Site icon Vistara News

Drunk Driving: ವಾಹನ ಚಾಲಕರೇ, ಕುಡಿದರೆ ಮನೆಯಲ್ಲೇ ಇರಿ, ರಸ್ತೆಗೆ ಬರಬೇಡಿ!

drunk driving check

ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳು (Road accident), ರೋಡ್‌ ರೇಜ್‌ (Road rage) ಪ್ರಕರಣಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು (Physical abuse) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ರಾತ್ರಿ ಮದ್ಯಪಾನ ಮಾಡಿ ರಸ್ತೆಗಿಳಿಯುವ (drunk driving) ವಾಹನ ಚಾಲಕರ ಮೇಲೆ ಕಠಿಣ ಕ್ರಮಕ್ಕೆ ಬೆಂಗಳೂರು ಟ್ರಾಫಿಕ್‌ ಪೊಲೀಸರು (Bangalore police, traffic police) ಮುಂದಾಗಿದ್ದಾರೆ.

ಮದ್ಯ ಸೇವಿಸಿ ವಾಹನ ಓಡಿಸುವವರಿಂದಲೇ ಹೆಚ್ಚಿನ ಅಪಘಾತಗಳು ಆಗುತ್ತಿವೆ. ಇದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ರಾತ್ರಿ ನಡೆದ ಅಪಘಾತಗಳ ತನಿಖೆ ನಡೆಸಿದಾಗ ಹೆಚ್ಚಿನ ಚಾಲಕರು ಮದ್ಯದ ಪ್ರಭಾವಕ್ಕೆ ಒಳಗಾಗಿರುವುದು ಗೊತ್ತಾಗಿದೆ. ಹೀಗಾಗಿ ಇಂತಹ ಘಟನೆಗಳಿಗೆ ಬ್ರೇಕ್ ಹಾಕಲು ಡಿಡಿ ಚೆಕ್ ಅನ್ನು ಮತ್ತೆ ಬಿಗಿಗೊಳಿಸಲಾಗುತ್ತಿದೆ.

ರಾತ್ರಿ 11.30ರಿಂದ ಬೆಂಗಳೂರು ಸಂಚಾರಿ ಪೊಲೀಸರು ಡಿಡಿ ಚೆಕ್‌ಗೆ ಮುಂದಾಗಿದ್ದಾರೆ. ನಿನ್ನೆ ಡಿಡಿ ಚೆಕ್ ಬಗ್ಗೆ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ ಅನುಚೇತ್ ಆದೇಶ ನೀಡಿದ್ದರು. ಪ್ರತೀ ಜಂಕ್ಷನ್‌ನಲ್ಲಿಯೂ ಓರ್ವ ಪಿಎಸ್ಐ ಹಾಗೂ ಮಹಿಳಾ ಸಿಬ್ಬಂದಿಯಿಂದ ಕಾರ್ಯಾಚರಣೆಗೆ ಸೂಚನೆ ಕೊಟ್ಟಿದ್ದರು. ಸಿಸಿಟಿವಿ ಇರುವ ಜಂಕ್ಷನ್‌ಗಳಲ್ಲಿ ಡಿಡಿ ಚೆಕ್ ಮಾಡಬೇಕು. ಪ್ರತೀ ಗುರುವಾರದಿಂದ ಭಾನುವಾರ ರಾತ್ರಿ ಡಿಡಿ ಚೆಕ್ ಮಾಡಲು ಸೂಚನೆ ಕೊಟ್ಟಿದ್ದರು. ಹೀಗಾಗಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಡಿಡಿ ಚೆಕ್ ಮಾಡಲಾಗುತ್ತಿದೆ.

ನಗರದಲ್ಲಿ ಹೆಚ್ಚಾಗುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ‌ ದೌರ್ಜನ್ಯ ನಿವಾರಣೆ ಹಾಗೂ ಮಿತಿ ಮೀರುತ್ತಿರುವ ರೋಡ್ ರೇಜ್ ಕೇಸ್‌ಗಳಿಗೆ ತಡೆ ಹಾಕಲು ನಗರ ಸಂಚಾರ ಪೊಲೀಸರಿಂದ ಹೆಚ್ಚಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರಾತ್ರಿ ಕರ್ತವ್ಯಕ್ಕೆ ಪ್ರತಿ ಠಾಣೆಯಲ್ಲೂ ಇಬ್ಬರು ಮಹಿಳಾ ಹೆಚ್‌ಸಿ ಹಾಗೂ ಪಿಸಿ ನಿಯೋಜನೆಗೆ ಸೂಚನೆ ನೀಡಲಾಗಿದೆ.

ಹಿರಿಯ ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ನಗರದ ಪ್ರಮುಖ ರೋಡ್ ಜಂಕ್ಷನ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ. ನಿನ್ನೆ ರಾತ್ರಿ ನಗರದಾದ್ಯಂತ ಒಟ್ಟು 8550 ವಾಹನ ಚಾಲಕರ ಡ್ರಂಕ್ ಆಂಡ್ ಡ್ರೈವ್ ಚೆಕಿಂಗ್ ಮಾಡಲಾಗಿದೆ. ಇದರಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 167 ಪ್ರಕರಣ ದಾಖಲಿಸಲಾಗಿದೆ.

ಕೊಲೆಯಲ್ಲಿ ಅಂತ್ಯವಾದ ರೋಡ್‌ ರೇಜ್‌

ಬೆಂಗಳೂರು: ರಾಜಧಾನಿಯಲ್ಲಿ ದಿನೇ ದಿನೆ ರೋಡ್ ರೇಜ್ (Road Rage) ಕೇಸ್‌ಗಳು ಹೆಚ್ಚಾಗುತ್ತಿವೆ ಎಂಬ ಕಳವಳದ ನಡುವೆಯೇ, ಇಂಥದೇ ಒಂದು ಪ್ರಕರಣದಲ್ಲಿ ರಸ್ತೆಯ ಮೇಲೆ ಒಂದು ಕೊಲೆ (Murder Case) ನಡೆದಿದೆ. ರೋಡ್‌ ರೇಜ್‌, ಮರ್ಡರ್‌ ಆಗಿ ಪರಿವರ್ತನೆ ಆಗಿದೆ. ಇಲ್ಲಿಯವರೆಗೆ ರಸ್ತೆ ಮೇಲೆ ಹಲ್ಲೆ ಪ್ರಕರಣ, ಗಲಾಟೆ ನಡೆದದ್ದನ್ನು ನಾವು ನೋಡಿದ್ದೇವೆ. ಆದರೆ ನಿನ್ನೆ ನಡೆದ ಒಂದು ರೋಡ್ ರೇಜ್ ಘಟನೆಯಿಂದ ಒಬ್ಬ ಯುವಕನ ಕೊಲೆಯಾಗಿದೆ.

ಇಲ್ಲಿ ರೋಡ್ ರೇಜ್‌ನಲ್ಲಿ ಕೊಲೆಯಾದವನು ಮಹೇಶ್ ಎಂಬಾತ. ಕೊಂದವನು ಅರವಿಂದ್. ವೃತ್ತಿಯಲ್ಲಿ ಡೆಲಿವರಿ ಬಾಯ್ ಆಗಿದ್ದ ಮಹೇಶ್ ಆತನ ಗೆಳೆಯರಾದ ಬಾಲಾಜಿ ಮತ್ತು ನಿಕಿಲ್ ಜೊತೆಗೆ ಟೀ ಕುಡಿಯಲು ಹೋಗಿದ್ದಾರೆ. ಟೀ ಕುಡಿದು ಬೈಕ್‌ನಲ್ಲಿ ರಸ್ತೆಯಲ್ಲಿ ಬರುತ್ತಿದ್ದಾಗ, ಅರವಿಂದ್‌ ಚಲಾಯಿಸುತ್ತಿದ್ದ ಕಾರು ಸ್ಪೀಡ್ ಆಗಿ ಬಂದಿದೆ. ಸೈಡ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹತ್ತಿರಕ್ಕೆ ಬಂದು ಹಾರ್ನ್ ಮಾಡಿದ್ದಾನೆ.

ಇದೇ ವೇಳೆ ಬೈಕು, ಕಾರ್‌ಗೆ ಸ್ವಲ್ಪ ಟಚ್ ಆಗಿದೆ ಎಂದು ಕಾರು ಚಾಲಕ ಅರವಿಂದ್ ಬೈಕ್ ಸವಾರರನ್ನು ವೇಗವಾಗಿ ಚೇಸ್ ಮಾಡಲು ಮುಂದಾಗಿದ್ದಾನೆ. ದಾರಿಯಲ್ಲಿ ಇಬ್ಬರು ಯುವಕರು ಮೇನ್ ರೋಡ್‌ನಿಂದ ಸಣ್ಣ ರೋಡ್‌ಗೆ ಬಂದಾಗ ಕೆಳಗೆ ಬಿದ್ದಿದ್ದಾರೆ. ಬೈಕ್ ಸವಾರನನ್ನು ಫಾಲೋ ಮಾಡಿ ವೇಗವಾಗಿ ಬಂದ ಕಾರು ಚಾಲಕ ಜಿ.ಕೆ.ವಿ.ಕೆ ಲೇಔಟ್‌ಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾನೆ. ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಮುಂದೆ ಇದ್ದ ಮನೆಗೆ ರಭಸವಾಗಿ ಬೈಕ್ ಗುದ್ದಿ ಸ್ಥಳದಲ್ಲೆ ಬೈಕ್‌ ಸವಾರ ಮಹೇಶ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Assault Case : ಬೆಂಗಳೂರಿನಲ್ಲಿ ನಿಲ್ಲದ ರೋಡ್‌ ರೇಜ್‌ ಕಿರಿಕ್‌; ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ

Exit mobile version