ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆಯೊಬ್ಬರು (Electric shock) ಬಲಿಯಾಗಿದ್ದಾರೆ. ನೆಲಮಂಗಲ ಶಾಸಕ ಶ್ರೀನಿವಾಸ್ ಅವರ ಮನೆ ಸಮೀಪವೇ ಈ ದುರ್ಘಟನೆ ನಡೆದಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕನಹಳ್ಳಿ ಬಳಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಮಂಜಮ್ಮ (55) ಮೃತ ದುರ್ದೈವಿ.
ಮಂಜಮ್ಮ ಹಾಗೂ ಮತ್ತಿಬ್ಬರು ಮಹಿಳೆಯರು ಸೇರಿ ರಸ್ತೆ ಬದಿ ನಿಂತು ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ಹೈಟೆನ್ಷನ್ ವೈರ್ ಮಂಜಮ್ಮ ಮೇಲೆ ಬಿದ್ದಿದೆ. ಅಷ್ಟೇ ಏಕಾಏಕಿ ಬೆಂಕಿ ಕಿಡಿ ಹೊತ್ತುಕೊಂಡಿದ್ದು, ಕ್ಷಣಾರ್ಧದಲ್ಲೇ ಕರೆಂಟ್ ಶಾಕ್ ಹೊಡೆದಿದೆ. ಈ ವೇಳೆ ಮಂಜಮ್ಮ ಕೆಳಗೆ ಬಿದ್ದಿದ್ದು, ಬೆಂಕಿಯು ಹೊತ್ತಿ ಉರಿದಿದೆ. ಜತೆಗೆ ಇದ್ದ ಮಹಿಳೆಯು ಮಂಜಮ್ಮರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅವರಿಗೂ ಕರೆಂಟ್ ಶಾಕ್ ಹೊಡೆದಿದೆ. ಕೂಡಲೇ ಅಕ್ಕ-ಪಕ್ಕದ ಜನರು ಓಡಿ ಬಂದಿದ್ದು, ಮಹಿಳೆಯನ್ನು ಎಳೆದುಕೊಂಡು ರಕ್ಷಿಸಿದ್ದಾರೆ.
ಬಳಿಕ ನೋಡುನೋಡುತ್ತಿದ್ದಂತೆ ಮಂಜಮ್ಮ ಬೆಂಕಿಯಿಂದ ಸುಟ್ಟುಹೋಗಿದ್ದಾರೆ. ಇನ್ನು ಇದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥ
ಬೆಂಗಳೂರಿನ ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥಗೊಂಡಿದ್ದಾರೆ. ತಂದೆ, ತಾಯಿ ಸೇರಿ ಮಗು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮನೆಗೆ ಕೇಕ್ ತೆಗೆದು ಕೊಂಡು ಹೋಗಿದ್ದರು. ಮನೆಯಲ್ಲಿ ಪತ್ನಿ ಮತ್ತು ಮಗುವಿನ ಜತೆ ಸೇರಿ ಕೇಕ್ ತಿಂದಿದ್ದರು. ಕೇಕ್ ತಿಂದ ನಂತರ ಮೂವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.
ಕೂಡಲೇ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಪಿ ಅಗ್ರಹಾರ ಠಾಣೆ ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೇಕ್ ತಂದಿದ್ದು ಯಾವ ಬೇಕರಿಯಿಂದ? ಕೇಕ್‌ನಲ್ಲಿರೋ ಅಂಶಗಳಿಂದ ಅಸ್ವಸ್ಥರಾಗಿದ್ದಾರಾ ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ವೈದ್ಯರ ವರದಿಗಾಗಿ ಕಾಯುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ