Site icon Vistara News

DK Shivakumar: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಖಚಿತ; ಡಿಕೆಶಿ ನೇತೃತ್ವದ ನಿಯೋಗ ಸಿಎಂ ಭೇಟಿ

KPCC President dk shivakumar

ಬೆಂಗಳೂರು: ರಾಮನಗರ ಜಿಲ್ಲೆಯ (Ramanagara District) ಹೆಸರನ್ನು ಬದಲಾಯಿಸಲು ಡಿಸಿಎಂ ಡಿಕೆ ಶಿವಕುಮಾರ್‌ (DCM Dk Shivakumar) ಮುಂದಾಗಿದ್ದಾರೆ. ಇದರ ಮೊದಲ ಹಂತವಾಗಿ ಇಂದು ರಾಮನಗರ ಜಿಲ್ಲಾ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿ ಮಾಡಿ ಜಿಲ್ಲೆಯ ಹೆಸರು ಬದಲಾವಣೆಗೆ ಮನವಿ ಮಾಡಿದೆ.

ʼರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಮನವಿ ಮಾಡಲಾಗಿದೆʼ ಎಂದು ಸಿಎಂ ಭೇಟಿಯ ಬಳಿಕ ಡಿಕೆಶಿ ತಿಳಿಸಿದ್ದಾರೆ. “ನನ್ನ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿದ್ದೆವು. ನಾವೆಲ್ಲಾ ಬೆಂಗಳೂರಿನವರೇ. ಮೊದಲು ಬೆಂಗಳೂರು ಜಿಲ್ಲೆಗೇ ರಾಮನಗರ ಸೇರಿತ್ತು. ನಂತರ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ಈಗ ರಾಮನಗರ ಬದಲಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಿಸುವಂತೆ ಕೋರಲಾಗಿದೆ. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ” ಎಂದಿದ್ದಾರೆ ಡಿಕೆ ಶಿವಕುಮಾರ್.‌

“ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ಬಳಿಕ ಹೆಸರು ಬದಲಾವಣೆ ಆಗಲಿದೆ. ಈಗಿರುವ ರಾಮನಗರವೇ ಹೆಡ್ ಕ್ವಾರ್ಟರ್ ಆಗಿರಲಿದೆ. ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲ್ಲೂಕುಗಳು ಬೆಂಗಳೂರು ದಕ್ಷಿಣದ ವ್ಯಾಪ್ತಿಗೆ ಸೇರಲಿವೆ. ಈ ವಿಚಾರವನ್ನು ಕ್ಯಾಬಿನೆಟ್‌ನಲ್ಲಿಟ್ಟು ಚರ್ಚೆ ಮಾಡ್ತೀವಿ” ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಡಿಸಿಎಂ ಡಿಕೆಶಿ ನೇತೃತ್ವದ ರಾಮನಗರದ ನಿಯೋಗ ವಿಧಾನಸೌಧದ ಸಿಎಂ ಕಚೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಯಿತು. ಕನಕಪುರ- ರಾಮನಗರ ಮೆಡಿಕಲ್ ಕಾಲೇಜು ಮತ್ತು ರಾಮನಗರ ಜಿಲ್ಲಾ ಹೆಸರು ಬದಲಾವಣೆ ಸೇರಿದಂತೆ ಕ್ಷೇತ್ರದ ಹಲವು ವಿಚಾರಗಳ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲಾಯಿತು. ನಿಯೋಗದಲ್ಲಿ ಮಾಜಿ ಸಂಸದ ಡಿಕೆ ಸುರೇಶ್ (DK Suresh), ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಉಪಸ್ಥಿತರಿದ್ದರು. ಬಹುತೇಕ ಜಿಲ್ಲೆಯ ಹೆಸರು ಬದಲಾವಣೆಗೆ ಸಿಎಂ ಅಧಿಕೃತ ಮುದ್ರೆ ಹಾಕುವ ಸಾಧ್ಯತೆ ಇದೆ.

ʼರಾಮನಗರ ಮೊದಲೂ ಬೆಂಗಳೂರಿಗೇ ಸೇರಿತ್ತುʼ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ. “ಜಿಲ್ಲೆಯ ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ಸಿಎಂ ಭೇಟಿ ಆಗ್ತಾ ಇದ್ದೀವಿ. ಚನ್ನಪಟ್ಟಣ ಉಪ ಚುನಾವಣೆ ಸಹ ಇದೆ. ರಾಮನಗರ ಮೆಡಿಕಲ್ ಕಾಲೇಜ್, ಕನಕಪುರ ಮೆಡಿಕಲ್ ಕಾಲೇಜ್ ಸೇರಿದಂತೆ ಅಭಿವೃದ್ಧಿ ಕುರಿತು ಚರ್ಚೆ ಮಾಡ್ತೀವಿ. ರಾಮನಗರ ಹೆಸರು ಬದಲಾವಣೆ ಸಂಬಂಧ, ಈ ಮೊದಲೂ ಬೆಂಗಳೂರು ಜಿಲ್ಲೆಯಲ್ಲೇ ರಾಮನಗರ ಇತ್ತು” ಎಂದು ಹೇಳಿದ್ದಾರೆ.

ಚನ್ನಪಟ್ಟಣದಿಂದ ಡಿಕೆಶಿ ಸ್ಪರ್ಧೆ ವಿಚಾರ ಕುರಿತು, ʼಡಿಕೆಶಿ ತಂತ್ರ ನಮಗೂ ಗೊತ್ತಾಗಲ್ಲ, ನಿಮಗೂ ಗೊತ್ತಾಗಲ್ಲ. ಅವರ ತಂತ್ರಗಾರಿಕೆ ಏನಿದ್ಯೋ ನಮಗೆ ಗೊತ್ತಿಲ್ಲʼ ಎಂದು ರೆಡ್ಡಿ ಹೇಳಿದರು.

ʼನಮಗೆ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರು ಬೇಕುʼ ಎಂದು ರಾಮನಗರ ಮಾಜಿ ಶಾಸಕ ಸಿಸಿಎಂ ಲಿಂಗಪ್ಪ ಹೇಳಿದ್ದಾರೆ. “ರಾಮನಗರ ಕನಕಪುರ ಚನ್ನಪಟ್ಟಣ ಮಹಾಗಡಿ ಬೆಂಗಳೂರಿಗೆ ಅವಿನಾಭಾವ ಸಂಬಂಧವಿದೆ. ಪುರಾತನ ಸಂಬಂಧದ ಹೆಸರು ಉಳಿಸಿಕೊಳ್ಳಬೇಕು. ನಮಗೆ ಇನ್ನೇನೂ ಇಲ್ಲ, ‌ರಾಮನಗರವೇ ಕೇಂದ್ರ. ರಾಮನಗರವನ್ನು ಬೆಂಗಳೂರಿಗೆ ಸೇರಿಸುವುದಿಲ್ಲ. ಅದು ಪ್ರತ್ಯೇಕವಾಗಿ ಇರುತ್ತೆ, ನಮಗೆ ಹೆಸರು ಬೇಕು ಅಷ್ಟೆ” ಎಂದಿದ್ದಾರೆ.

ಇದನ್ನೂ ಓದಿ: Channapatna By Election: ಚನ್ನಪಟ್ಟಣದಲ್ಲಿ ನನ್ನ ಪತ್ನಿ ಸ್ಪರ್ಧಿಸಲ್ಲ: ಸಂಸದ ಡಾ.ಸಿ.ಎನ್. ಮಂಜುನಾಥ್‌ ಸ್ಪಷ್ಟನೆ

Exit mobile version