ಧಾರವಾಡ : ಕಳೆದ ವಾರ ಬೆಂಗಳೂರಿನ ಕಾಡುಗೋಡಿ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಮೆಟ್ಟಿ ತಾಯಿ ಮತ್ತು ಮಗು (Mother and daughter died after Electricution) ಸುಟ್ಟು ಕರಕಲಾದ ಭೀಕರ ಘಟನೆಯ ಬೆನ್ನಿಗೇ ರಾಜ್ಯಾದ್ಯಂತ ಹಲವು ಕಡೆ ವಿದ್ಯುತ್ ದುರಂತದ (Electricution Case) ಹಲವು ಘಟನೆಗಳು ವರದಿಯಾಗುತ್ತಿವೆ. ಇದು ವಿದ್ಯುತ್ ಕಂಪನಿಗಳ (Electrical Company) ನಿರ್ಲಕ್ಷ್ಯದ ಜತೆಗೆ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆಯೂ ಗಮನ ಸೆಳೆದಿದೆ.
ಧಾರವಾಡದಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ಸಾವು
ಧಾರವಾಡ ನಗರದ ಮದಿಹಾಳ ಬಡಾವಣೆಯ ಸಿದ್ದರಾಮ ಕಾಲನಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಬಾಲಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ಶ್ರೇಯಸ್ ಶಿನ್ನೂರ(16) ಎಂಬಾತನೇ ಮೃತ ಬಾಲಕ.
ಶ್ರೇಯಸ್ ಸಂಜೆಯ ಹೊತ್ತು ಕಾಲೊನಿಯ ಇತರ ಗೆಳೆಯರೊಂದಿಗೆ ಸೇರಿ ಮನೆಯ ಟೆರೇಸ್ ಮೇಲೆ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದ. ಹೀಗೆ ಕ್ರಿಕೆಟ್ ಆಡುತ್ತಿದ್ದ ಶ್ರೇಯಸ್ ಕ್ಯಾಚ್ ಹಿಡಿಯಲೆಂದು ಪ್ರಯತ್ನಿಸುವ ವೇಳೆ ವಿದ್ಯುತ್ ತಂತಿ ತಗುಲಿದೆ.
ಕ್ಯಾಚ್ ಹಿಡಿಯಲು ಬಾಗಿದಾಗ ಮನೆಯ ಟೆರೇಸ್ ಪಕ್ಕದಲ್ಲಿ ಹಾದು ಹೋದ ವಿದ್ಯುತ್ ತಂತಿ ತಗುಲಿದೆ. ಇದರಿಂದ ತೀವ್ರ ಅಸ್ವಸ್ಥರಾದ ಶ್ರೇಯಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಶ್ರೇಯಸ್ ಜೊತೆಗಿದ್ದ ಗೆಳೆಯನಿಗೂ ಗಾಯವಾಗಿದ್ದು, ಆತನನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು
ಮಂಡ್ಯದ ಕಟ್ಟೆಕ್ಯಾತನಹಳ್ಳಿ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ಹುಲ್ಲು ಕೊಯ್ಯಲು ತೆರಳಿದ್ದ ರೈತರೊಬ್ಬರು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಸಾವಿಗೀಡಾಗಿರುವ ರೈತರನ್ನು ರವಿಕುಮಾರ್{43) ಎಂದು ಗುರುತಿಸಲಾಗಿದೆ.
ರಾಜೇನಹಳ್ಳಿ ಗ್ರಾಮದಲ್ಲಿ ವಾಸವಿದ್ದ ರವಿಕುಮಾರ್ ಅವರು ಕಟ್ಟೆಕ್ಯಾತನಹಳ್ಳಿ ಬಳಿ ಇರುವ ತಮ್ಮ ಜೀಮೀನಿನಲ್ಲಿ ಹುಲ್ಲು ಕೊಯ್ಯಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಕೆಆರ್ ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Electricution : ನೀರಿನ ಪಂಪ್ ಸ್ವಿಚ್ ಹಾಕಲು ಹೋದಾಗ ವಿದ್ಯುತ್ ಶಾಕ್, ಯುವಕ ಮೃತ್ಯು
ಎಚ್.ಡಿ ಕೋಟೆಯಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಆನೆ ಮಾಳದಲ್ಲಿ ರಸ್ತೆ ಕಾಮಗಾರಿ ವೇಳೆ ವಿದ್ಯುತ್ ತಗುಲಿ ಸಿದ್ದಪ್ಪಾಜಿ ರಸ್ತೆಯ ನಿವಾಸಿ ಪ್ರವೀಣ್ (27) ಮೃತಪಟ್ಟಿದ್ದಾರೆ. ರಸ್ತೆಯ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಂಕ್ರೀಟ್ ಸುರಿಯುವ ವೇಳೆ ವಿದ್ಯುತ್ ತಂತಿಗೆ ವಾಹನ ತಗುಲಿ ಅವಘಡ ಸಂಭವಿಸಿದೆ. ವಿದ್ಯುತ್ ಶಾಕ್ ತಗುಲಿ ಬಿದ್ದ ಪ್ರವೀಣ್‌ನನ್ನು ಕೇರಳದ ಮಾನಂದವಾಡಿ ಆಸ್ಪತ್ರೆಗೆ ಕರೆತರಲಾಗಿತ್ತು. ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಂತರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.