Site icon Vistara News

BBMP Election | ಕರಡು ಮತದಾರರ ಪಟ್ಟಿ ಪ್ರಕಟ; ಆಕ್ಷೇಪಣೆ ಸಲ್ಲಿಸಲು ಅವಕಾಶ

BBMP

ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸಾರ್ವತ್ರಿಕ ಚುನಾವಣೆ ಸಿದ್ಧತೆ ( BBMP Election) ನಡೆಸುತ್ತಿದ್ದು, 243 ವಾರ್ಡ್ ವಾರು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.

ಈಗಾಗಲೇ, ವಿಧಾನಸಭಾ ಕ್ಷೇತ್ರವಾರು ಮತದಾರರ ಮಾಹಿತಿಯನ್ನು ವಾರ್ಡ್ ವಾರು ಪುನರ್ ವಿಂಗಡಿಸಿ ಪಾಲಿಕೆಯ ವಾರ್ಡ್ ವಾರು ಮತದಾರರ ಪಟ್ಟಿಯನ್ನು ಸಿದ್ದಗೊಳಿಸಿದೆ. ಈ ಪೈಕಿ ಪಾಲಿಕೆಯ 243 ವಾರ್ಡ್ ಗಳಲ್ಲಿ ಒಟ್ಟು 79,08,394 ಮತದಾರರಿದ್ದಾರೆ. ಅವರಲ್ಲಿ 41,09,496 ಪುರುಷರು ಮತದಾರರಾದರೆ 37,97,497 ಮಹಿಳಾ ಮತದಾರರಾಗಿದ್ದಾರೆ. 1,401 ಇತರೆ ಮತದಾರರಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಈ ಮತದಾರರ ಪಟ್ಟಿಯ ಕರಡು ಪ್ರತಿಯನ್ನು ವಲಯ ಜಂಟಿ ಆಯುಕ್ತರುಗಳ ಕಚೇರಿ ಆಯಾ ವ್ಯಾಪ್ತಿಯ ಮತದಾರರ ನೊಂದಣಾಧಿಕಾರಿ/ಸಹಾಯಕ ಮತದಾರರ ನೊಂದಣಾಧಿಕಾರಿ ಮತ್ತು ವಾರ್ಡ್ ಕಚೇರಿಗಳಲ್ಲಿ ಹಾಗೂ ಬಿಬಿಎಂಪಿಯ ವೆಬ್‌ ಸೈಟ್‌ನಲ್ಲಿ (http://www.bbmp.gov.in) ನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಚುನಾವಣೆ ಯಾವಾಗ?
ಬಿಬಿಎಂಪಿಯ ಚುನಾವಣೆ ನಡೆಸಲು ಇದ್ದ ಅಡ್ಡಿಗಳು ಒಂದೊಂದೇ ದೂರವಾಗುತ್ತಿದೆ. ಯಾವಾಗ ಚುನಾವಣೆ ನಡೆಯಬಹುದು ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚುನಾವಣಾ ಆಯುಕ್ತ ಬಸವರಾಜ್ 2022ರ ಅಂತ್ಯದೊಳಗೆ ಚುನಾವಣೆ ನಡೆಯಲಿದೆ ಎಂದಷ್ಟೇ ಹೇಳಿದ್ದಾರೆ.
ನ್ಯಾಯಾಲಯಕ್ಕೆ ಯಾವುದೇ ಆಕ್ಷೇಪಣೆ ಸಲ್ಲಸಿದರೂ ಅದು ಚುನಾವಣೆಗೆ ಅಡ್ಡಿಯಾಗುವ ಸಾಧ್ಯತೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮತದಾನ ನಡೆಯುವಾಗ ಹೆಸರು ಬಿಟ್ಟಿರುವ ಬಗ್ಗೆ ಚರ್ಚೆ ಬೇಡ. ಈಗಾಗಲೇ ಕರಡು ಪಟ್ಟಿ ಪ್ರಕಟಣೆಯಾಗಿರುವುದ ರಿಂದ ಹೆಸರು ಬಿಟ್ಟಿದ್ದರೆ ಗಮನಿಸಿ ಕೂಡಲೇ ಮಾಹಿತಿ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.
ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್‌ ಮಾಡಿಕೊಳ್ಳುವಂತೆ ಮನವಿ ಮಾಡಿದ್ದರೂ ಸರಿಯಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದ ವಿಶೇಷ ಆಯುಕ್ತ ರಂಗಪ್ಪ, 28 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಶೇ.3ರಷ್ಟು ಮತದಾರರು ಮಾತ್ರ ಆಧಾರ್‌ ಲಿಂಕ್‌ ಮಾಡಿದ್ದಾರೆ. ಚಿಕ್ಕ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮತದಾರರು ಈ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮತದಾರರು ತಮ್ಮ ಹಾಗೂ ಕುಟುಂಬದ ಮಾಹಿತಿಯನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು (Claims and Objections) ಸೆಪ್ಟೆಂಬರ್‌ ೨ ರ ಒಳಗೆ ಸಂಬಂಧಪಟ್ಟ ವ್ಯಾಪ್ತಿಯ ಮತದಾರರ ನೊಂದಣಾಧಿಕಾರಿಗಳ ಕಚೇರಿಗಳಲ್ಲಿ ಸಲ್ಲಿಸಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೊಸದಾಗಿ ಮತದಾರರಾಗಿ ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಆಸಕ್ತರು ಮೊಬೈಲ್ ಆ್ಯಪ್ (Voter Helpline App) ಮತ್ತು NVSP Portal ವೆಬ್‌ಸೈಟ್ ಮೂಲಕ ವಿಧಾನಸಭಾ ಕ್ಷೇತ್ರವಾರು ಅರ್ಜಿ ಸಲ್ಲಿಸಿದ್ದಲ್ಲಿ ಮುಂದಿನ ಹಂತದಲ್ಲಿ ಪರಿಶೀಲಿಸಿ ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಸಿದ್ಧಗೊಳಿಸಲು ಕ್ರಮವಹಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

2010 ರಲ್ಲಿ ನಡೆದ ಚುನಾವಣೆಯಲ್ಲಿ ಶೇ. 44ರಷ್ಟು ಮತದಾನವಾಗಿತ್ತು. 2015 ರಲ್ಲಿ ಶೇ. 49% ರಷ್ಟಾಗಿತ್ತು. 2017 ರಲ್ಲಿ ಮುಂಬೈನಲ್ಲಿ ನಡೆದ ಚುನಾವಣೆಯಲ್ಲಿ 55 % ಮತದಾನ ಆಗಿತ್ತು. ಹೀಗಾಗಿ ಬೆಂಗಳೂರಿನಲ್ಲಿಯೂ ಮತದಾನ ಪ್ರಮಾಣ ಹೆಚ್ಚಿಸಲು ಸಾಧ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

ಈ ವೇಳೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್, ಆಡಳಿತ ವಿಭಾಗದ ವಿಶೇಷ ಆಯುಕ್ತರು ಹಾಗೂ ಅಪರ ಜಿಲ್ಲಾ ಚುನಾವಣಾ ಅಧಿಕಾರಿ(ಕೇಂದ್ರ) ರಂಗಪ್ಪ, ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್, ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಹೊನ್ನಮ್ಮ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ| ಬಿಬಿಎಂಪಿ ಚುನಾವಣೆ | ಒಂದೇ ದಿನ ಮೂರೂ ಪಕ್ಷಗಳ ರಣಕಹಳೆ: ಚುನಾವಣಾ ಕಣ ಸಿದ್ಧತೆ ಆರಂಭ

Exit mobile version