ಬೆಂಗಳೂರು: ಆನ್‌ಲೈನ್ ಮೂಲಕ ಸಾಲ ನೀಡುವ ಹಾಗೂ ಜನರನ್ನು ವಂಚಿಸುವ ಚೈನೀಸ್ ಮೊಬೈಲ್ ಆ್ಯಪ್ ಕಂಪನಿಗಳ ಬೆಂಗಳೂರು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ(ED) ಗುರುವಾರ ದಾಳಿ ನಡೆಸಿದೆ. ಚೀನಾದ ವ್ಯಕ್ತಿಗಳಿಂದ ನಿರ್ವಹಿಸಲ್ಪಡುತ್ತಿರುವ ಕಂಪನಿಗಳಿಗೆ ಸಂಬಂಧಿಸಿ ಬೆಂಗಳೂರಿನ ಆರು ಸ್ಥಳಗಳಲ್ಲಿ ದಾಳಿ ನಡೆದಿದ್ದು, ಪ್ರಸಿದ್ಧ ಆನ್‌ಲೈನ್ ವ್ಯವಹಾರಗಳ ಸಂಸ್ಥೆ ಪೇಟಿಎಂ, ರೇಜರ್‌ಪೇ ಸಹ ಸೇರಿವೆ.
ಈ ಕುರಿತು ಜಾರಿ ನಿರ್ದೇಶನಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಅಕ್ರಮ ಹಣ ಸಂಗ್ರಹಣೆ ನಿಷೇಧ ಕಾಯ್ದೆ(PMLA) ಅಡಿಯಲ್ಲಿ ಚೈನೀಸ್ ಲೋನ್ ಆ್ಯಪ್ ವಿಚಾರವಾಗಿ ಬೆಂಗಳೂರಿನ ಆರು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಇಡಿ ತಿಳಿಸಿದೆ.
ಚೈನೀಸ್ ಲೋನ್ ಆ್ಯಪ್‌ಗಳ ಮೂಲಕ ವಂಚನೆಗೆ ಒಳಗಾಗಿರುವುದಾಗಿ ಬೆಂಗಳೂರಿನ ಸೈಬರ್ ಅಪರಾಧ ಸ್ಟೇಷನ್‌ಗಳಲ್ಲಿ ದಾಖಲಾಗಿದ್ದ ಒಟ್ಟು 18 ಎಫ್‌ಐಆರ್‌ಗಳ ಆಧಾರದಲ್ಲಿ ಈ ತಪಾಸಣೆ ನಡೆಸಲಾಗಿದೆ ಎಂದಿರುವ ಜಾರಿ ನಿರ್ದೇಶನಾಲಯ, ಈ ಕಂಪನಿಯ ನೂರಾರು ಜನರು ಸುಲಿಗೆ, ಬೆದರಿಕೆಯಂತಹ ಆರೋಪವನ್ನು ಹೊತ್ತಿದ್ದಾರೆ ಎಂದು ತಿಳಿಸಿದೆ.
ಈ ಕಂಪನಿಗಳು ಚೀನಾದ ವ್ಯಕ್ತಿಗಳಿಂದ ನಿಯಂತ್ರಣ ಹಾಗೂ ನಿರ್ವಹಣೆ ಮಾಡಲ್ಪಡುತ್ತಿವೆ ಎನ್ನುವುದು ತಿಳಿದುಬಂದಿದೆ. ಭಾರತೀಯರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಈ ಕಂಪನಿಗಳು ಅವರನ್ನು ಕಂಪನಿಯ ನಿರ್ದೇಶಕರನ್ನಾಗಿ ನೇಮಿಸುತ್ತವೆ. ಈ ಮೂಲಕ ಅಕ್ರಮ ಚಟುವಟಿಕೆ ನಡೆಸುವ ಮಾರ್ಗ ಹುಡುಕಿಕೊಂಡಿವೆ.
ಒಂದೇ ಕಂಪನಿಯು ವಿವಿಧ ಮಾರಾಟಗಾರರ ಐಡಿಯ ಮೂಲಕ ಹಾಗೂ ಖಾತೆಗಳ ಮೂಲಕ, ಜತೆಗೆ ಪೇಮೆಂಟ್ ಗೇಟ್‌ವೇ, ಬ್ಯಾಂಕ್‌ಗಳ ಮೂಲಕ ವ್ಯವಹಾರ ನಡೆಸುತ್ತಿದ್ದವು ಎಂದು ಇಡಿ ಆರೋಪಿಸಿದ್ದು, ರೇಜರ್‌ಪೇ ಪ್ರೈವೇಟ್ ಲಿಮಿಟೆಡ್, ಕ್ಯಾಶ್‌ಫ್ರೀ ಪೇಮೆಂಟ್ಸ್, ಪೇಟಿಎಂ ಪೇಮೆಂಟ್ ಸರ್ವೀಸಸ್ ಲಿಮಿಟೆಡ್ ಹಾಗೂ ಚೀನಾದ ವ್ಯಕ್ತಿಗಳಿಂದ ನಿಯಂತ್ರಣ ಹಾಗೂ ನಿರ್ವಹಿಸಲ್ಪಡುವ ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಹೇಳಿದೆ.
ಕಂಪನಿಗಳು ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ನೀಡಿದ ವಿಳಾಸವಲ್ಲದೆ ಬೇರೆ ಕಡೆ ಕಾರ್ಯನಿರ್ವಹಿಸುತ್ತಿದ್ದವು. ನಕಲಿ ವಿಳಾಸದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಗಳ ಮೇಲೆ ದಾಳಿ ವೇಳೆಯಲ್ಲಿ ಹಾಗೂ ಅವರ ಖಾತೆಗಳಿಂದ ಒಟ್ಟು 17 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಇನ್ನೂ ತಪಾಸಣೆ ಮುಂದುವರಿದಿದೆ ಎಂದು ಇಡಿ ತಿಳಿಸಿದೆ.
Loan Apps | ಸಾಲದ ಆ್ಯಪ್‌ಗಳಲ್ಲಿ ವಂಚನೆ ತಡೆಯಲು ಆರ್‌ಬಿಐನಿಂದ ಹೊಸ ನಿಯಮಾವಳಿ ಬಿಡುಗಡೆ
ನವದೆಹಲಿ ಪೊಲೀಸರು ಬಂಧಿಸಿದ್ದರು
ಚೀನಾ ಆ್ಯಪ್ ವಿಚಾರದಲ್ಲಿ ಅನೇಕ ಕಡೆಗಳಲ್ಲಿ ಕ್ರಮಗಳನ್ನು ಪೊಲೀಸರೂ ಕೈಗೊಳ್ಳುತ್ತಿದ್ದಾರೆ. ಸುಮಾರು ೧೦೦ ಲೋನ್ ಅಪ್ಲಿಕೇಷನ್‌ಗಳ ಮೂಲಕ (Loan App Fraud) ೫೦೦ ಕೋಟಿ ರೂ. ವಂಚಿಸಿದ್ದಲ್ಲದೆ, ಜನರ ವೈಯಕ್ತಿಕ ಮಾಹಿತಿಯನ್ನು ಚೀನಾಗೆ ನೀಡುತ್ತಿದ್ದ ಬೃಹತ್ ಜಾಲವೊಂದನ್ನು ಆಗಸ್ಟ್ 21 ರಂದು ನವದೆಹಲಿ ಪೊಲೀಸರು ಭೇದಿಸಿದ್ದರು. ದೇಶಾದ್ಯಂತ ೨೨ ಜನರನ್ನು ಬಂಧಿಸಿದ್ದ ಪೊಲೀಸರು ಕರ್ನಾಟಕ ಸೇರಿ ಹಲವೆಡೆ ವಂಚನೆ ಜಾಲ ವ್ಯಾಪಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಲಖನೌ ಮೂಲದ ಗ್ಯಾಂಗ್‌ನಿಂದ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದರು.
ಉತ್ತರ ಪ್ರದೇಶದಲ್ಲಿ ಕಾಲ್ ಸೆಂಟರ್ ತೆರೆದಿದ್ದ ದುಷ್ಕರ್ಮಿಗಳು ಜನರಿಗೆ ಕರೆ ಮಾಡಿ, ಈ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡರೆ ನಿಮಗೆ ಸಾಲ ನೀಡಲಾಗುವುದು ಎಂದು ಹೇಳುತ್ತಿದ್ದರು. ಜನ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ಅವರಿಂದ ವೈಯಕ್ತಿಕ ಮಾಹಿತಿ ಪಡೆಯಲು Access ಪಡೆಯುತ್ತಿದ್ದರು. ಸಾಲ ನೀಡಿದ ಬಳಿಕ ಜನರಿಂದ ಪಡೆದ ವೈಯಕ್ತಿಕ ಮಾಹಿತಿ, ಫೋಟೊ, ವಿಡಿಯೊ ತಿರುಚಿ, ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಹೆದರಿಸುತ್ತಿದ್ದರು. ಮರ್ಯಾದೆಗೆ ಹೆದರಿ ಜನ ಇವರ ಖಾತೆಗಳಿಗೆ ಲಕ್ಷಾಂತರ ರೂ. ಜಮೆ ಮಾಡುತ್ತಿದ್ದರು. ಇಂತಹ ಜಾಲದ ಮೇಲೆ ಎರಡು ತಿಂಗಳಿಂದ ನಿಗಾ ಇಟ್ಟಿದ್ದ ದೆಹಲಿ ಪೊಲೀಸರು, ದೇಶದ ಹಲವೆಡೆ ೨೨ ಮಂದಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | Loan Apps | ಸಾಲದ ಆ್ಯಪ್‌ಗಳಲ್ಲಿ ಗ್ರಾಹಕರ ರಕ್ಷಣೆಗೆ ಆರ್‌ಬಿಐ ಮಾರ್ಗದರ್ಶಿ ಬಿಡುಗಡೆ