Site icon Vistara News

ಮಹದೇವಪುರದಲ್ಲಿ ಇಂದೂ ಮುಂದುವರಿಯಲಿದೆ ಆಪರೇಷನ್ ಬುಲ್ಡೋಜರ್, ಎಲ್ಲೆಲ್ಲಿ ಒತ್ತುವರಿ?

Encroachment

ಬೆಂಗಳೂರು: ನಿನ್ನೆ ಮಹದೇವಪುರದಲ್ಲಿ ನಡೆದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದು ಕೂಡ ಬಿರುಸಾಗಿ ನಡೆಯಲಿದೆ. ಹಲವು ಕಟ್ಟಡ, ಕಂಪೌಂಡ್‌ ತೆರವಾಗಲಿವೆ.

ಬೆಳಗ್ಗೆ 10.30ರ ನಂತರ ತೆರವು ಕಾರ್ಯ ಚುರುಕಾಗಲಿದೆ. ಪಾಲಿಕೆಯ ಒತ್ತುವರಿ ಕಾರ್ಯಕ್ಕೆ ಕಂದಾಗ ಇಲಾಖೆ, ಪೊಲೀಸ್ ಇಲಾಖೆ ಸಾಥ್ ನೀಡಲಿವೆ. ನಿನ್ನೆ ನಡೆದ ಒತ್ತುವರಿ ತೆರವು ಕಾರ್ಯಕ್ಕೆ ಅಪಾರ್ಟ್‌ಮೆಂಟ್‌ ನಿವಾಸಿಗಳಿಂದ ಸಾಕಷ್ಟು ಪ್ರತಿರೋಧವೂ ಬಂದಿತ್ತು. ಆದರೆ, ಈ ಬಾರಿಯ ಪ್ರವಾಹ ರಾಷ್ಟ್ರ ಮಟ್ಟದಲ್ಲಿ ನಗರಕ್ಕೆ ಕೆಟ್ಟ ಹೆಸರು ತಂದಿರುವುದರಿಂದ ಅಧಿಕಾರಿಗಳು ಹೆಚ್ಚು ಕಠಿಣವಾಗಿ ತಮ್ಮ ಕಾರ್ಯ ಮುಂದುವರಿಸಿದ್ದಾರೆ.

ಚಿನ್ನಪ್ಪನಹಳ್ಳಿಯಲ್ಲಿ ನಿನ್ನೆ ತೆರವು ಕಾರ್ಯ ಬಿರುಸಾಗಿ ನಡೆದಿತ್ತು. ಇಂದು ಮುಂದುವರೆದ ಭಾಗವಾಗಿ ಚೆನ್ನಪ್ಪನಹಳ್ಳಿ ಕೆರೆಯಿಂದ ಮುನೇನಕೊಳಲು ತನಕ ತೆರವು ಕಾರ್ಯಚರಣೆ ನಡೆಯುತ್ತಿದೆ‌. ಮತ್ತೆ ಮಹದೇವಪುರ ವ್ಯಾಪ್ತಿಯಲ್ಲಿ ಮಾರ್ಕಿಂಗ್ ಮಾಡಿ ತೆರವು ಕಾರ್ಯಚರಣೆ ಶುರುವಾಗುತ್ತದೆ. ಇಲ್ಲಿ ಸಾಲು ಸಾಲು ಬಿಲ್ಡಿಂಗ್‌ಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದು, 2.5ರಿಂದ 5 ಮೀಟರ್ ಸರ್ಕಾರಿ ಜಾಗವನ್ನು ರಾಜಕಾಲುವೆಗೆ ಬಿಡಬೇಕಿದೆ. ಇದರಲ್ಲಿ ಪ್ರಭಾವಿಗಳಿಂದ ಒತ್ತುವರಿಯಾದ ಜಾಗವೂ ಇದೆ. ಇದನ್ನೂ ತೆರವು ಮಾಡಿ ಒತ್ತುವರಿ ಜಾಗದಲ್ಲಿ ಬೃಹತ್ ನೀರುಗಾಲುವೆ ಕಾಂಪೌಂಡ್ ನಿರ್ಮಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುನೇನಕೊಳಲು, ಶಾಂತಿನಿಕೇತನ ಲೇಔಟ್, ಪಾಪರೆಡ್ಡಿ ಲೇಔಟ್, ಬೆಳ್ಳಂದೂರು ಸಕ್ರ ಆಸ್ಪತ್ರೆ ಹತ್ತಿರ ಇಂದು ತೆರವು ಕಾರ್ಯಾಚರಣೆ ನಡೆಯಲಿದೆ.

ಎಲ್ಲೆಲ್ಲಿ ಒತ್ತುವರಿಯಾಗಿದೆ?
• ಭಾಗಮನೆ ಟೆಕ್ ಪಾರ್ಕ್
• ಪೂರ್ವ ಪ್ಯಾರಡೈಸ್
• ಆರ್ ಬಿಡಿ,ವಿಪ್ರೋ
• ಇಕೋ ಸ್ಪೇಸ್
• ಗೋಪಾಲನ್ ಬೆಳ್ಳಂದೂರು
• ಸೊನ್ನೇನಹಳ್ಳಿ
• ಹೂಡಿ
• ಕೋಲಂಬಿಯಾ ಏಷಿಯಾ ಆಸ್ಪತ್ರೆ
• ನ್ಯೂ ಹಾರಿಜನ್ ಕಾಲೇಜ್
• ಆದರ್ಶ ರಿಟ್ರೀಟ್
• ಎಪಿಸ್ಲೋನ್ & ದಿವ್ಯಾಶ್ರೀ
• ಪ್ರೆಸ್ಟೀಜ್
• ಸೋಲಾರ್ ಪುರಿಯಾ
• ನಲಪಾಡ್ ಡವಲಪರ್ಸ್ ಸೇರಿ ಹಲವು ಕಂಪನಿಗಳಿಂದ ಒತ್ತುವರಿ

ಇದನ್ನೂ ಓದಿ | ಯಾರೇ ಭೂ ಒತ್ತುವರಿ ಮಾಡಿದ್ದರೂ ತೆರವು ಎಂದ ಸಿಎಂ ಬೊಮ್ಮಾಯಿ; ಐಟಿ ಕಂಪನಿಗಳಿಗೂ ಕಂಟಕ?

Exit mobile version