Site icon Vistara News

D.K. Shivakumar: ಯಡಿಯೂರಪ್ಪ ಕಣ್ಣೀರು ರಾಜ್ಯ ರಾಜಕಾರಣವನ್ನು ಬದಲಿಸಲಿದೆ: ಸಿ.ಟಿ. ರವಿ ಹೇಳಿಕೆ ಕುರಿತು ಡಿ.ಕೆ. ಶಿವಕುಮಾರ್ ಮಾತು

d k shivakumar says yediyurappas tears will change the politics of state

#image_title

ಬೆಂಗಳೂರು: ಬಿಜೆಪಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೇ ಹೈಕಮಾಂಡ್ ಆಗಿದ್ದು, ಅವರು ಯಡಿಯೂರಪ್ಪ ಅವರಿಗಿಂತ ಬಹಳ ದೊಡ್ಡವರಾಗಿದ್ದಾರೆ. ಹೀಗಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಟಿಕೆಟ್ ವಿಚಾರವಾಗಿ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K. Shivakumar) ತಿಳಿಸಿದ್ದಾರೆ.

ವಿಜಯೇಂದ್ರಗೆ ಶಿಕಾರಿಪುರ ಟಿಕೆಟ್ ನೀಡುವ ವಿಚಾರವಾಗಿ ಸಿ.ಟಿ ರವಿ ಅವರ ಹೇಳಿಕೆ ಕುರಿತು ಮಾಧ್ಯಮಗಳು ಸದಾಶಿವನಗರ ನಿವಾಸದ ಬಳಿ ಮಂಗಳವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಇದು ಬಿಜೆಪಿಯ ಆಂತರಿಕ ವಿಚಾರ. ಬಿಜೆಪಿಯಲ್ಲಿ ಬಹಳ ಹಿಂದಿನಿಂದ ಈ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಪಿತೂರಿ ನಡೆದಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಇದರಲ್ಲಿ ಕಾಂಗ್ರೆಸ್ ಪಾತ್ರವಿಲ್ಲ. ಜನ ಯಡಿಯೂರಪ್ಪ ಅವರ ಮುಖ ನೋಡಿ ಬಿಜೆಪಿಗೆ ಮತಹಾಕಿದ್ದರು. ಆದರೆ ಯಡಿಯೂರಪ್ಪ ಅವರ ಕಣ್ಣೀರು ರಾಜ್ಯ ರಾಜಕಾರಣದ ಚಿತ್ರಣ ಬದಲಿಸಲಿದೆ. ಸಿ.ಟಿ ರವಿ ಅವರು ಹೈಕಮಾಂಡ್ ಆಗಿದ್ದು, ಅವರು ಯಡಿಯೂರಪ್ಪ ಅವರಿಗಿಂತಲೂ ದೊಡ್ಡವರಾಗಿದ್ದಾರೆ. ಇದು ಆ ಪಕ್ಷದ ಆಂತರಿಕ ವಿಚಾರವಾಗಿದ್ದು, ಅವರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಹಾಲಿ ಸಚಿವರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ನಾನು ಈಗ ಏನನ್ನೂ ಹೇಳುವುದಿಲ್ಲ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ. ಈ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಆದರೆ ನಾನು ಯಾವುದೇ ಸಚಿವರ ಜತೆ ಸಂಪರ್ಕ ಮಾಡಿಲ್ಲ. ಆದರೆ ಹಾಲಿ ಶಾಸಕರುಗಳು ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳುತ್ತಿದ್ದು, ಆ ಕ್ಷೇತ್ರಗಳಲ್ಲಿ ನಮ್ಮದೇ ಪಕ್ಷದ ನಾಯಕರು ಕಾರ್ಯಕರ್ತರು ಇದ್ದಾರೆ. ಹೀಗಾಗಿ ಈಗ ಪಕ್ಷಕ್ಕೆ ಅವರ ಅಗತ್ಯವಿಲ್ಲ. ನಾವು ಕೆಲವು ಕ್ಷೇತ್ರಗಳ ಬಗ್ಗೆ ಮಾತ್ರ ಈ ವಿಚಾರವಾಗಿ ಚಿಂತನೆ ಮಾಡುತ್ತಿದ್ದು, ನಾವು ಈಗಲೇ ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದರು.

ರಮೇಶ್‌ ಜಾರಕಿಹೊಳಿ ಸಿ.ಡಿ ಬೆದರಿಕೆ ಆರೋಪದ ಬಗ್ಗೆ ಕೇಳಿದಾಗ, ‘ಈ ವಿಚಾರವಾಗಿ ಅವರೇ ಜನಸಾಮಾನ್ಯರಿಗೆ ಸ್ಪಷ್ಟನೆ ನೀಡಬೇಕು. ಬಿಜೆಪಿ ಇಂತಹ ನಾಯಕನ್ನು ಇಟ್ಟುಕೊಂಡು ಬಳಸಿಕೊಳ್ಳಲಿ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ’ ಎಂದರು.

ಇದನ್ನೂ ಓದಿ: Karnataka Politics: ವಿಸ್ತಾರ ವಿಶೇಷ: ಕಾಂಗ್ರೆಸ್‌ನ ʼಆಂತರಿಕ ಸಂದೇಶʼಗಳಿಂದ ಬಿಜೆಪಿ ಪಾಳೆಯದಲ್ಲಿ ಆತಂಕ

ಆಜಾನ್ ವಿಚಾರವಾಗಿ ಕೆ.ಎಸ್ ಈಶ್ವರಪ್ಪ ಹೇಳಿಕೆ ಹಾಗೂ ಇಂದು ಬಿಜೆಪಿ ಎಲ್ಲ ಮುಸಲ್ಮಾನರ ವಿರುದ್ದವಾಗಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ, ‘ಅವರು ತಮ್ಮ ರಾಜಕೀಯ ಅಸ್ತ್ರ ಬಳಸುತ್ತಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಸರ್ಕಾರದಿಂದ ಹೊರದಬ್ಬಲಾಗಿದೆ. ಅವರು ಭ್ರಷ್ಟಾಚಾರದ ನಾಯಕರಾಗಿದ್ದು, ಅವರು ಶಿವಮೊಗ್ಗ ಹಾಗೂ ಮಲೆನಾಡಿಗೆ ತಂದಿರುವ ಕಪ್ಪುಚುಕ್ಕೆಯಿಂದ ಆ ಭಾಗ ಚೇತರಿಸಿಕೊಳ್ಳಲು 20-30 ವರ್ಷಗಳೇ ಬೇಕಾಗುತ್ತದೆ. ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ಅಲ್ಲಿನ ಜನರಿಗೆ ಭ್ರಷ್ಟ ಮುಕ್ತ ಆಡಳಿತ, ವ್ಯಾಪಾರ ಸ್ನೇಹಿ ವಾತಾವರಣ ಕಲ್ಪಿಸುವ ಭರವಸೆ ನೀಡಿದ್ದಾರೆ. ಆಮೂಲಕ ಶಿವಮೊಗ್ಗದ ಪರಿಸ್ಥಿತಿ ಸರಿಯಾಗಿಲ್ಲ, ಹೀಗಾಗಿ ಯಾವುದೇ ಉದ್ಯಮಿಗಳು ಅಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆಬರುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಮಲೆನಾಡು ಭಾಗದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು, ಮೋದಿ ಅವರು, ಈಶ್ವರಪ್ಪನವರು ಏನೇ ಭಾಷಣ ಮಾಡಿದರೂ ಪ್ರಯೋಜನವಿಲ್ಲ’ ಎಂದು ತಿಳಿಸಿದರು.

ಸೋಮಣ್ಣ ಅವರ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸೋಮಣ್ಣ ಅವರು ನಮ್ಮ ತಾಲೂಕಿನವರು. ಧರ್ಮ ಹಾಗೂ ತಾಲೂಕಿನ ಕೆಲಸಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಅವರು ನಮ್ಮ ಊರಿಗೆ ಆಗಾಗ್ಗೆ ಬರುತ್ತಿರುತ್ತಾರೆ. ನಮ್ಮಿಬ್ಬರ ನಡುವೆ ಬಾಂದವ್ಯವಿದೆ. ರಾಜಕಾರಣವೇ ಬೇರೆ, ಬಾಂದವ್ಯವೇ ಬೇರೆ. ಅವರು ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ನಾನು ಹೇಳಿಲ್ಲ.ನಾವು ನಮ್ಮ ಕೆಲಸ ಮಾಡಿಕೊಂಡು ಇದ್ದೇವೆ. ನಾವು ಬೆಳಗಾವಿ ಅಧಿವೇಶನ ಮುಗಿಸಿಕೊಂಡು ವಿಮಾನದಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದೆವು. ಆಗ ತೆಗೆದಿರುವ ಫೋಟೋ. ಅವರ ಪಕ್ಕದಲ್ಲಿ ಕೂತಿರುವುದರಲ್ಲೇನಿದೆ’ ಎಂದು ತಿಳಿಸಿದರು.

Exit mobile version