ಬೆಂಗಳೂರು: ವಿಚ್ಛೇದನದ (Divorce Case) ಬಳಿಕ ಮಾಜಿ ಪತಿಯಿಂದ ಮಹಿಳೆಯೊಬ್ಬರು ದುಬಾರಿ ಜೀವನಾಂಶ ಕೇಳಿದ್ದಾರೆ. ವಿಚ್ಛೇದನ ನೀಡಿದ ಪತಿಯಿಂದ ತಿಂಗಳಿಗೆ 6,16,000 ರೂ. ಜೀವನಾಂಶ ನೀಡುವಂತೆ ಮನವಿ ಮಾಡಿದ್ದಾರೆ. ಲಕ್ಷ ಲಕ್ಷ ಜೀವನಾಂಶಕ್ಕೆ ಡಿಮ್ಯಾಂಡ್ ಮಾಡಿದ ಪತ್ನಿಯ ನಡೆಗೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಐಷಾರಾಮಿ ಜೀವನಕ್ಕಾಗಿ ಖರ್ಚು ಮಾಡಲು ಭಯಸಿದರೆ ಆಕೆಯೇ ದುಡಿದು ಖರ್ಚು ಮಾಡಿಲಿ ಎಂದು ಹೈಕೋರ್ಟ್ ಕಿಡಿಕಾರಿದೆ. ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿರುವ ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ವಿಚ್ಛೇದಿತ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಲಲಿತಾ ಕನ್ನೆಘಂಟಿ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿತ್ತು. ಅರ್ಜಿ ವಿಚಾರಣೆ ವೇಳೆ ವಕೀಲ ಆಕರ್ಷ್ ಕನಾಡೆ ಮಹಿಳೆಯ ಪರ ವಾದ ಮಾಡಿದ್ದರು. ಕೌಟುಂಬಿಕ ನ್ಯಾಯಾಲಯ ಪ್ರತಿ ತಿಂಗಳು 50 ಸಾವಿರ ಜೀವನಾಂಶ ನಿಗದಿ ಮಾಡಿದೆ. ಆದರೆ ಮಹಿಳೆಯ ತಿಂಗಳ ಖರ್ಚು 6ಲಕ್ಷ ರೂ. ಗೂ ಮೀರಿದೆ. ಹೀಗಾಗಿ ಕನಿಷ್ಠ 5 ಲಕ್ಷ ರೂ. ಮಾಸಿಕ ಜೀವನಾಂಶ ಪಾವತಿಸಲು ಆದೇಶಿಸಿಬೇಕೆಂದು ವಾದ ಮಂಡಿಸಿದ್ದರು.
ಇದನ್ನೂ ಓದಿ: Dharwad university : ಗಗನಯಾನಕ್ಕೆ ಸಿದ್ಧವಾಗಿವೆ ಧಾರವಾಡ ಕೃಷಿ ವಿವಿಯ ನೊಣಗಳು!
ಮಹಿಳೆಯ ಊಟಕ್ಕೆ ತಿಂಗಳಿಗೆ 40,000, ಬಟ್ಟೆಬರೆಗಾಗಿ ರೂ.50,000 ಹಾಗೂ ಸೌಂದರ್ಯ ವರ್ಧಕ, ಔಷಧಿ, ಇತರೆ ವಸ್ತುಗಳ ಖರೀದಿಗೆ 60,000 ರೂ. ಹೀಗೆ ದೈನಂದಿನ ಖರ್ಚುಗಳು ಸೇರಿಸದಂತೆ ಪ್ರತಿ ತಿಂಗಳು 6 ಲಕ್ಷದ16 ಸಾವಿರ ರೂ. ಜೀವನಾಂಶ ಬೇಕಿದೆ ಎಂದು ಮನವಿ ಮಾಡಿದ್ದರು. ಇದಕ್ಕೆ ಹೈಕೋರ್ಟ್ ನಾಯಾಧೀಶೆ ತೀವ್ರ ಬೇಸರ ವ್ಯಕ್ತಪಡಿಸಿದರು.
ವಿಚ್ಛೇದಿತ ಮಹಿಳೆಯ ಪ್ರತಿ ತಿಂಗಳ ಖರ್ಚಿಗೆ 6,16,300 ರೂ. ಬೇಕೆ? ಪತಿ ಎಷ್ಟು ಸಂಪಾದನೆ ಮಾಡುತ್ತಿದ್ದಾರೆ ಎಂಬುದನ್ನು ಆಧರಿಸಿ ಪತ್ನಿಗೆ ಜೀವನಾಂಶ ನೀಡಲಾಗದು? ಆಕೆಯ ಅಗತ್ಯವೇನು? ಪತಿ 10 ಕೋಟಿ ರೂ. ಸಂಪಾದಿಸಬಹುದು ಹಾಗೆಂದ ಮಾತ್ರಕ್ಕೆ ನ್ಯಾಯಾಲಯವು ಆಕೆಗೆ 5 ಕೋಟಿ ರೂ. ಕೊಡಲು ಆದೇಶಿಸಲಾಗುತ್ತದೆಯೇ? ಒಬ್ಬ ಮಹಿಳೆ ತನಗಾಗಿ ತಿಂಗಳಿಗೆ ಇಷ್ಟು ಖರ್ಚು ಮಾಡುತ್ತಾರೆ ಎಂದಾದರೆ ಅವರೇ ಸಂಪಾದಿಸಲಿ” ಎಂದು ಚಾಟಿ ಬೀಸಿದರು.
ಅಷ್ಟೇ ಅಲ್ಲದೆ ಮಹಿಳೆ ತನ್ನ ಮಕ್ಕಳ ಪೋಷಣೆ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ. ಹೀಗಾಗಿ ವಾಸ್ತವಿಕ ವೆಚ್ಚಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಲು ಅವಕಾಶ ನೀಡಿ ಸೆಪ್ಟೆಂಬರ್ 9ಕ್ಕೆ ಹೈಕೋರ್ಟ್ ವಿಚಾರಣೆ ಮುಂದೂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ