಕನಕಪುರದಲ್ಲಿ ತಲಾ ಒಂದು ಹಾಗೂ ಸದಾಶಿವನಗರದಲ್ಲಿ ಎರಡು ಮನೆಗಳಿವೆ. ಇದರ ಒಟ್ಟು ಮೌಲ್ಯ ೪೫.೨೬ ಕೋಟಿ ರೂ. ಎಂದು ಹೇಳಿದ್ದಾರೆ.

ಸಿಬಿಐ ವಿಚಾರಣೆಗೆ ಪುಷ್ಠಿ?
ಈಗಾಗಲೆ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಸಂಬಂಧ ಸಿಬಿಐ ವಿಚಾರಣೆ ನಡೆಯುತ್ತಿದೆ. ಈಗಾಗಲೆ ಒಮ್ಮೆ ಬಂಧನಕ್ಕೂ ಒಳಗಾಗಿದ್ದಾರೆ. ಜತೆಗೆ ಇಡಿ ವಿಚಾರಣೆಯೂ ನಡೆಯುತ್ತಿದೆ. ಇದ್ಯಾವುದರಲ್ಲೂ ತಾವು ಅಪರಾಧ ಎಸಗಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಅನೇಕ ಬಾರಿ ಹೇಳಿದ್ದಾರೆ. ಇದೀಗ ರಮೇಶ್‌ ಜಾರಕಿಹೊಳಿ ಬಿಡುಗಡೆ ಮಾಡಿರುವ ಆಡಿಯೊದಲ್ಲಿ ಹೇಳಿರುವ ಮುಂಬೈ, ದುಬೈ ಹಾಗೂ ಲಂಡನ್‌ ಆಸ್ತಿಗಳನ್ನು ಡಿ.ಕೆ. ಶಿವಕುಮಾರ್‌ ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ.

ಈಗ ಬಿಡುಗಡೆಯಾಗಿರುವ ಆಡಿಯೋ ಸಾಚಾತನ ಇನ್ನೂ ಪರಿಶೀಲನೆ ಆಗಬೇಕಿದೆ. ಹಾಗೇನಾದರೂ ಇದು ಅಸಲಿ ಆಡಿಯೊ, ಅದರಲ್ಲಿ ಮಾತನಾಡಿರುವುದು ಡಿ.ಕೆ. ಶಿವಕುಮಾರ್‌ ಎನ್ನುವುದು ಸಾಬೀತಾದರೆ ಮತ್ತಷ್ಟು ಸಂಕಷ್ಟಗಳು ಎದುರಾಗುವ ಸಾಧ್ಯತೆಯಿದೆ. ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಬೇಕು ಎಂದು ಈಗಾಗಲೆ ಆಗ್ರಹಿಸಿರುವ ರಮೇಶ್‌ ಜಾರಕಿಹೊಳಿ ಸಿಬಿಐ ಹಾಗೂ ಇಡಿಗೆ ಈ ಆಡಿಯೊವನ್ನು ನೀಡಿದರೆ ವಿಚಾರಣೆ ನಡೆಯುತ್ತದೆ.

ಇದು ಚುನಾವಣಾ ಸಮಯದಲ್ಲಿ ಮತ್ತಷ್ಟು ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಈ ಹಿಂದೆ ಬಂಧನವಾದಾಗ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ನಾಯಕರಷ್ಟೆ ಆಗಿದ್ದರು. ಇದೀಗ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಮುಂದೆ ನಡೆಯುವ ಘಟನಾವಳಿಗಳು ಚುನಾವಣಾ ಫಲಿತಾಂಶದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.

Exit mobile version