Site icon Vistara News

DK Shivakumar : ಕನ್ನಡದ ಹೆಸರಲ್ಲಿ ಆಸ್ತಿಪಾಸ್ತಿ ಹಾನಿ ಮಾಡಿದರೆ ಕಣ್ಣು ಮುಚ್ಚಿಕೊಂಡಿರಲು ಆಗಲ್ಲ: ಡಿಕೆಶಿ

DK Shivakumar Kannada Horata

ಬೆಂಗಳೂರು: “ನಾವೆಲ್ಲರೂ ಸೇರಿ ಕನ್ನಡವನ್ನು ಉಳಿಸಬೇಕು. ಕನ್ನಡಪರ ಹೋರಾಟಗಾರರ (Kannada Horata) ಮೇಲೆ ನಮಗೆ ಗೌರವವಿದೆ. ಹಾಗಂತ ಆಸ್ತಿ-ಪಾಸ್ತಿ ಹಾನಿ ಮಾಡಿದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಸದಾಶಿವ ನಗರ ನಿವಾಸ ಹಾಗೂ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ಕನ್ನಡ ನಾಮಫಲಕ ಕುರಿತ ಹೋರಾಟದ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

“ಕನ್ನಡ ಉಳಿಸಿ, ಬೆಳೆಸುವ ಹೋರಾಟಕ್ಕೆ ನಮ್ಮ ಅಭ್ಯಂತರವಿಲ್ಲ. ಹೋರಾಟದ ಹೆಸರಿನಲ್ಲಿ ಆಸ್ತಿಪಾಸ್ತಿ ಹಾನಿ ಮಾಡುವುದನ್ನು ನಾವು ಒಪ್ಪುವುದಿಲ್ಲ, ಸಹಿಸುವುದೂ ಇಲ್ಲ. ಇದರಿಂದ ಕರ್ನಾಟಕದ ಗೌರವ, ಘನತೆಗೆ ಧಕ್ಕೆಯಾಗುತ್ತದೆ. ಕಾನೂನು ಪಾಲನೆ ಎಲ್ಲರ ಕರ್ತವ್ಯ. ನೀವು ಹೋರಾಟ ಮಾಡುವುದಾದರೆ ಮಾಡಿ, 60% ನಾಮಫಲಕ ಹಾಕಬೇಕು ಎನ್ನುವುದನ್ನು ಕೇಳಲು ಒಂದು ಇತಿಮಿತಿ ಇದೆ ಎಂದು ಡಿ.ಕೆ ಶಿವಕುಮಾರ್‌ ಹೇಳಿದರು.

ʻʻಈ ಹಿಂದೆ ಯಾರೋ ಒಬ್ಬರು ದೂರು ನೀಡಿದರು ಎಂದು ನಾರಾಯಣಗೌಡರ ಮೇಲೆ ಕೇಸ್ ದಾಖಲಾದಾಗ, ಅವರ ವಿರುದ್ಧ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಪೊಲೀಸ್ ಅಧಿಕಾರಿಗಳ ಜತೆ ನಾನೇ ಮಾತನಾಡಿದ್ದೆ. ಕನ್ನಡ ಕಡ್ಡಾಯ ಮಾಡಲು ನೋಟೀಸ್ ನೀಡೋಣ. ಆದರೆ ಕಾನೂನು ಕೈಗೆತ್ತಿಕೊಳ್ಳಬಾರದು. ನಾರಾಯಣಗೌಡರಿಗೆ ಈ ಮಾತನ್ನು ಇವತ್ತೂ ಹೇಳುತ್ತೇನೆ, ಮುಂದೆಯೂ ಹೇಳುತ್ತೇನೆʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬೇಕಿದ್ದರೆ ನಮ್ಮ ಮನೆ ಮುಂದೆಯೂ ಪ್ರತಿಭಟನೆ ಮಾಡಲಿ

ಪ್ರತಿಭಟನೆ ಮಾಡಲಿ, ಧಿಕ್ಕಾರ ಕೂಗಲಿ. ನಾವು ತಪ್ಪು ಮಾಡಿದರೆ ನಮ್ಮ ಮನೆ ಮುಂದೆಯೂ ಬಂದು ಪ್ರತಿಭಟನೆ ಮಾಡಲಿ. ನಾವೂ ಕನ್ನಡಿಗರೇ. ಕನ್ನಡದ ಬಗ್ಗೆ ನಮಗೂ ಬದ್ಧತೆ ಇದೆ. ಸಚಿವ ಸಂಪುಟದಲ್ಲಿ ನಿಮ್ಮ ಟಿಪ್ಪಣಿಗಳೇನೆ ಇದ್ದರೂ ಕನ್ನಡದಲ್ಲೇ ಇರಬೇಕು ಎಂದು ಮುಖ್ಯಮಂತ್ರಿಗಳು ಸಚಿವರುಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಕನ್ನಡ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ.” ಎಂದು ಡಿ.ಕೆ. ಶಿವಕುಮಾರ್‌ ಹೇಲೀದರು.

ಹೊರಗಿನಿಂದ ಬಂದವರನ್ನು ಬೆದರಿಸಲು ಬಿಡಲ್ಲ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸುತ್ತೇವೆ ಎಂಬ ನಾರಾಯಣಗೌಡರ ಎಚ್ಚರಿಕೆ ವಿಚಾರವಾಗಿ ಕೇಳಿದಾಗ, “ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಕನ್ನಡಪರ ಹೋರಾಟಗಾರರ ಸಹಕಾರ ಇಲ್ಲ ಎಂದು ನಾನು ಹೇಳುವುದಿಲ್ಲ. ಹಾಗೆಂದು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಏನು ಬೇಕಾದರೂ ಮಾಡಲಿ. ಅವರು ತಪ್ಪು ಮಾಡಿದ್ದಾರೆ. ಕಾನೂನು ಕೈಗೆತ್ತಿಕೊಳ್ಳಲು ನಾವು ಬಿಡುವುದಿಲ್ಲ. ಅನೇಕರು ಇಲ್ಲಿ ಬಂದು ಬಂಡವಾಳ ಹೂಡಿಕೆ ಮಾಡಿದ್ದಾರೆ. ಹೊರಗಡೆಯಿಂದ ಬಂದವರು ಇಲ್ಲಿ ಬದುಕುತ್ತಿದ್ದಾರೆ. ಅವರಿಗೆ ಕನ್ನಡ ಬಳಕೆ ಬಗ್ಗೆ ಹೇಳೋಣ. ಹಾಗೆಂದು ಅವರನ್ನು ಬೆದರಿಸಲು ಅವಕಾಶವಿಲ್ಲ” ಎಂದು ತಿಳಿಸಿದರು.

ಅನೇಕರು ಕನ್ನಡ ನಾಮಫಲಕ ಹಾಕದಿರುವ ಬಗ್ಗೆ ಕೇಳಿದಾಗ, “ಯಾರೆಲ್ಲಾ ಕನ್ನಡ ನಾಮಫಲಕ ಹಾಕಿಲ್ಲ ಅವರಿಗೆ ನಾವು ನೊಟೀಸ್ ಜಾರಿ ಮಾಡುತ್ತೇವೆ” ಎಂದು ತಿಳಿಸಿದರು.

ಅನೇಕ ಅಂಗಡಿ ಮುಂಗಟ್ಟುಗಳು ಮುಚ್ಚಿರುವ ವಿಚಾರವಾಗಿ ಕೇಳಿದಾಗ, “ಎಲ್ಲಾ ವ್ಯಾಪಾರಿಗಳು ಸರ್ಕಾರದ ಆದೇಶ ಪಾಲನೆ ಮಾಡಬೇಕು. ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯವಾಗಿ ಬಳಸಬೇಕು. ಸರ್ಕಾರ ನಿಮ್ಮ ಹಾಗೂ ನಿಮ್ಮ ಹಿತಾಸಕ್ತಿ ಕಾಯಲು ಬದ್ಧವಾಗಿದೆ” ಎಂದು ಹೇಳಿದರು

ಕೋವಿಡ್‌ ಅಕ್ರಮದ ಬಗ್ಗೆ ಯತ್ನಾಳ್‌ ಹೇಳಿಕೆಗೆ ಸ್ವಾಗತ

ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಅಕ್ರಮ ಮಾಡಿತ್ತು ಎಂಬ ಯತ್ನಾಳ್ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, “ಇಲ್ಲಿ ಆ ವಿಚಾರ ಮಾತನಾಡುವುದು ಬೇಡ. ನಾವು ಅದೇ ವಿಚಾರವಾಗಿ ಜನರ ಗಮನ ಸೆಳೆದಿದ್ದೆವು. ಈಗ ಅವರು ಸೆಳೆಯುತ್ತಿದ್ದಾರೆ. ಬಹಳ ಸಂತೋಷ. ಮುಂದೆ ಅದರ ಬಗ್ಗೆ ಚರ್ಚೆ ಮಾಡೋಣ.” ಎಂದರು.

Exit mobile version