ಬೆಂಗಳೂರು: ಆದಾಯಕ್ಕಿಂತ ಶೇ.31.71 ಹೆಚ್ಚುವರಿ ಅಕ್ರಮ ಆಸ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಎಚ್.ಎಸ್.ಆರ್.ಲೇಔಟ್ ಬಿಬಿಎಂಪಿ ಸಹಾಯಕ ಕಂದಾಯಾಧಿಕಾರಿಗಳ ಕಚೇರಿಯ ಮೌಲ್ಯಮಾಪಕರೊಬ್ಬರಿಗೆ 4 ವರ್ಷ ಕಠಿಣ ಜೈಲುಶಿಕ್ಷೆ ಮತ್ತು 40 ಲಕ್ಷ ರೂಪಾಯಿ ದಂಡ ವಿಧಿಸಿ ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಮತ್ತು ವಿಶೇಷ ನ್ಯಾಯಾಧೀಶ ಕೆ.ಲಕ್ಷ್ಮೀನಾರಾಯಣಭಟ್ ತೀರ್ಪು ನೀಡಿದ್ದಾರೆ.
ಆರ್.ಪ್ರಸನ್ನಕುಮಾರ್ ಶಿಕ್ಷೆಗೊಳಪಟ್ಟವರು. ಇವರ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಅಕ್ರಮ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರ ಅನ್ವಯ 2013ರ ಡಿಸೆಂಬರ್ 19ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಪೊಲೀಸರು 2013ರ ಡಿಸೆಂಬರ್ 20ರಂದು ಇವರ ಮನೆ ಶೋಧನಾ ಕಾರ್ಯ ಕೈಗೊಂಡು ಪರಿಶೀಲನೆ ನಡೆಸಿದ್ದರು. ಈ ವೇಳೆ ಬಲ್ಲ ಮೂಲಗಳ ಆದಾಯಕ್ಕಿಂತ 26,39,238.21 ರೂಪಾಯಿ ಎಂದರೆ ಶೇ.31.71 ಅಕ್ರಮ ಆಸ್ತಿ ಹೊಂದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಶನಿವಾರ ಪ್ರಕರಣದ ವಿಚಾರಣೆ ಮುಕ್ತಾಯವಾಗಿದ್ದು, ಆರೋಪಿಗೆ 4 ವರ್ಷ ಕಠಿಣ ಜೈಲುಶಿಕ್ಷೆ ಮತ್ತು 40 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 4 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಇದನ್ನೂ ಓದಿ | Lokayukta Raid | ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಜೆಸ್ಕಾಂ ಅಧಿಕಾರಿ